ಬಿದ್ಕಲ್‌ಕಟ್ಟೆ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು ಘಟಕದ ವತಿಯಿಂದ ಕೆ.ಪಿ.ಎಸ್. ಬಿದ್ಕಲ್‌ಕಟ್ಟೆ ಸಭಾಂಗಣ ಹಾಗೂ ಮೊಳಹಳ್ಳಿ ಶಿವರಾವ್ ವೇದಿಕೆಯಲ್ಲಿ ಕುಂದಾಪುರ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾರ್ಕಣಿ ಕುಂದಾಪ್ರ ಕನ್ನಡದ ಕೊಂಗಾಟ ಕಾರ್ಯಕ್ರಮ ಅಂಗವಾಗಿ ಪೂರ್ವಾಹ್ನ ಕೊಳನಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನದ ಮುಖಮಂಟಪದಿಂದ ಸಮ್ಮೇಳನಾಧ್ಯಕ್ಷ ವಿಶ್ರಾಂತ ಪ್ರಾಂಶುಪಾಲ ಪ್ರೋ.ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸುವ ನಿಟ್ಟಿನಿಂದ ಉದ್ಯಮಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಆಕರ್ಷಕ ಶೋಭಾಯಾತ್ರೆಗೆ ನ.1ರಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 1ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಿರಿ ಕನ್ನಡ ಮಾತೆ ಶ್ರೀ ಭುವನೇಶ್ವರೀ ದೇವಿಯ ವೇಷ ಧರಿಸಿ ಕನ್ನಡದ ಬಾವುಟ ಹಿಡಿದು ನಿಂತಿರುವುದು ಗಮನ ಸೆಳೆಯಿತು.
ಕನ್ನಡ ಮಾತೆ ಶ್ರೀ ಭುವನೇಶ್ವರೀ ದೇವಿಯ ಶೋಭಾಯಾತ್ರೆಯೊಂದಿಗೆ ಭಾರತ್ ಸೇವಾದಳದ ವಿದ್ಯಾರ್ಥಿಗಳು ಕರ್ನಾಟಕ ಬಾವುಟ ಹಾಗೂ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಹಿಡಿದು ಸಾಗುವ ಜತೆಗೆ ಕಂಬಳ ಕೋಣಗಳು, ನೇಗಿಲು ಹೊತ್ತ ರೈತ, ಜಾನಪದ ನೃತ್ಯ, ಯಕ್ಷಗಾನ ವೇಷ, ಆಕರ್ಷಕ ವೇಷಭೂಷಣಗಳು, ಕೋಳಿ ಪಡೆ, ಕೀಲು ಕುದುರೆ, ಕುದುರೆ ಸವಾರಿ, ಚಂಡೆವಾದನ, ಡೋಲುವಾದನ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಂಡ, ಚಂಡೆ ವಾದನ ತಂಡ, ಭಜನಾ ತಂಡ, ಹಾಗೂ ಗ್ರಾಮಸ್ಥರೊಂದಿಗೆ ಸಾಗಿ ಬಂತು.
ಸುರಭಿ ಪುಸ್ತಕ ಪ್ರಕಾಶನ ಮತ್ತು ಕಾರ್ಕಳದ ಪುಸ್ತಕ ಮನೆಯಿಂದ ಪುಸ್ತಕ ಪ್ರದರ್ಶನ ಹಾಗೂ ಶಿಕ್ಷಕ ಶ್ರೀನಿವಾಸ ಮಂದಾರ್ತಿ ಅವರ ಸಂಗ್ರಹದಲ್ಲಿರುವ ಸುಮಾರು 250ಕ್ಕೂ ಅಧಿಕ ಬಳಕೆ ಮಾಡಿದ ಹಳೆಯ ಸಾಂಪ್ರದಾಯಿಕ ವಸ್ತುಗಳ ಪ್ರದರ್ಶನ ನಡೆಯಿತು.