Advertisement

Kundapura: ಈ ದೇವಿಯ ಊರಲ್ಲಿ ತೊಟ್ಟಿಲೇ ಕಟ್ಟುವುದಿಲ್ಲ!

02:46 PM Oct 08, 2024 | Team Udayavani |

ಕುಂದಾಪುರ: ನದಿ, ಕಾಡಿನ ಪ್ರದೇಶಗಳಿಂದ ಆವೃತವಾದ ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ ನೆಲೆ ನಿಂತ ಈ ದೇವರ ಗುಡಿಗೆ ಮಾಡೇ ಇಲ್ಲ. ಈ ಊರಿನಲ್ಲಿ ಮಕ್ಕಳನ್ನು ಮಲಗಿಸಲೆಂದು ತೊಟ್ಟಿಲು ಕಟ್ಟುವಂತೆಯೂ ಇಲ್ಲ. ಈ ಊರಿನಲ್ಲಿ ದೇವಿ ಮಹಾತ್ಮೆ ಯಕ್ಷಗಾನವೂ ನಡೆಯುವುದಿಲ್ಲ.: ಇಂಥ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಕ್ಷೇತ್ರವೇ ಹಾಲಾಡಿ ಸಮೀಪದ ಹೈಕಾಡಿಯಿಂದ 2 ಕಿ.ಮೀ. ದೂರದ ಹಿಲಿಯಾಣ ಗ್ರಾಮದಲ್ಲಿರುವ ಶ್ರೀ ನಾಗೇರ್ತಿ (ನಾಗರತಿ) ಅಮ್ಮನವರ ದೇವಸ್ಥಾನ.

Advertisement

ಮಾಡಿಲ್ಲದ ಗರ್ಭಗುಡಿ
ದಟ್ಟ ಅಡವಿಯೊಳಗಿರುವ ಉದ್ಭವ ಮೂರ್ತಿಯ ಈ ನಾಗೇರ್ತಿ ದೇವಿಯ ಗರ್ಭಗುಡಿಗೆ ಮಾಡಿಲ್ಲ. ಇದಕ್ಕೆ ನಿರ್ದಿಷ್ಟ ಐತಿಹ್ಯ ಕಂಡು ಬಾರದಿದ್ದರೂ, ಮಾಡು ಮಾಡಿದರೆ ಒಂದೇ ದಿನದಲ್ಲಿ ನಿರ್ಮಿಸಿ, ಅದಕ್ಕೆ ಪ್ರತಿಷ್ಠೆ, ಪೂಜೆ ಎಲ್ಲವೂ ಆ ದಿನವೇ ಆಗಬೇಕು ಅನ್ನುವ ಕಾರಣಕ್ಕೆ ಹಿಂದಿನಿಂದಲೂ ಮಾಡು ನಿರ್ಮಿಸಲು ಮುಂದಾಗಿಲ್ಲ. ಕೆಲ ವರ್ಷಗಳ ಜೀರ್ಣೋದ್ಧಾರಕ್ಕೆ ಪ್ರಶ್ನೆ ಇಟ್ಟ ವೇಳೆಯೂ ಮಾಡು ಮಾಡುವಂತಿಲ್ಲ ಅನ್ನುವ ಅಭಿಪ್ರಾಯ ವ್ಯಕ್ತವಾಯಿತು. ಮಳೆ, ಬಿಸಿಲು, ಬೆಳದಿಂಗಳು ಉದ್ಭವ ದೇವಿ ಮೂರ್ತಿಯ ಮೇಲೆ ಸ್ಪರ್ಶವಾಗಬೇಕು ಅನ್ನುವ ನಂಬಿಕೆಯೂ ಇದೆ. ಶ್ರೀ ದುರ್ಗಾಪರರ್ಮೇಶ್ವರಿ, ಶ್ರೀ ನಾಗದೇವರು, ಶ್ರೀ ವೀರಭದ್ರ ಸ್ವಾಮಿಗೂ ಆರಾಧನೆ ನಡೆಯುತ್ತದೆ. ಸುಮಾರು 100 ಕ್ಕೂ ಮಿಕ್ಕಿ ನಾಗಶಿಲೆಗಳು ಇಲ್ಲಿವೆ.

ಮಡಿಕೆ ನೀರಿನಿಂದ ಪೂಜೆ
ದೇಗುಲ ಸನಿಹವೇ ವಾರಾಹಿ ಉಪನದಿ ಹರಿಯುತ್ತಿದ್ದು, ಅಲ್ಲಿಂದ ಮಣ್ಣಿನ ಕೊಡದಲ್ಲೇ ನೀರು ತಂದು ಪೂಜೆ ನಡೆಸುವುದು ಈಗಲೂ ಮುಂದುವರಿಯುತ್ತಿರುವ ಸಂಪ್ರದಾಯ. ಹಿಂದೆ ಕುಂಬಾರರು ಈ ಹಾದಿಯಲ್ಲಿ ಹೋಗುವಾಗ ಒಂದೊಂದು ಮಡಿಕೆ ಇಲ್ಲಿ ಇಟ್ಟು ಹೋಗುತ್ತಿದ್ದರಂತೆ. ಹಾಗಾಗಿ ಮಡಿಕೆಯಲ್ಲೇ ನೀರು ತರಲಾಗುತ್ತದೆ.

ತುಲಾ ಭಾರ ಇಷ್ಟದ ಸೇವೆ
ತುಲಾಭಾರ ದೇವರಿಗೆ ಇಷ್ಟದ ಸೇವೆ. ಕುಂಭ, ಮೀನ, ಮೇಷ, ವೃಷಭ ಮಾಸದಲ್ಲಿ ನೀಲಕಂಠ ಅಡಿಗರು ಪೂಜೆ ನೆರವೇರಿಸಿದರೆ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ತಿಂಗಳಲ್ಲಿ ರಾಮಕೃಷ್ಣ ಅಡಿಗರು, ತುಲಾ, ವೃಶ್ಚಿಕ, ಧನು, ಮಕರ ಮಾಸದಲ್ಲಿ 2 ಕುಟುಂಬಗಳು (ಗಿರೀಶ್‌ ಅಡಿಗರು, ಉಮೇಶ್‌ ಅಡಿಗರು, ಕಿರಾಡಿ ಕೆಳಾಬೈಲು ಗೋವಿಂದ ಭಟ್ಟರ ಮಕ್ಕಳು) ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ವಿಜಯ ಕುಮಾರ್‌ ಶೆಟ್ಟಿ ಆಡಳಿತ ಮೊಕ್ತೇಸರರು.

ನಾಗೇರ್ತಿ ಅಪರೂಪದ ದೇವಸ್ಥಾನಗಳಲ್ಲಿ ಒಂದು. ಈಗಿರುವಂತಹ ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಂಡು, ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ಚಿಂತನೆ ನಡೆಸಬೇಕಾಗಿದೆ ಎನ್ನುತ್ತಾರೆ ಹೈಕಾಡಿಯ ರಾಘವೇಂದ್ರ ಶೆಟ್ಟಿ.

Advertisement

ಪುರಾಣದ ಹಿನ್ನೆಲೆಯೇನು?
ಶಿವದತ್ತನೆಂಬ ಬ್ರಾಹ್ಮಣನು ತಪಸ್ಸಿಗಾಗಿ ಗೊಂಡಾರಣ್ಯವನ್ನು ಪ್ರವೇಶಿಸಿದಾಗ ಕಾಳಿYಚ್ಚಿನ ಬೆಂಕಿಯ ಜ್ವಾಲೆಯಿಂದ ಪರಿತಪಿಸುತ್ತಿದ್ದ ಐದು ಸರ್ಪಗಳನ್ನು ಕಂಡು, ಅವುಗಳನ್ನು ರಕ್ಷಿಸಲು ಮುಂದಾಗುತ್ತಾನೆ. ಹಿಡಿದುಕೊಂಡು ಊರಿಗೆ ಹೊರಟಾಗ ಅವುಗಳು ಒಂದೊಂದಾಗಿಯೇ ಕಾಡಿನಲ್ಲಿ ಶಿವದತ್ತನ ಕೈಯಿಂದ ತಪ್ಪಿಸಿಕೊಂಡು, ಮಾಯವಾಗುತ್ತವೆ. ಅವು ಮಾಯವಾದ ಸ್ಥಳಗಳಲ್ಲಿ ಶಿವದತ್ತನು ದುರ್ಗಾದೇವಿಯ ಆಲಯವನ್ನು, ಸನಿಹವೇ ಸುಬ್ರಹ್ಮಣ್ಯನನ್ನು ಪ್ರತಿಷ್ಠೆ ಮಾಡಿದನು ಎನ್ನುವ ಪ್ರತೀತಿಯಿದೆ. ಅವುಗಳೇ ಈಗ ಪಂಚಕನ್ಯಾ ಕ್ಷೇತ್ರಗಳಾದ ಶೇಡಿಮನೆಯ ಅರಸಮ್ಮಕಾನು (ದೇವರತಿ), ಹಿಲಿಯಾಣದ ನಾಗೇರ್ತಿ (ನಾಗರತಿ), ಚೋರಾಡಿ ಸಮೀಪದ ಚಾರುರತಿ, ಮಂದಾರ್ತಿಯ ಮಂದಾರತಿ ಹಾಗೂ ನೀಲಾವರದ ನೀಲಾರತಿ ದೇವಿ ದೇವಸ್ಥಾನಗಳಾಗಿ ಪ್ರಸಿದ್ಧಿ ಪಡೆದಿವೆ.

ನವರಾತ್ರಿಗೆ ವಿಶೇಷ ಪೂಜೆಯೇನೂ ಇಲ್ಲ
ವಿಶಿಷ್ಟ ಆಚರಣೆಗಳಿರುವ ಕ್ಷೇತ್ರ ಇದಾಗಿದ್ದು, ನವರಾತ್ರಿ ವೇಳೆ ವಿಶೇಷ ಪೂಜೆಯೇನೂ ಇಲ್ಲ. ಆದರೆ ನಿತ್ಯ ಪೂಜೆ ನಡೆಯುತ್ತದೆ. ಮಕರ ಸಂಕ್ರಾಂತಿ ದಿನ ವಾರ್ಷಿಕ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. 15 ಸಾವಿರಕ್ಕೂ ಮಿಕ್ಕಿ ಭಕ್ತರು ಬರುತ್ತಾರೆ. ತುಲಾಭಾರ ಪ್ರಮುಖ ಸೇವೆ.
-ನೀಲಕಂಠ ಅಡಿಗರು, ದೇವಸ್ಥಾನದ ಅರ್ಚಕರು

ಇಲ್ಲಿ ತೊಟ್ಟಿಲು ಕಟ್ಟುವುದಿಲ್ಲ ಯಾಕೆ?
ಈ ನಾಗೇರ್ತಿ ಪರಿಸರ ಹಾಗೂ ಚೋರಾಡಿಯ ಕಂಬಳಗದ್ದೆಯವರೆಗಿನ ಪ್ರದೇಶದವರೆಗೆ ಸುಮಾರು 70-80 ಮನೆಗಳಿವೆ. ಇಂದಿಗೂ ಮಕ್ಕಳಿಗೆ ತೊಟ್ಟಿಲು ಕಟ್ಟಬಾರದು ಅನ್ನುವ ಪ್ರತೀತಿಯಿದೆ. ತೊಟ್ಟಿಲು ಕಟ್ಟಿದರೆ ಆ ಹಗ್ಗದಲ್ಲಿ ನಾಗರ ಹಾವು ಕಾಣಿಸುತ್ತದೆ ಅನ್ನುವ ನಂಬಿಕೆ. 8-10 ವರ್ಷದ ಹಿಂದೆ ಒಬ್ಬರು ತೊಟ್ಟಿಲು ಕಟ್ಟಿದರೂ, ಅರ್ಧ – ಮುಕ್ಕಾಲು ಗಂಟೆಯಲ್ಲಿಯೇ ಹಗ್ಗದಲ್ಲಿ ಹಾವು ನೇತಾಡಿಕೊಂಡಿದ್ದು, ಬಳಿಕ ಕೈ ಮುಗಿದ ಬಳಿಕ ಇಳಿದು ಹೋಯಿತು. ಈ ವಿಚಾರವನ್ನು ಸ್ವತಃ ಆ ದಂಪತಿಯೇ ಬಂದು ಹೇಳಿಕೊಂಡಿರುವುದಾಗಿ ಇಲ್ಲಿನ ಅರ್ಚಕರಲ್ಲಿ ಒಬ್ಬರಾದ ನೀಲಕಂಠ ಅಡಿಗರು ನೆನಪಿಸಿಕೊಳ್ಳುತ್ತಾರೆ. ತೊಟ್ಟಿಲು ಮಾತ್ರವಲ್ಲ ಈ ಊರಲ್ಲಿ ಯಾವುದನ್ನು ನೇತು ಹಾಕುವುದಿಲ್ಲ. ಮಕ್ಕಳನ್ನು ಜನಿಸಿದ ವರ್ಷದೊಳಗೆ ಇಲ್ಲಿಗೆ ಕರೆದುಕೊಂಡು ಬಂದು 8 ದಿಕ್ಕಿಗೆ ಪ್ರದಕ್ಷಿಣೆ (ಸುತ್ತು ಹೊಡೆಸುವ ಸೇವೆ) ಹಾಕಿದರೆ ದೇವಿಗೆ ಇಷ್ಟ. ಆ ಮಕ್ಕಳು ಮತ್ತೆ ಹಠ ಹಿಡಿದು ಅಳುವುದಿಲ್ಲ ಅನ್ನುವ ನಂಬಿಕೆಯಿದೆ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next