Advertisement

Kundapura: ಹುಲಿ ವೇಷಧಾರಿಗಳಿಗೆ ಕೆಂಪು ಬಟ್ಟೆ ಕಡ್ಡಾಯ

03:08 PM Oct 06, 2024 | Team Udayavani |

ಕುಂದಾಪುರ: ಹುಲಿ ವೇಷ ಕರಾವಳಿಯ ವಿಶೇಷತೆಯೇನೋ ಹೌದು. ಆದರೆ, ಇದರಲ್ಲೂ ಬೇರೆ ಬೇರೆ ಭಾಗಗಳು ಅನನ್ಯತೆಯನ್ನು ಕಾಪಾಡಿಕೊಂಡಿವೆ. ಮಂಗಳೂರಿನ ನವರಾತ್ರಿ ಹುಲಿಯ ವೇಷವೇ ಬೇರೆ, ಉಡುಪಿಯ ಅಷ್ಟಮಿ ಹುಲಿಗಳ ಅಲಂಕಾರವೇ ಬೇರೆ. ಅದೇ ಕುಂದಾಪುರ ಭಾಗದ ಹುಲಿಗಳು ಇನ್ನೂ ವಿಶಿಷ್ಟ. ಕುಂದಾಪ್ರ ಹುಲಿಗಳು ಈಗ ಅಪರೂಪವಾಗುತ್ತಿದ್ದರೂ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವು ತಂಡಗಳು ಪ್ರಯತ್ನದಲ್ಲಿವೆ.

Advertisement

ಏಕೈಕ ಲಿಂಗುಮನೆ ತಂಡ
ವಿಭಿನ್ನ, ವಿಶಿಷ್ಟವಾಗಿ ಗುರುತಿಸಿ ಕೊಂಡಿರುವ ಕುಂದಾಪ್ರ ಹುಲಿ ಪರಂಪರೆ ಈಗ ಕಣ್ಮರೆಯಾಗುತ್ತಿದೆ. ದಶಕದ ಹಿಂದೆ ಹತ್ತಾರು ತಂಡಗಳಿದ್ದವು. ಅವೆಲ್ಲವೂ ನಿಂತು ಸದ್ಯ ಈ ಕಲಾ ಪ್ರಕಾರ ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಏಕೈಕ ತಂಡ ಲಿಂಗುಮನೆ ಹುಲಿವೇಷ ತಂಡ. ಹುಲಿವೇಷ ನರ್ತನ ಕುಂದಾಪುರಕ್ಕೆ ಮೊದಲಿಗೆ ಪರಿಚಯವಾಗಿದ್ದು ಮುಸ್ಲಿಂ ಜನಾಂಗದವರಿಂದ ಎಂಬುದು ಹಿರಿಯರ ಅನುಭವದ ನುಡಿ. ಇದರತ್ತ ಆಕರ್ಷಣೆಯಾದವರು ಲಿಂಗು ಮನೆ ಕುಟುಂಬಸ್ಥರು. ಮನೆಯ ಹಿರಿಯರಾದ ಲಿಂಗು ಹುಲಿ ವೇಷ ಆರಂಭಿಸಿದರು.

5ನೆ ತಲೆಮಾರು
ಲಿಂಗು ಅವರ ಕುಟುಂಬದ 5ನೇ ತಲೆಮಾರು ಈಗ ಹುಲಿ ವೇಷ ಮುಂದುವರಿಸಿಕೊಂಡು ಹೋಗುತ್ತಿದೆ. ಲಿಂಗು ಅವರ ಮಕ್ಕಳಾದ ನೀಲಾ, ಮಾಧವ, ಕೃಷ್ಣ ಅಪ್ಪನ ಪರಂಪರೆ ಮುಂದುವರಿಸಿದರು. ಅವರ ಮಕ್ಕಳಾದ ನಾರಾಯಣ, ನಾಗೇಶ್‌, ಮಾಧವ ಅವರ ಮಗ ಲಕ್ಷ್ಮಣ, ಕೃಷ್ಣ ಅವರ ಮಗ ಶೇಖರ ತಂಡವನ್ನು ಕಟ್ಟಿ ಮುನ್ನಡೆಸಿದರು. ನೀಲಾ ಅವರ ಮೊಮ್ಮಕ್ಕಳಾದ ಜಯ ಸಂಪನ್ನ, ಪ್ರಕಾಶ್‌, ಪ್ರದೀಪ್‌, ಸಾಂಪ್ರದಾಯಿಕ ಹುಲಿವೇಷದ ಉಡುಪ ಮೂಲಕ ಖ್ಯಾತಿವೆತ್ತಿದ್ದಾರೆ. ಈಗ 5ನೇ ತಲೆಮಾರು ಹುಲಿ ವೇಷ ಧರಿಸುತ್ತಿದೆ.


1967ರಲ್ಲಿ ಹೊಸ ಬಸ್‌ ನಿಲ್ದಾಣ ಸಮೀಪ ನವರಂಗ್‌ ಪೈಂಟ್‌ ಏಜೆನ್ಸಿ ಉದ್ಘಾಟನ ಸಂದರ್ಭ ಮಕ್ಕಳ ನವರಾತ್ರಿ ಹುಲಿವೇಷ ತಂಡ.

ಕುಂದಾಪ್ರ ಹುಲಿ ವಿಶೇಷತೆ 

  • ಕುಂದಾಪ್ರ ಹುಲಿಯ ಜತೆಗೆ ರಾತ್ರಿ ಗ್ಯಾಸ್‌ಲೈಟ್‌ನವರೇ ತೆರಳುವುದು ಇಂದಿಗೂ ನಡೆದು ಬಂದ ಪದ್ಧತಿ.
  • ವೇಷಧಾರಿಗಳಲ್ಲಿ ಕನಿಷ್ಠ ಒಬ್ಬರಾದರೂ ಸೊಂಟಕ್ಕೆ ಕೆಂಪು ಬಟ್ಟೆ ಸುತ್ತಿರಬೇಕು.
  • ಮೀನು-ಮಾಂಸ, ಮದ್ಯ ಮುಟ್ಟುವುದಿಲ್ಲ. ಕೈಗೊಂದು ನಿಂಬೆಹಣ್ಣು ಕಟ್ಟುತ್ತಾರೆ.
  • ಕಣ್ಣಿಗೆ ಬಣ್ಣ ಹಾಕುವುದಿಲ್ಲ ಹಾಗಾಗಿ ಕೆಲವರು ಕಪ್ಪು ಕನ್ನಡಕ ಧರಿಸುತ್ತಾರೆ.
  • ವಾದ್ಯ ವೃಂದದಲ್ಲಿ ಒಂದಾದರೂ ಚರ್ಮದ ವಾದ್ಯ ಇರಲೇಬೇಕು.
  • ಗ್ಯಾಸ್‌ ಲೈಟ್‌ ಹಿಡಿಯಲು, ವೇಷಧಾರಿಗಳಿಗೆ ತಣ್ಣೀರು ಹೊಯ್ಯಲು ಮತ್ತು ದುಡ್ಡಿನ ವ್ಯಾಗ್‌ ಹಿಡಿಯಲು ಎಂದು ಮೂವರನ್ನು ಸಂಬಳ ಕೊಟ್ಟು ಇಟ್ಟುಕೊಳ್ಳುತ್ತಿದ್ದರು.
  • ಬಣ್ಣ ಬಳಿದ ದೇಹ ತಂಪಾಗಲೆಂದು ರಾತ್ರಿ ಬಾಳೆ ಎಲೆ ಮೇಲೆ ಮಲಗಿಸುತ್ತಿದ್ದರು.
  • ಕುಂದಾಪ್ರು ಹುಲಿ ವೇಷ ಪರಂಪರೆ ಮರೆಯಾಗದಂತೆ ಕಲಾಕ್ಷೇತ್ರ ಟ್ರಸ್ಟ್‌ ಕೆಲವು ವರ್ಷಗಳಿಂದ ಪ್ರದರ್ಶನ ಆಯೋಜಿಸುತ್ತಿದೆ.
Advertisement

ಕಡಿಮೆಯಾಗಿದೆ
ಕುಂದಾಪ್ರ ಹುಲಿ ವೇಷ ಧರಿಸುವ ಕ್ರಮ ಈಗ ಕಡಿಮೆಯಾಗಿದೆ. ಬಹುತೇಕರಿಗೆ ಅದರ ಮಹತ್ವದ ಅರಿವಿಲ್ಲ. ಅದರ ಪರಂಪರೆ ಕುರಿತು ತಿಳಿವಳಿಕೆ ಇಲ್ಲ. ಅದೇ ಕ್ರಮದಲ್ಲಿ ಆಚರಿಸಿದರೆ ಮಾತ್ರ ಮಹತ್ವ ಉಳಿಯಲಿದೆ.
-ರಾಜೇಶ್‌, ಟಿಟಿರೋಡ್‌, ಹುಲಿ ವೇಷಧಾರಿ

ಗಂಗೊಳ್ಳಿ ರಾಮ ದೇವಾಡಿಗರ ರಂಗು
ಹುಲಿ ವೇಷಕ್ಕೊಂದು ಧೀಮಂತಿಕೆ, ಗತ್ತು ಗೈರತ್ತು ತಂದು ಕೊಟ್ಟಿದ್ದು ಗಂಗೊಳ್ಳಿ ದೇವಾಡಿಗ ಸಮುದಾಯದ ವಾದ್ಯವೃಂದದವರು. ಹುಲಿ ವೇಷಕ್ಕೆ ವಿಶೇಷ ಮೆರಗು ನೀಡುತ್ತಾ ಬಂದವರು ಅವರು. ಗಂಗೊಳ್ಳಿ ರಾಮ ದೇವಾಡಿಗರು ಬಹು ಸುಂದರವಾಗಿ ಹುಲಿ ವೇಷ ಹಾಕಿ ಕುಣಿಯುತ್ತಿದ್ದರು. ವೇಷ ಹಾಕುವವರಿಗೆ ಹೆಜ್ಜೆ ಹೇಳಿ ಕೊಡುತ್ತಿದ್ದರು. ಹುಲಿ ನರ್ತನಕ್ಕೆ ಬಾರಿಸುವ ತಮಟೆ ಶಬ್ಬವೂ ಕೂಡ ಲಯತಪ್ಪದಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಚಿಕ್ಕವರಿರುವಾಗ ಹೊಟ್ಟೆ ಬಲು ದೊಡ್ಡದಾಗಿತ್ತು. ಅವರಿಗೆ ದೊಡ್ಡ ಹೊಟ್ಟೆ ರಾಮಣ್ಣ ಎಂದು ಕರೆಯುತ್ತಿದ್ದರು. ಆಗ ಅವರ ತಾಯಿ ಹರಕೆ ಹೊತ್ತಂತೆ ಮಗನ ಹೊಟ್ಟೆ ಕರಗಿ ಸರಿಯಾದರೆ ಹರಕೆಯಾಗಿ ಹುಲಿವೇಷ ಹಾಕಿಸುವೆ ಎಂದಿದ್ದರು. ಹರಕೆ ಫ‌ಲಿಸಿತ್ತು. ಮುಂದೆ ಅವರ ಹುಲಿ ತಂಡ ಭಾರಿ ಸದ್ದು ಮಾಡಿತ್ತು. ಗೊಂಡೆ ಬಾಲದ ಹುಲಿಗಳು ಅದರ ಕುಣಿತ, ಹೆಜ್ಜೆ ಅತ್ಯಾಕರ್ಷಕವಾಗಿತ್ತು. ಚಕ್ರಾಸನ ಹಾಕಿ ಕಣ್ಣಿನಿಂದ ನೋಟು ತೆಗೆಯುವುದು, ಹಣೆಯಿಂದ ಲಿಂಬೆ ಹಣ್ಣು ಹೊಡೆದು ಹಾಕುವುದು, ಕುಣಿತದ ನಡುವೆ ಕಪ್ಪೆಯೊಂದನ್ನು ಹಿಡಿದು ಅದನ್ನು ಸುಸ್ತು ಹೊಡೆಸಿದ ಘಟನೆಗಳೂ ಇವೆ.

ವರದಿ: ಲಕ್ಷ್ಮೀ ಮಚ್ಚಿನ

ಚಿತ್ರಕೃಪೆ: ನರೇಂದ್ರ ಕುಂದಾಪುರ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next