Advertisement

ಕುಂದಾಪುರ: ಪ್ರಯಾಣಿಕರಿಗಿಲ್ಲದ ಬಸ್‌ ನಿಲ್ದಾಣ

06:40 AM Aug 04, 2018 | Team Udayavani |

ಕುಂದಾಪುರ: ನಗರದಲ್ಲಿರುವ ಹೊಸ ಬಸ್‌ ನಿಲ್ದಾಣ ಸಮಸ್ಯೆಗಳ ತಾಣವಾಗಿದೆ. ಹೊಸ ಬಸ್‌ ನಿಲ್ದಾಣವಿದ್ದರೂ ಪ್ರಯಾಣಿಕರು ಬಸ್‌ಗಾಗಿ ಕಾಯಲು ಬಿಸಿಲು, ಮಳೆಯಲ್ಲಿ ನಿಲ್ಲುವಂತಾಗಿದೆ. ಏಕೆಂದರೆ ತಂಗುದಾಣ ಸಮೀಪ ಬಸ್ಸು ನಿಲ್ಲುವುದಿಲ್ಲ. ಬಸ್ಸು ನಿಲ್ಲುವಲ್ಲಿ ತಂಗುದಾಣ ಇಲ್ಲ. 

Advertisement

ತಂಗುದಾಣದಲ್ಲಿದ್ದರೆ ಬಸ್‌ ನಿಂತಲ್ಲಿಗೆ ತಲುಪಲಾಗುವುದಿಲ್ಲ. ಆದ್ದರಿಂದ ಅಂಗಡಿ ಮುಂಗಟ್ಟುಗಳ ಎದುರು ಮಳೆ ಬಂದರೂ ಚಂಡಿಯಾಗುತ್ತಾ ರಸ್ತೆ ಬದಿಯೇ ಕಾಯಬೇಕಾದ ಅನಿವಾರ್ಯತೆ ಇದೆ.

ನಗರ ತಂಗುದಾಣ
ತಾಲೂಕಿನಿಂದ ಮಾತ್ರವಲ್ಲದೇ ಹೊರಜಿಲ್ಲೆಗಳಿಂದ ಕೂಡಾ ಇಲ್ಲಿಗೆ ಬಸ್ಸುಗಳ ಮೂಲಕ ಪ್ರಯಾಣಿಕರು ಆಗಮಿಸುತ್ತವೆ. ಇಲ್ಲಿ ಪಾದಚಾರಿಗಳಿಗೆ ನಡೆದಾಡಲು ಸಮರ್ಪಕವಾದ ರಸ್ತೆ ಇಲ್ಲ. ಪ್ರಯಾಣಿಕರನ್ನು ಬಿಡಲು ಬರುವ ಖಾಸಗಿ ವಾಹನಗಳ ಪಾರ್ಕಿಂಗ್‌ಗೆ ಜಾಗವಿಲ್ಲ. ಹೆಸರಿಗೆ ಬಸ್‌ ತಂಗುದಾಣವಾದರೂ ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಬಸ್‌ಗಳಿಗೆ ತಂಗಲೂ ಸ್ಥಳವಿಲ್ಲ !

ಸ್ಥಳವಿಲ್ಲ
ನಗರದ ಮಾರುಕಟ್ಟೆಯಾಗಿದ್ದ ಈಗಿನ ಹೊಸ ಬಸ್‌ ನಿಲ್ದಾಣ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಹೊಂದಿದೆ. ಸ್ಥಳ ಇಲ್ಲದಿದ್ದರೂ, ಪ್ರಯಾಣ ತಡವಿದ್ದರೂ  ಕೆಲವು  ಬಸ್ಸುಗಳು ಇಲ್ಲಿ ನಿಲ್ಲುತ್ತಿತ್ತು. ಇದು ಇತರ ನಿರ್ವಾಹಕರಿಗೆ ಸಮಸ್ಯೆ ತಂದೊಡ್ಡಿದ ಕಾರಣ ಈಗ ಕೆಲವು ಬಸ್‌ಗಳನ್ನು ಫೆರಿ ರಸ್ತೆಯ ಪಾರ್ಕ್‌ ಬಳಿ ನಿಲ್ಲಿಸಲಾಗುತ್ತಿದೆ. ನಗರದಲ್ಲಿ ಪ್ರಮುಖವಾಗಿ ವಾಹನ ಪಾರ್ಕಿಂಗ್‌ಗೆ ಜಾಗವಿಲ್ಲ.
 
ಪ್ರಯಾಣಿಕರ ಪರದಾಟ
ಸಹಾಯಕ ಕಮಿಷನರ್‌ ಅವರ ಕಚೇರಿ, ತಾಲೂಕು ಕಚೇರಿ, ಆಹಾರ ಶಾಖೆ, ಉಪನೋಂದಣಿ ಕಚೇರಿಗಳಿರುವ ಮಿನಿ ವಿಧಾನಸೌಧ, ನ್ಯಾಯಾಲಯ, ಪೊಲೀಸ್‌ ಠಾಣೆ, ಶಿಕ್ಷಣಾಧಿಕಾರಿಗಳ ಕಚೇರಿ, ಅರಣ್ಯ ಇಲಾಖೆ, ನೋಟರಿ ವಕೀಲರ ಕಚೇರಿಗಳು, ಬ್ಯಾಂಕುಗಳು, ದೇವಸ್ಥಾನ, ಕೃಷಿ ಇಲಾಖೆ ಹೀಗೆ ಅನೇಕ ಅಗತ್ಯಗಳಿಗೆ ಜನ ಇದೇ ವಠಾರಕ್ಕೆ ಬರಬೇಕು. 

ಆದ್ದರಿಂದ ಇಲ್ಲಿಯೇ ಬಸ್‌ ಅವಲಂಬಿಸಬೇಕಾಗುತ್ತದೆ. ಹಾಗೆ ಬಸ್‌ಗಾಗಿ ಕಾಯುವಾಗ ಬಸ್‌ ತಂಗುದಾಣದಲ್ಲಿ ಇದ್ದರೆ ಬಸ್‌ ಅಲ್ಲಿ ನಿಲ್ಲುವುದಿಲ್ಲ. ಬದಲಾಗಿ ದೂರದಲ್ಲಿ ನಿಲ್ಲುವ ಬಸ್‌ಗೆ ರಸ್ತೆ ಬದಿಯೇ ಕಾಯಬೇಕು. ಮಳೆ ಬಂತು ಎಂದು ತಂಗುದಾಣದಲ್ಲಿದ್ದರೆ ಬಸ್‌ ಹಿಡಿಯಲಾಗುವುದಿಲ್ಲ. ರಸ್ತೆ ಬದಿ ನಿಂತರ ಮಳೆ ಬಿಡುವುದಿಲ್ಲ. ಬಿಸಿಲಿದ್ದರೆ ಅದೂ ಕಷ್ಟ ಎಂಬ ಸ್ಥಿತಿ ಇದೆ. ಹತ್ತಿರದಲ್ಲಿ ಪುರಸಭೆಯ ಕಟ್ಟಡವೇ ಇದ್ದರೂ ಅಲ್ಲೆಲ್ಲ ಅಂಗಡಿಗಳೇ ಇರುವ ಕಾರಣ ಪ್ರಯಾಣಿಕರಿಗೆ ನಿಲ್ಲಲಾಗದು ಎಂಬ ಸ್ಥಿತಿ ಬಂದಿದೆ. ಹಿಂದೊಮ್ಮೆ ಇಲ್ಲಿ ಶೀಟ್‌ ಹಾಕಿ ನೆರಳಿನ ಆಶ್ರಯ ನೀಡಲು ಅಳತೆಯಾಗಿದ್ದರೂ ಯಾವುದೋ ಕಾರಣದಿಂದ ಕಾಮಗಾರಿ ನಡೆಯಲಿಲ್ಲ. 

Advertisement

ಮೂಲ ಸೌಕರ್ಯ ಇಲ್ಲ
ಬಸ್‌ಗಾಗಿ ತಾಸುಗಟ್ಟಲೆ ಕಾಯುವ ಪ್ರಯಾಣಿಕರಿಗೆ ಬಿಸಿಲ ಬೇಗೆ ನೀಗಲು ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಶೌಚಾಲಯದ ನಿರ್ವಹಣೆ ಕೂಡಾ ಸಮಂಜಸವಾಗಿಲ್ಲ. ನಗರದ ಪ್ರಮುಖ ಬಸ್‌ ನಿಲ್ದಾಣದಲ್ಲಿಯೇ ಸೌಲಭ್ಯದ ಕೊರತೆಯಾದರೆ ಹೇಗೆ ಎನ್ನುತ್ತಾರೆ ಪ್ರಯಾಣಿಕರು.

ಪರಿಶೀಲಿಸುತ್ತೇನೆ
ಬಸ್‌ನವರು ತಂಗುದಾಣದ ಸಮೀಪವೇ ನಿಲ್ಲಬೇಕು. ದೂರ ನಿಂತರೆ ಜನರಿಗೆ ಸಮಸ್ಯೆಯಾಗುತ್ತದೆ. ಹೊಸ ಬಸ್‌ ನಿಲ್ದಾಣವೇ ಇದ್ದು ಅಂಗಡಿಗಳ ಮರು ಏಲಂ ನಡೆದ ಕಾರಣ ಅದನ್ನು ತೆರವು ಮಾಡಿ ತಂಗುದಾಣ ಮಾಡುವುದು ಸದ್ಯಕ್ಕೆ ಕಷ್ಟ. ಜನರಿಗೆ ಆಗುತ್ತಿರುವ ಸಮಸ್ಯೆ ಕುರಿತು ಪರಿಶೀಲಿಸುತ್ತೇನೆ.
– ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

ವ್ಯವಸ್ಥೆ ಬೇಕು
ಜನರಿಗೆ ನಿಲ್ಲಲು ಸೂಕ್ತ ವ್ಯವಸ್ಥೆಯಾಗಬೇಕು. ತಂಗುದಾಣವಿದ್ದರೂ ದಿಢೀರ್‌ ಬರುವ ಮಳೆಗೆ ಒದ್ದೆಯಾಗುತ್ತಾ ನಿಲ್ಲಬೇಕಾದ ಸ್ಥಿತಿ ಬಂದಿದೆ. 
– ಗಣೇಶ್‌ ಖಾರ್ವಿ, ಪ್ರಯಾಣಿಕರು

Advertisement

Udayavani is now on Telegram. Click here to join our channel and stay updated with the latest news.

Next