Advertisement
ನೂತನ ವೃತ್ತ ಮೈಸೂರು ಜಯಚಾಮರಾಜೇಂದ್ರ ವೃತ್ತದ ಮಾದರಿಯಲ್ಲಿ ವಿನ್ಯಾಸವಾಗಲಿದೆ ಎಂದು ತಿಳಿಸಲಾಗಿತ್ತು. ಕುಂದಾಪುರ ಶಾಸ್ತ್ರೀ ಸರ್ಕಲ್, ಶಾಸ್ತ್ರೀ ಪಾರ್ಕ್ ಹೆಸರುವಾಸಿ. ಕುಂದಾಪುರಕ್ಕೆ ಎಲ್ಲಿಂದಲೇ ಬಂದರೂ ಬಸ್ಸಿನಿಂದಿಳಿಯಲು ಸೂಚನೆ ಕೊಡುವುದು ಇದೇ ವೃತ್ತವನ್ನು. ಯಾವುದೇ ಸ್ಥಳದ ಗುರುತು ಪರಿಚಯ ಹೇಳಬೇಕಾದರೂ ಶಾಸ್ತ್ರೀ ಸರ್ಕಲನ್ನು ಹೆಸರಿಸುತ್ತಾರೆ. ಇಲ್ಲಿ ದಾನಿಯೊಬ್ಬರು ನೀಡಿದ ಲಾಲ್‌ಬಹದ್ದೂರ್ ಶಾಸ್ತ್ರೀಗಳ ಸುಂದರ ಪ್ರತಿಮೆಯಿದೆ.
Related Articles
Advertisement
ಶಾಸ್ತ್ರೀ ಸರ್ಕಲ್ ಪುರಸಭೆ ವ್ಯಾಪ್ತಿಗೆ ಬರುತ್ತದೆ. ಅದರ ಉಸ್ತುವಾರಿ, ನಿರ್ವಹಣೆ, ನವೀಕರಣ ಎಲ್ಲವೂ ಪುರಸಭೆ ಪಾಲಿಗೆ. ಆದರೆ ಈವರೆಗೆ ಸರ್ಕಲ್ ಯಾಕೆ ನವೀಕರಣ ಕಾರ್ಯ ನಡೆದಿಲ್ಲ ಎನ್ನುವ ಪ್ರಶ್ನೆಗೆ ಉತ್ತರರೂಪದಲ್ಲಿ ಬೆರಳು ಹೋಗುವುದು ಹೆದ್ದಾರಿ ಪ್ರಾಧಿಕಾರದ ಕಡೆಗೆ. 10 ವರ್ಷಗಳ ಕಾಲ ಇಲ್ಲಿ ಹೆದ್ದಾರಿ ಕಾಮಗಾರಿ ಎಂದು ದಿನದೂಡಿದ್ದು, ಇದಕ್ಕೆ ವಸ್ತುಗಳನ್ನು ತಂದು ಹಾಕಲಾಗಿತ್ತು. ರಸ್ತೆ ಅಗೆದು ಹೊಸ ರಸ್ತೆ ಮಾಡದೇ ಬಾಕಿಯಾಗಿರುವುದರಿಂದ ವೃತ್ತದ ಆಧುನೀಕರಣ ಮಾಡಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ಎಪ್ರಿಲ್‌ವರೆಗೆ ಅಂದರೆ ಫ್ಲೈಓವರ್ ಕಾಮಗಾರಿ ಪೂರ್ಣವಾಗುವವರೆಗೆ ಈ ವೃತ್ತದ ಸಮೀಪ ಹಾದು ಹೋದ ರಸ್ತೆಯೇ ರಾಷ್ಟ್ರೀಯ ಹೆದ್ದಾರಿಯಾಗಿತ್ತು. ಈಗಲೂ ವೃತ್ತದ ಸಮೀಪ ಹೋದ ರಸ್ತೆ ಸರ್ವಿಸ್ ರಸ್ತೆಯಾದರೂ ಕಾಮಗಾರಿ ಪೂರ್ಣಗೊಂಡು ಪ್ರಾಧಿಕಾರಕ್ಕೆ ಹಸ್ತಾಂತರವಾಗದ ಕಾರಣ ತಾಂತ್ರಿಕವಾಗಿ ಇದು ಹೆದ್ದಾರಿಯೇ ಆಗಿದೆ.
ಆಕ್ಷೇಪ
ನೂತನವಾಗಿ ನಿರ್ಮಾಣವಾಗುತ್ತಿರುವ ಕಾಮಗಾರಿ ಕುರಿತು ಆಕ್ಷೇಪ ಇದೆ. ಈಗ ನಿರ್ಮಾಣವಾಗುತ್ತಿರುವ ಸ್ಥಳದ ಬದಲು ತುಸು ಆಚೆಗೆ ವಿಶಾಲವಾಗಿ ಮಾಡಬೇಕಿತ್ತು, ಗುತ್ತಿಗೆ ನೀಡುವಲ್ಲೂ ಪ್ರಾದೇಶಿಕ ಅಸಮಾನತೆ ತೋರಲಾಗಿದೆ ಇತ್ಯಾದಿ ಆಕ್ಷೇಪಗಳಿವೆ. ಆದರೆ ಆಚೀಚೆ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಜಾಗ ಇರುವ ಕಾರಣ ಅಲ್ಲಿ ಪುರಸಭೆ ಕಾಮಗಾರಿ ನಿರ್ವಹಿಸುವಂತಿಲ್ಲ. ಮಳೆ ಬಂದ ಕಾರಣ ಮಳೆಯಲ್ಲಿ ಕಾಮಗಾರಿ ಮಾಡುವಂತಿಲ್ಲ. ಗುಂಡಿ ತೆಗೆದು ನೀರು ನಿಂತಿರುವುದರಿಂದ ಜನ, ಜಾನುವಾರಿಗೆ ಅಪಾಯಕಾರಿಯಾಗಿದೆ. ಇಷ್ಟಲ್ಲದೇ ಉದ್ದೇಶಿತ ಸ್ಥಳದಲ್ಲಿ ಎರಡು ಹೈಮಾಸ್ಟ್ ದೀಪಗಳಿವೆ. ಇವುಗಳ ಪೈಕಿ ಒಂದನ್ನಾದರೂ ತೆರವುಗೊಳಿಸಬೇಕಾಗುತ್ತದೆ. ವೃತ್ತವನ್ನು ಫ್ಲೈಓವರ್‌ನ ಅಂಡರ್‌ಪಾಸ್ ಸಮೀಪ ಮಾಡಿದರೆ ವಾಹನಗಳು ಬೇರೆ ಬೇರೆ ಕಡೆಯಿಂದ ಬರುವ ಕಾರಣ ಅನಗತ್ಯ ಗೊಂದಲ ಉಂಟಾಗುತ್ತದೆ. ಸಂಚಾರ ದಟ್ಟನೆ ಉಂಟಾಗುತ್ತದೆ. ಅಪಘಾತ ಸಾಧ್ಯತೆಗಳೂ ಇಲ್ಲದಿಲ್ಲ. ಈ ಎಲ್ಲ ಕಾರಣದಿಂದ ಪರಿಶೀಲನೆ ನಡೆಸಿಯೇ ಈಗ ಇರುವ ಜಾಗದಲ್ಲೇ ನೂತನ ವೃತ್ತ ನಿರ್ಮಾಣ ಮಾಡಲಾಗುತ್ತಿದೆ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.
ಮಳೆ ಬಿಟ್ಟ ಬಳಿಕ ಕಾಮಗಾರಿ: ವೃತ್ತಕ್ಕೆ ಸೂಕ್ತವಾದ ಜಾಗ ಯಾವುದು ಎಂದು ಮಂಗಳೂರಿನಿಂದ ಪರಿಣತರನ್ನು ಕರೆಸಿ ಅವರಿಂದ ಸರ್ವೆ ನಡೆಸಿ ವರದಿ ಪಡೆಯಲಾಗಿದೆ. ಮಳೆಯಲ್ಲಿ ಕಾಮಗಾರಿ ಬೇಡ ಎಂದು ನಿಲ್ಲಿಸಲಾಗಿದೆ. ಮಳೆ ಬಿಟ್ಟ ಬಳಿಕ ಕಾಮಗಾರಿ ನಡೆಯಲಿದೆ. ಉದ್ದೇಶಿತ ನೀಲ ನಕಾಶೆಯಂತೆಯೇ ವೃತ್ತ ರಚನೆಯಾಗಲಿದೆ. ಸಾಮಾನ್ಯಸಭೆಯಲ್ಲಿ ಚರ್ಚಿಸಿ ಪುರಸಭೆ ಆಡಳಿತ ನಿರ್ಣಯ ಕೈಗೊಂಡಂತೆಯೇ ವೃತ್ತದ ನಿರ್ಮಾಣ ನಡೆಯುತ್ತಿದ್ದು ಇ ಟೆಂಡರ್ ಮೂಲಕವೇ ಗುತ್ತಿಗೆ ನೀಡಲಾಗಿದೆ. –ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ