Advertisement

Kundapur: ಮಳೆಗೆ ಕುಸಿಯುವ ಆತಂಕದಲ್ಲಿ ಹಟ್ಟಿಯಂಗಡಿ ಶಾಲೆ-ತೆರವಿಗೆ ಮೀನ-ಮೇಷ

04:08 PM Jun 08, 2024 | Team Udayavani |

ಕುಂದಾಪುರ: ಶತಮಾನೋತ್ಸವ ಪೂರೈಸಿರುವ ಹಟ್ಟಿಯಂಗಡಿ ಸರಕಾರಿ ಹಿ.ಪ್ರಾ. ಶಾಲೆಯ ಹಳೆಯ ಕಟ್ಟಡವೊಂದು ಶಿಥಿಲಗೊಂಡಿದ್ದು, ಮಕ್ಕಳ ಹಿತದೃಷ್ಟಿಯಿಂದ ಆ ಕಟ್ಟಡದ ತೆರವಿಗೆ ಎಸ್‌ಡಿಎಂಸಿ, ಶಿಕ್ಷಕರು, ಪೋಷಕರು, ಹಳೆ ವಿದ್ಯಾರ್ಥಿ ಸಂಘದವರು ವರ್ಷದಿಂದ ಒತ್ತಾಯಿಸುತ್ತಿದ್ದರೂ, ಇನ್ನೂ ತೆರವಿಗೆ ಮುಂದಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ಮನವಿ ಕೊಟ್ಟರೂ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ.

Advertisement

ಸದ್ಯ ಅಲ್ಲಿ ತರಗತಿ ನಡೆಸದೇ, ಬೇರೆ ಕಡೆ ನಡೆಸಲಾಗುತ್ತಿದೆ. ಆದರೂ ಮಕ್ಕಳು ಆಚೀಚೆ ಓಡಾಡುವ ವೇಳೆ ಗಾಳಿ- ಮಳೆಗೆ
ಕುಸಿದು ಬಿದ್ದು, ಏನಾದರೂ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ.

ಹೊಸ ಕಟ್ಟಡಕ್ಕೆ ಎಸ್‌ಡಿಎಂಸಿ ಮನವಿ
ಈ ಶಿಥಿಲಗೊಂಡ ಕಟ್ಟಡ ಅಪಾಯಕಾರಿ ಯಾಗಿದ್ದು, ಇಲ್ಲಿ ತರಗತಿ ನಡೆಸಲು ಸಾಧ್ಯವಿಲ್ಲ. ಈ ಕಟ್ಟಡವನ್ನು ಆದಷ್ಟು ಬೇಗ ತೆರವು ಮಾಡಿ, ಆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎನ್ನುವುದಾಗಿ ಶಾಲಾಭಿವೃದ್ಧಿ ಮತ್ತು
ಮೇಲುಸ್ತುವಾರಿ ಸಮಿತಿ ವತಿಯಿಂದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಇದಕ್ಕೂ ಮುನ್ನ ಬೈಂದೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದು, ಅವರು ಸ್ವತಹಃ ಇಲ್ಲಿಗೆ ಭೇಟಿ ನೀಡಿ, ವರದಿ ತಯಾರಿಸಿ, ಮೇಲಧಿಕಾರಿಗಳಿಗೆ ಸಲ್ಲಿಸಿದ್ದರು. ಪ್ರಸ್ತುತ 58 ಮಂದಿ ಮಕ್ಕಳಿದ್ದು, ಮೂವರು ಶಿಕ್ಷಕರಿದ್ದಾರೆ. ಶಿಕ್ಷಕರ ಕಚೇರಿಯನ್ನೇ ತರಗತಿ ಕೋಣೆ ಯಾಗಿ ಮಾಡಲಾಗಿದೆ. ಇರುವಂತಹ ಕೊಠಡಿಗಳಲ್ಲಿಯೇ ತರಗತಿ ನಡೆಸಲಾಗುತ್ತಿದ್ದು, ಈ ಕಟ್ಟಡ ನೆಲಸಮಗೊಳಿಸಿ, ಆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾದರೆ ಮಕ್ಕಳಿಗೆ ಅನುಕೂಲವಾಗಲಿದೆ.

50ವರ್ಷ ಹಳೆಯ ಕಟ್ಟಡ
ಬೈಂದೂರು ವಲಯದ ಹಟ್ಟಿಯಂಗಡಿ ಸರಕಾರಿ ಹಿ.ಪ್ರಾ. ಶಾಲೆಯ ಈ ಕಟ್ಟಡವೂ ಸುಮಾರು 50 ವರ್ಷಗಳಿಗೂ ಹಿಂದಿನದ್ದಾಗಿದೆ. ಈ ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭಗಳು ಇದೇ ಕಟ್ಟಡದಲ್ಲಿ ನಡೆಯುತ್ತಿದ್ದವು. ಪ್ರತೀ ಚುನಾವಣೆಯಲ್ಲೂ ಈ ಕಟ್ಟಡದಲ್ಲಿಯೇ ಮತಗಟ್ಟೆಯನ್ನು ತೆರೆಯಲಾಗುತ್ತಿತ್ತು. ಆದರೆ ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಇಲ್ಲಿ ಮತಗಟ್ಟೆ ತೆರೆದಿರಲಿಲ್ಲ. ಈ ಕಟ್ಟಡದಲ್ಲಿ 3 ಕೊಠಡಿಗಳಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಸಿಮೆಂಟ್‌ ಹಾಕಿರುವುದು ಎದ್ದು ಹೋಗಿ, ಕೆಲವೆಡೆಗಳಲ್ಲಿ ಗೋಡೆ ಮಾತ್ರ ಕಾಣುತ್ತಿದೆ. ಶಿಥಿಲಗೊಂಡ ಈ ಕಟ್ಟಡದಲ್ಲಿ ಮುಂಜಾಗ್ರತ ಕ್ರಮವಾಗಿ ಕಳೆದ ವರ್ಷದ ಜುಲೈನಿಂದ ಮಕ್ಕಳಿಗೆ ತರಗತಿ ನಡೆಸಲಾಗುತ್ತಿಲ್ಲ. ಕಟ್ಟಡವೂ ರಸ್ತೆ ಬದಿಯೇ ಇರುವುದರಿಂದ ಗಾಳಿ – ಮಳೆ ಬಂದಾಗ ಕುಸಿದು, ಏನಾದರೂ ಅನಾಹುತ ಸಂಭವಿಸುವ ಸಾಧ್ಯತೆಗಳು ಇವೆ.

Advertisement

ತೆರವಿಗೆ ಸೂಚನೆ
ಎಸ್‌ಡಿಎಂಸಿಯವರ ಮನವಿಗೆ ಸ್ಪಂದಿಸಿರುವ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್‌ ಬಾಯಲ್‌ ಅವರು, ಶಿಥಿಲಗೊಂಡ ಈ ಕಟ್ಟಡವನ್ನು ತೆರವುಗೊಳಿಸುವ ಸಂಬಂಧ ಪರಿಶೀಲಿಸಿ, ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿಯ ಉಪನಿರ್ದೇಶಕರಿಗೆ ಪತ್ರದ ಮೂಲಕ ಸೂಚಿಸಿದ್ದಾರೆ.

ಶೀಘ್ರ ತೆರವಿಗೆ ಆದೇಶ
ಹಟ್ಟಿಯಂಗಡಿ ಶಾಲೆಯ ಶಿಥಿಲ ಕಟ್ಟಡ ತೆರವಿಗೆ ಸಂಬಂಧಿಸಿದಂತೆ ನಾವು ಪಂಚಾಯತ್‌ ರಾಜ್‌ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರಿಗೆ ಅಂದಾಜು ಪಟ್ಟಿ ಹಾಗೂ ತಾಂತ್ರಿಕ ವರದಿ ಕೊಡುವಂತೆ ಮನವಿ
ಸಲ್ಲಿಸಲಾಗಿದೆ. ಅದರಂತೆ ಅಲ್ಲಿಗೆ ಸಂಬಂಧಪಟ್ಟ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ, ವರದಿ ತಯಾರಿಸಿದ್ದು, ಆದಷ್ಟು ಬೇಗ ಶಿಥಿಲ ಕಟ್ಟಡ ತೆರವಿಗೆ ಆದೇಶ ಆಗಲಿದೆ.
*ನಾಗೇಶ್‌ ನಾಯ್ಕ,
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ

ಅಪಾಯಕಾರಿ ಕಟ್ಟಡದ ತೆರವಿಗೆ ತತ್‌ಕ್ಷಣ ಕ್ರಮಕೈಗೊಳ್ಳಿ
ಶಿಥಿಲಗೊಂಡ ಕಟ್ಟಡದ ತೆರವಿಗೆ ಕಳೆದ ಜುಲೈನಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಗಳ ಗಮನಕ್ಕೆ ತಂದರೂ ಇಲ್ಲಿಯವರೆಗೆ ತೆರವು ಕಾರ್ಯ ಕೈಗೊಂಡಿಲ್ಲ. ಕಟ್ಟಡ ರಸ್ತೆಗೆ ಹತ್ತಿರವಿರುವುದರಿಂದ ಮಳೆಗಾಲದಲ್ಲಿ ಮಕ್ಕಳಿಗೆ, ಸಾರ್ವಜನಿಕರಿಗೂ ಅಪಾಯಕಾರಿಯಾಗಿದೆ. ಶೀಘ್ರ ಈ ಕಟ್ಟಡ ತೆರವಿಗೆ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕು.
*ಮಹೇಶ್‌ ದೇವಾಡಿಗ ಎಚ್‌., ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ

*ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next