Advertisement

Kundapura: ಹದಗೆಟ್ಟ ಬ್ರಹ್ಮಾವರ-ಬಿದ್ಕಲ್‌ಕಟ್ಟೆ ರಾಜ್ಯ ಹೆದ್ದಾರಿ

05:29 PM Sep 25, 2024 | Team Udayavani |

ಕುಂದಾಪುರ: ಬಿದ್ಕಲ್‌ಕಟ್ಟೆಯಿಂದ ಹಾಲಾಡಿಯವರೆಗಿನ ರಾಜ್ಯ ಹೆದ್ದಾರಿಯ ಬಹುತೇಕ ಭಾಗ ಹೊಂಡ, ಗುಂಡಿಮಯಗೊಂಡಿದ್ದು, ವಾಹನ ಸವಾರರು ಪ್ರಯಾಸಪಟ್ಟು ಸಂಚರಿಸುವಂತಾಗಿದೆ. ಅಲ್ಲಲ್ಲಿ ಹಲವೆಡೆಗಳಲ್ಲಿ ರಸ್ತೆ ಮಧ್ಯದ ಗುಂಡಿಗಳಿಂದಾಗಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದು, ಆದಷ್ಟು ಬೇಗ ಈ ರಸ್ತೆ ದುರಸ್ತಿ ಮಾಡಬೇಕು ಎನ್ನುವುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಬ್ರಹ್ಮಾವರ – ಬಿದ್ಕಲ್‌ಕಟ್ಟೆ- ಹಾಲಾಡಿ- ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾಗೂ ಕುಂದಾಪುರ – ಕೋಟೇಶ್ವರ – ಹೆಬ್ರಿ ಜಿಲ್ಲಾ ಮುಖ್ಯ ರಸ್ತೆ ಹಾದುಹೋಗುವ ಬಿದ್ಕಲ್‌ಕಟ್ಟೆ- ಹಾಲಾಡಿ ಹೆದ್ದಾರಿಯು ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ಸಂಚರಿಸುವವರು ಸಂಕಷ್ಟ ಪಡುವಂತಾಗಿದೆ.

3 ಕಿ.ಮೀ. ಹೊಂಡಗುಂಡಿ
ಕೋಟೇಶ್ವರದಿಂದ ಬಿದ್ಕಲ್‌ಕಟ್ಟೆಯವರೆಗಿನ ರಸ್ತೆಯು ಉತ್ತಮವಾಗಿದ್ದು, ಅಂತಹ ಸಮಸ್ಯೆಗಳೇನು ಇಲ್ಲ. ಆದರೆ ಬಿದ್ಕಲ್‌ಕಟ್ಟೆಯಿಂದ ಹಾಲಾಡಿಯವರೆಗಿನ 6 ಕಿ.ಮೀ. ದೂರದ ರಸ್ತೆಯಲ್ಲಿ 3 ಕಿ.ಮೀ.ಗೂ ಹೆಚ್ಚು ಭಾಗ ಸಂಪೂರ್ಣ ಹೊಂಡ, ಗುಂಡಗಳಿವೆ. ಅದರಲ್ಲೂ ಕಕ್ಕುಂಜೆ ಕ್ರಾಸ್‌ ಬಳಿಯಂತೂ ವಾಹನ ಗಳು ಸಂಚರಿಸಲು ಸಾಧ್ಯವೇ ಇಲ್ಲದಂತಹ ಹೊಂಡಗಳು ಉಂಟಾಗಿವೆ. ಇನ್ನು ಜನ್ನಾಡಿ ಬಳಿಯೂ ಗುಂಡಿಗಳಿವೆ.

ಪ್ರಮುಖ ಸಂಪರ್ಕ ರಸ್ತೆ
ಹಾಲಾಡಿ- ಬಿದ್ಕಲ್‌ಕಟ್ಟೆಯವರೆಗೆ ಹೆದ್ದಾರಿಯು ಹತ್ತಾರು ಊರುಗಳನ್ನು ಸಂಪರ್ಕಿ ಸುವ ರಸ್ತೆಯಾಗಿದೆ. ಕುಂದಾಪುರದಿಂದ ಹಾಲಾಡಿ, ಬೆಳ್ವೆ, ಗೋಳಿಯಂಗಡಿ, ಅಮಾಸೆಬೈಲು, ಹೆಬ್ರಿ, ಆಗುಂಬೆಗೆ ಇದೇ ರಸ್ತೆಯಿಂದ ಸಂಚರಿಸಬೇಕು. ಇನ್ನು ಉಡುಪಿಯಿಂದ ತೀರ್ಥಹಳ್ಳಿ, ಸಿದ್ದಾಪುರಕ್ಕೆ ಸಂಚರಿಸಬೇಕಾದರೂ ಇದೇ ಮಾರ್ಗವಾಗಿ ಹಾದುಹೋಗಬೇಕು. ನಿತ್ಯ ಹತ್ತಾರು ಬಸ್‌ಗಳು, ಸಾವಿರಾರು ವಾಹನಗಳು ಸಂಚರಿಸುವ ಮಾರ್ಗ ಇದಾಗಿದೆ. ಪ್ರತಿ ದಿನ ಸಹಸ್ರಾರು ಮಂದಿ ಈ ಮಾರ್ಗವನ್ನು ಆಶ್ರಯಿಸಿದ್ದಾರೆ.

ಶೀಘ್ರ ದುರಸ್ತಿಗೆ ಕ್ರಮ
ಹಾಲಾಡಿ – ಬಿದ್ಕಲ್‌ಕಟ್ಟೆ ರಸ್ತೆ ಹದಗೆಟ್ಟ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಿರ್ವಹಣೆಗೆ ಅನುದಾನವಿದ್ದು, ಅದರಲ್ಲಿ ಮಳೆ ಸಂಪೂರ್ಣ ಕಡಿಮೆಯಾದ ಬಳಿಕ ದುರಸ್ತಿ ಕಾಮಗಾರಿ ಆರಂಭಿಸಲಾಗುವುದು. ಈಗ ಆಗಾಗ್ಗೆ ಮಳೆ ಬರುತ್ತಿರುವುದರಿಂದ ಕಾಮಗಾರಿ ಮಾಡಿದರೂ, ನಿಲ್ಲುವುದಿಲ್ಲ. ಮಳೆ ಕಡಿಮೆಯಾದ ಬಳಿಕ ಶುರು ಮಾಡಲಾಗುವುದು.
-ರಾಮಣ್ಣ ಗೌಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಲೋಕೋಪಯೋಗಿ ಇಲಾಖೆ ಕುಂದಾಪುರ

Advertisement

ಮರು ಡಾಮರೀಕರಣ ಕಾಮಗಾರಿಗೆ ಆಗ್ರಹ
ಈ ಮಾರ್ಗ ಮಳೆಯಿಂದಾಗಿ ಈಗ ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು ತುಂಬಾ ಪ್ರಯಾಸಪಟ್ಟು ಸಂಚರಿಸುವಂತಾಗಿದೆ. ಈಗ ಮಳೆ ತುಸು ಕಡಿಮೆಯಾಗುತ್ತಿದ್ದು, ಇನ್ನಾದರೂ ಈ ರಸ್ತೆಯ ಹೊಂಡ- ಗುಂಡಿಗಳಿರುವ ಕಡೆ ಮರು ಡಾಮರು ಕಾಮಗಾರಿ ಮಾಡಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next