Advertisement
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಶ್ವೇತಭವನದ ಹಿರಿಯ ಅಧಿಕಾರಿಗಳ ನೇಮಕವನ್ನು ಪ್ರಕಟಿಸಿದ್ದು, ಭಾರತೀಯ ಮೂಲದ ಅಮೆರಿಕದ ಪ್ರಜೆ, ಹಾಲಾಡಿ ಬಳಿಯ ಕಕ್ಕುಂಜೆ ಅಡಿಗರ ಕುಟುಂಬಕ್ಕೆ ಸೇರಿದ ಮಾಲಾ ಅಡಿಗ ಸೇರಿದ್ದಾರೆ.
ಮಾಲಾ ಅಡಿಗ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸಲಹೆ ಗಾರರಾಗುವ ಮೊದಲು ಬೈಡೆನ್ ಪ್ರತಿ ಷ್ಠಾನದಲ್ಲಿ ಉನ್ನತ ಶಿಕ್ಷಣ ಮತ್ತು ಸೈನಿಕ ಕುಟುಂಬ ವಿಭಾಗದ ನಿರ್ದೇಶಕ ರಾಗಿದ್ದರು. ಒಬಾಮಾ – ಬೈಡೆನ್ ಆಡಳಿತದ ವೇಳೆ ಮಾಲಾ ಅವರು ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಇದಕ್ಕೂ ಮುನ್ನ ನ್ಯಾಯ ಇಲಾಖೆಯ ಸಹ ಅಟಾರ್ನಿ ಜನರಲ್ ಅವರಿಗೆ ಕೌನ್ಸೆಲ್ ಆಗಿದ್ದರು.
Related Articles
ಮಾಲಾ ಅಡಿಗ ಅವರು ವಾಷಿಂಗ್ಟನ್ ನಿವಾಸಿಯಾಗಿದ್ದು, ಅಮೆರಿಕದ ಗ್ರಿನೆಲ್ ಕಾಲೇಜು, ಮಿನ್ನೆಸೊಟಾ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿ.ವಿ., ಶಿಕಾಗೋ ಲಾ ಸ್ಕೂಲ್ ವಿ.ವಿ.ಗಳಿಂದ ಪದವಿ ಗಳಿಸಿದ್ದರು. ತಂದೆ ಡಾ| ರಮೇಶ ಅಡಿಗರು ಮಾಲಾ ಜತೆಗಿದ್ದಾರೆ.
Advertisement
ಕರ್ಣಾಟಕ ಬ್ಯಾಂಕ್ ಅಧ್ಯಕ್ಷರಾ ಗಿದ್ದ ಕಕ್ಕುಂಜೆ ಮೂಲದ ಕೆ.ಎಸ್.ಎನ್. ಅಡಿಗ ಅವರ ತಂದೆ ಮತ್ತು ಮಾಲಾ ಅಡಿಗರ ಅಜ್ಜ ಚಂದ್ರಶೇಖರ ಅಡಿಗ ಅಣ್ಣತಮ್ಮಂದಿರ ಮಕ್ಕಳು. ಚಂದ್ರಶೇಖರ ಅಡಿಗರು ಕೃಷಿಕರಾಗಿ ದ್ದರು. ಇವರಿಗೆ ಲೀಲಾ ಅಡಿಗರ ತಂದೆ ಡಾ| ರಮೇಶ ಅಡಿಗರ ಸಹಿತ ಆರು ಮಂದಿ ಮಕ್ಕಳು. ಅಡಿಗರು ಕುಂದಾಪುರ ವಡೇರಹೋಬಳಿ ಬಳಿ ವಾಸವಿದ್ದರು. ಡಾ| ರಮೇಶ ಅಡಿಗರ ಪಯಣ
ಡಾ| ರಮೇಶ ಅಡಿಗರು ಬೆಂಗಳೂರು ವೈದ್ಯಕೀಯ ಕಾಲೇಜಿ ನಲ್ಲಿ ಪದವಿ ಪಡೆದು 24ನೆಯ ವಯಸ್ಸಿನಲ್ಲಿ ಅಮೆರಿಕಕ್ಕೆ ಹೋದರು. ಬಳಿಕ ಅಲ್ಲಿ ಕಾರ್ಡಿಯೋಲಜಿಯಲ್ಲಿ ಉನ್ನತ ಶಿಕ್ಷಣ ಪಡೆದರು. ಸುಮಾರು 60 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಡಾ| ಅಡಿಗ ಮತ್ತು ಡಾ|ಜಯಲಕ್ಷ್ಮೀ ಅಡಿಗರ ಮೂವರು ಮಕ್ಕಳಲ್ಲಿ ಮಾಲಾ ಹಿರಿಯಾಕೆ. ಊರಿನ ನಂಟು
ಮಾಲಾ ಅವರ ಪತಿ ಚಾರ್ಲ್ಸ್ ಬೀರೋ ವೃತ್ತಿಯಲ್ಲಿ ನ್ಯಾಯವಾದಿ. ಕಳೆದ ವರ್ಷ ನವೆಂಬರ್‌ನಲ್ಲಿ ಕುಟುಂಬ ಮಿಲನ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಡಾ| ರಮೇಶ ಅಡಿಗ, ಮಾಲಾ ಸಹಿತ ಮೂವರೂ ಮಕ್ಕಳು ಆಗಮಿಸಿದ್ದರು. ಮಾಲಾ ಅವರು ಮದುವೆ ಇತ್ಯಾದಿ ಕಾರ್ಯ ಕ್ರಮಗಳಿದ್ದಾಗ ಕುಂದಾಪುರ, ಕಕ್ಕುಂಜೆಗೆ ಬರುತ್ತಿದ್ದರು. ಸುಮಾರು ಏಳು ವರ್ಷಗಳ ಹಿಂದೆ ಕಕ್ಕುಂಜೆಗೆ ಬಂದು ಪೂಜೆಯಲ್ಲಿ ಪಾಲ್ಗೊಂಡಿದ್ದರು ಎಂಬುದನ್ನು ರಮೇಶ ಅಡಿಗರ ಸಹೋದರಿ ನಿರ್ಮಲಾ ಉಪಾಧ್ಯರ ಮಗಳು, ಕುಂದಾಪುರ ಕುಂದೇಶ್ವರ ಸಮೀಪದ ನಿವಾಸಿ ಸುಜಾತಾ ನಕ್ಕತ್ತಾಯ ಸ್ಮರಿಸಿಕೊಳ್ಳುತ್ತಾರೆ. ಮಾಲಾ ಪರಿಶ್ರಮ ಜೀವಿ. ಅವರ ನೇಮಕದ ವಿಷಯ ಕೇಳಿ ಸಂತೋಷವಾಗಿ ಇನ್ನಷ್ಟು ದೊಡ್ಡ ಹುದ್ದೆ ಸಿಗಲಿ ಎಂದು ಹಾರೈಸಿ ಸಂದೇಶ ಕಳುಹಿಸಿದ್ದೇನೆ. ಅವಳಿಂದಲೂ ಸಂದೇಶ ಬಂದಿದೆ.
– ಸುಜಾತಾ ನಕ್ಕತ್ತಾಯ, ಕುಂದಾಪುರ