Advertisement

ಕುಂದಾಪುರ: ಅಂತರ್ಜಲ ಮಟ್ಟ ಮತ್ತಷ್ಟು ಕುಸಿತ!

09:18 PM Mar 19, 2021 | Team Udayavani |

ಕುಂದಾಪುರ: ದಿನೇ ದಿನೇ ಬಿಸಿಲಿನ ಝಳ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ಅಂತರ್ಜಲ ಮಟ್ಟವು ಇಳಿಮುಖವಾಗುತ್ತಿದೆ. ಕಳೆದ ಬಾರಿ ಫೆಬ್ರವರಿ ಅಂತ್ಯಕ್ಕೆ ಕುಂದಾಪುರ ತಾಲೂಕಿನ ಒಟ್ಟಾರೆ ಅಂತರ್ಜಲ ಮಟ್ಟ 6.09 ಮೀ. ಎತ್ತರದಲ್ಲಿದ್ದರೆ, ಈ ಬಾರಿ ಈ ಪ್ರಮಾಣ 6.29 ಮೀ.ಗೆ ಕುಸಿದಿದೆ. ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದ ಬಾರಿಗಿಂತ ಈ ಬಾರಿಯೇ ಅಂತರ್ಜಲ ಮಟ್ಟ ಉತ್ತಮವಾಗಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ.

Advertisement

ಕುಂದಾಪುರದಲ್ಲಿ ಕಳೆದ ಬಾರಿಗಿಂತ ಈ ಬಾರಿ 0.20 ಮೀ.ನಷ್ಟು ನೀರಿನ ಮಟ್ಟ ಕುಸಿದಿದ್ದರೆ, ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದ ಫೆಬ್ರವರಿಯಲ್ಲಿ 7.51 ಮೀ. ಇದ್ದರೆ, ಈ ಬಾರಿ ಅಂತರ್ಜಲ ಮಟ್ಟ 7.19 ಮೀ. ನಷ್ಟಿದೆ. ಆದರೆ ತಾಪಮಾನ ಏರಿಕೆಯಾಗುತ್ತಿರುವುದರಿಂದ ನೀರಿನ ಮಟ್ಟ ಕುಸಿಯುವ ಭೀತಿಯೂ ಇದೆ.

ಕುಸಿತ- ಏರಿಕೆಗೆ ಕಾರಣಗಳೇನು?
ಕೆಲವೆಡೆಗಳಲ್ಲಿ ನೀರಿನ ಅಂತರ್ಜಲ ಮಟ್ಟ ಕಳೆದ ಬಾರಿಗಿಂತ ಉತ್ತಮವಾಗಿದ್ದರೆ, ಮತ್ತೆ ಕೆಲವೆಡೆಗಳಲ್ಲಿ ಕಳೆದ ಬಾರಿಗಿಂತ ಕಡಿಮೆಯಾಗಿದೆ. ಅಂತರ್ಜಲ ಮಟ್ಟ ಉತ್ತಮವಾಗಿರಲು ಪ್ರಮುಖ ಕಾರಣ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಆಗಾಗ ಮಳೆ ಬರುತ್ತಿದ್ದುದರಿಂದ ಕೃಷಿ ಮತ್ತಿತರ ಚಟುವಟಿಕೆಗಳಿಗೆ ನೀರಿನ ಬಳಕೆ ಕಡಿಮೆಯಾಗಿರುವುದರಿಂದ ಅಂತರ್ಜಲ ಮಟ್ಟ ಉತ್ತಮವಾಗಿದೆ. ಇನ್ನು ನೀರಿನ ಮಟ್ಟ ಇಳಿಕೆಗೆ ತಾಪಮಾನ ಪ್ರಮಾಣ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿರುವುದರಿಂದ ನೀರು ಆವಿಯಾಗುವ ಪ್ರಮಾಣವು ಹೆಚ್ಚುತ್ತಿದೆ. ಅತಿಯಾದ ಅಂತರ್ಜಲ ಬಳಕೆ ಹಾಗೂ ನೀರಿನ ಮರುಪೂರಣ ಕಡಿಮೆಯಾಗಿದೆ. ನೀರಿಲ್ಲವೆಂದು ಬೇಕಾಬಿಟ್ಟಿ ಬೋರ್‌ವೆಲ್‌ಗ‌ಳನ್ನು ಕೊರೆಯಿಸುತ್ತಿರುವುದು. ಅರಣ್ಯ, ಮರ – ಗಿಡಗಳ ಪ್ರಮಾಣ ಕಡಿಮೆಯಾಗುತ್ತಿರುವುದು. ಕೃಷಿ ಚಟುವಟಿಕೆ ಕುಂಠಿತಗೊಂಡಿರುವುದರಿಂದ ಈಗ ಗ್ರಾಮೀಣ ಪ್ರದೇಶಗಳಲ್ಲಿ ಗದ್ದೆ ಬದಿಯ ತೋಡುಗಳಲ್ಲಿ ಕಟ್ಟಗಳನ್ನು ಕಾಣಲು ಸಿಗುವು ದಿಲ್ಲ. ಇದೆಲ್ಲ ಅಂತರ್ಜಲ ಮಟ್ಟ ಇಳಿಕೆಗೆ ಕಾರಣಗಳಾಗಿವೆ.

ಮಿತ ಬಳಕೆ ಅವಶ್ಯಕ

ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಒಟ್ಟಾರೆ ಜಿಲ್ಲೆಯ ಅಂತರ್ಜಲ ಮಟ್ಟವು ಉತ್ತಮವಾಗಿದೆ. ಆದರೆ ಕೆಲವೆಡೆಗಳಲ್ಲಿ ಮಾತ್ರ ನೀರಿನ ಮಟ್ಟ ಇಳಿಕೆಯಾಗಿದೆ. ಜನರು ನೀರಿನ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಅತಿಯಾದ ಬಳಕೆಗೆ ಕಡಿವಾಣ ಹಾಕಬೇಕು, ಮಿತವಾದ ಬಳಕೆಗೆ ಆದ್ಯತೆ ಕೊಡಬೇಕಿದೆ. ಬೋರ್‌ವೆಲ್‌ ಕೊರೆಯಿಸಿದವರು ಕಡ್ಡಾಯವಾಗಿ ಮರುಪೂರಣ ಮಾಡಲೇಬೇಕು. ಮಾಡಿನ ನೀರನ್ನು ಬೋರ್‌ವೆಲ್‌ ಬಳಿ ಅಂತರ್ಜಲಕ್ಕೆ ಸೇರುವಂತೆ ಮಾಡುವ ತುರ್ತು ಅಗತ್ಯವಿದೆ.

Advertisement

– ಡಾ| ಎಂ.ದಿನಕರ ಶೆಟ್ಟಿ, ಹಿರಿಯ ಭೂ ವಿಜ್ಞಾನಿ, ಅಂತರ್ಜಲ ವಿಭಾಗ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ

ಜಿಲ್ಲೆಯ ಸ್ಥಿತಿಯೇನು?

ಒಟ್ಟಾರೆ ಉಡುಪಿ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟವನ್ನು ನೋಡಿದಾಗ ಕಳೆದ ಬಾರಿಗಿಂತ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ. ಕಳೆದ ಬಾರಿ ಫೆಬ್ರವರಿಯಲ್ಲಿ ಜಿಲ್ಲೆಯ ಅಂತರ್ಜಲ ಮಟ್ಟ 8.14 ಮೀ.ನಷ್ಟಿದ್ದರೆ, ಈ ಬಾರಿ ಇದು 8.01 ಮೀ. ನಷ್ಟಿದೆ. ಅಂದರೆ ನೀರಿನ ಪ್ರಮಾಣವು ಕಳೆದ ವರ್ಷಕ್ಕಿಂತ 0.13 ಮೀ. ಎತ್ತರದಲ್ಲಿದೆ. ಕಾರ್ಕಳದಲ್ಲಿ ಕಳೆದ ಬಾರಿ 7.60 ಮೀ., ಈ ಬಾರಿ 7.51 ಮೀ.ಗೆ ಏರಿಕೆಯಾಗಿದೆ. ಹೆಬ್ರಿಯಲ್ಲಿ ಕಳೆದ ವರ್ಷ 7.09 ಮೀ.ನಷ್ಟಿದ್ದರೆ, ಈ ಬಾರಿ 7.21 ಮೀ.ಗೆ ಏರಿಕೆಯಾಗಿದೆ. ಉಡುಪಿ ತಾ| ನಲ್ಲಿ ಈ ಬಾರಿ 8.39 ಮೀ., ಕಳೆದ ಬಾರಿ 8.60 ಮೀ.ಗೆ ಕುಸಿದಿತ್ತು. ಬ್ರಹ್ಮಾವರದಲ್ಲಿ ಈ ಬಾರಿ 8.52 ಮೀ. ಇದ್ದರೆ, ಕಳೆದ ಬಾರಿ 8.53ಮೀ. ನಷ್ಟಿತ್ತು. ಕಾಪುವಿನಲ್ಲಿ ಕಳೆದ ಬಾರಿ 10.93 ಮೀ.ನಷ್ಟಿದ್ದರೆ, ಈ ಬಾರಿ 11.60 ಮೀ.ಗೆ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next