Advertisement

Kundapura: ಗಂಗಡಬೈಲು ಸೇತುವೆ ಕಾಮಗಾರಿ ಅಪೂರ್ಣ; ಸಂಚಾರ ದುಸ್ತರ

04:32 PM Sep 29, 2023 | Team Udayavani |

ಕುಂದಾಪುರ: ಶೇಡಿಮನೆಯಿಂದ ಅಮಾಸೆಬೈಲು ಸಂಪರ್ಕಿಸುವ ಮಾಯಾಬಜಾರ್‌ ಹತ್ತಿರದ ಗಂಗಡಬೈಲು ಸೇತುವೆ ಕಾಮಗಾರಿ
ಅಪೂರ್ಣಗೊಂಡಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಅರೆಬರೆ ಪೂರ್ಣಗೊಂಡ ಸೇತುವೆಯಲ್ಲಿಯೇ ಕಷ್ಟಪಟ್ಟು ಸಂಚರಿಸುವ ಅನಿವಾರ್ಯತೆ ವಾಹನ ಸವಾರರದ್ದಾಗಿದೆ.

Advertisement

ಮಡಾಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಶೇಡಿಮನೆ ಸಮೀಪದ ಮಾಯಾಬಜಾರ್‌ನ ಗಂಗಡಬೈಲಿನಲ್ಲಿ ಈ ಹಿಂದೆ 4 ಮೀ. ಅಷ್ಟೇ ಅಗಲವಿದ್ದ ಕಿರು ಸೇತುವೆಯನ್ನು ತೆಗೆದು, ಹಿಂದಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಮುತುವರ್ಜಿಯಿಂದಾಗಿ 90 ಲಕ್ಷ ರೂ. ವೆಚ್ಚದಲ್ಲಿ 12 ಮೀ. ಅಗಲದ ಹೊಸ ಸೇತುವೆ ಮಂಜೂರಾಗಿತ್ತು. ಅದರಂತೆ ಕಾಮಗಾರಿ ಆರಂಭಗೊಂಡು ಹಲವು ತಿಂಗಳೇ ಕಳೆದರೂ, ಇನ್ನೂ ಪೂರ್ಣಗೊಂಡಿಲ್ಲ.

ವಾಹನ ಸವಾರರ ಸಂಕಷ್ಟ ಹಿಂದೆ ಇದ್ದ ಸೇತುವೆಯನ್ನು ತೆಗೆದುಹಾಕಿ, ಅದೇ ಸ್ಥಳದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಜನ ಅನಿವಾರ್ಯವಾಗಿ ಈ ಸೇತುವೆಯಲ್ಲೇ ಸಂಚರಿಸಬೇಕಾಗಿದೆ. ಇದು ಒಂದು ಬದಿಯ ಕಾಮಗಾರಿ ಮಾತ್ರ ನಡೆದಿದ್ದು, ಇನ್ನೊಂದು ಬದಿಯ ಕಾಮಗಾರಿ ಕಾಂಕ್ರೀಟ್‌ ಮಾಡಿ, ಕ್ಯೂರಿಂಗ್‌ಗೆ ಅಂತ ಬಿಟ್ಟಿದ್ದಾರೆ. ಈಗ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಭಾಗದಲ್ಲೂ ಒಂದು ಬದಿ ಕುಸಿದಿರುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.

ಪ್ರಮುಖ ರಸ್ತೆ
ಇದು ಮಡಾಮಕ್ಕಿ, ಶೇಡಿಮನೆ, ಅರಸಮ್ಮಕಾನು ಭಾಗದವರಿಗೆ ಅಮಾಸೆಬೈಲು, ಹೆಂಗವಳ್ಳಿ, ಸಿದ್ದಾಪುರ, ಕಮಲಶಿಲೆ ಕಡೆಗೆ ಸಂಚರಿಸಲು ಇರುವ ಪ್ರಮುಖ ರಸ್ತೆಯಾಗಿದೆ. ಇದಲ್ಲದೆ ಅಮಾಸೆಬೈಲು ಭಾಗದವರಿಗೂ ಹೆಬ್ರಿ, ನಾಡಾ³ಲು, ಕುಚ್ಚಾರು ಕಡೆಗೆ ಸಂಪರ್ಕಿಸುವ ರಸ್ತೆಯೂ ಇದಾಗಿದೆ. ಜಡ್ಕಲ್‌- ಮುದೂರು- ಹಳ್ಳಿಹೊಳೆ- ಸಿದ್ದಾಪುರ- ಅಮಾಸೆಬೈಲು – ಶೇಡಿಮನೆ ಸಂಪರ್ಕಿಸುವ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆಗಳು ಇದೆ.

ಶೀಘ್ರ ಪೂರ್ಣಕ್ಕೆ ಆಗ್ರಹ
ಈ ಸೇತುವೆಯ ಅರೆಬರೆ ಕಾಮಗಾರಿಯಿಂದಾಗಿ ಆಸುಪಾಸಿನ ಜನರು ಪ್ರತಿ ದಿನ ಕಷ್ಟಪಟ್ಟುಕೊಂಡೇ ಸಂಚರಿಸುವಂತಾಗಿದೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎನ್ನುವುದಾಗಿ
ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

ಸಂಪರ್ಕ ರಸ್ತೆ ಬಾಕಿ
ಸದ್ಯ ಸೇತುವೆಯ ಒಂದು ಕಡೆಯ ಕಾಂಕ್ರೀಟ್‌ ಆಗಿದ್ದು, ಅದರ ಕ್ಯೂರಿಂಗ್‌ ಗೆ ಬಿಡಲಾಗಿದೆ. ಇನ್ನು ಸೇತುವೆಯ ಎರಡೂ ಕಡೆಗಳಿಂದಲೂ ಸಂಪರ್ಕಿಸುವ ತಲಾ 20 ಮೀ.ನಷ್ಟು ಡಾಮರು ರಸ್ತೆ ಆಗಬೇಕಾಗಿದೆ. ಅದು ಮಳೆ ಬರುತ್ತಿರುವಾಗ ಕಷ್ಟ. ಹಾಗಾಗಿ ಅಕ್ಟೋಬರ್‌ ನವೆಂಬರ್‌ನಲ್ಲಿ ಆಗಬಹುದು. ಅದಾದ ಬಳಿಕ ಸಂಪೂರ್ಣ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ
ಎನ್ನುವುದಾಗಿ ಲೋಕೋಪಯೋಗಿ ಇಲಾಖೆಯ ಕುಂದಾಪುರ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಡಿಕೊಡುವ ಭರವಸೆ
ಈ ಗಂಗಡಬೈಲು ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಆಗುತ್ತಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ
ನಾನು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌, ಗುತ್ತಿಗೆದಾರರಲ್ಲಿ ಮಾತನಾಡಿದ್ದೇನೆ. ಆದಷ್ಟು ಬೇಗ
ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಕಾಮಗಾರಿ ನಡೆಯುತ್ತಿದೆ. ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಉದಯ ಕುಮಾರ್‌ ಶೆಟ್ಟಿ, ಅಧ್ಯಕ್ಷ, ಮಡಾಮಕ್ಕಿ ಗ್ರಾ.ಪಂ

*ಪ್ರಶಾಂತ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next