Advertisement

ಕುಂದಾಪ್ರ ಕನ್ನಡ ವಿಶ್ವ ವ್ಯಾಪಿ ಆಚರಣೆಗೆ ಪ್ರಯತ್ನ: ಕೋಟ

08:20 AM Jul 21, 2020 | mahesh |

ಕುಂದಾಪುರ: ಕುಂದಾಪ್ರ ಕನ್ನಡ ಆಕರ್ಷಕ ಹಾಗೂ ಅನುಪಮವಾದ ಸಮೃದ್ಧ ಭಾಷೆ. ರಾಜ್ಯ ಮಾತ್ರವಲ್ಲದೆ ವಿಶ್ವ ವ್ಯಾಪಿಯಾಗಿ ಆಚರಿಸಲು ಮುಂದಿನ ದಿನಗಳಲ್ಲಿ ಎಲ್ಲ ರೀತಿಯಲ್ಲೂ ಸಹಕರಿಸುವುದಾಗಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಕೋವಿಡ್ ಭೀತಿಯ ನಡುವೆ ಆಷಾಢ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ)ಯ ದಿನವಾದ ಸೋಮವಾರ ವಿಶ್ವ ಕುಂದಾಪ್ರ ದಿನಾಚರಣೆಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡೇ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ಯೊಂದಿಗೆ ಮಾತನಾಡಿದ ಸಚಿವರು, ಈ ವಿಶ್ವ ಕುಂದಾಪ್ರ ಕನ್ನಡ ದಿನದ ಆಚರಣೆ ಮೂಲಕ ಭಾಷೆಯ ಬಗೆಗಿನ ಅಭಿಮಾನ, ಒಗ್ಗಟ್ಟನ್ನು ತೆರೆದಿಟ್ಟಿದ್ದಾರೆ. ಇದು ಬದುಕಿನ ಭಾಷೆಯಾದ ಕುಂದ ಕನ್ನಡದ ಸೊಗಡನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಭಾಷೆಗಳ ಸ್ಥಿತ್ಯಂತರಗಳ ಅಧ್ಯಯನಕ್ಕೆ ಭಾಷೆಯನ್ನು ಲಿಖಿತವಾಗಿ ದಾಖಲಿಸುವ ಕಾರ್ಯ ಆಗಬೇಕಾಗಿದ್ದು, ಮುಂದಿನ ದಿನಗಳಲ್ಲಿ ಸರಕಾರದ ಮಟ್ಟದಲ್ಲಿ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಶ್ಲಾಘನೀಯ ಕಾರ್ಯ
ಕುಂದಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, “ಕುಂದಾಪ್ರ ಕನ್ನಡ ನಮ್‌ ಅಬ್ಬಿ (ತಾಯಿ) ಇದ್ದಂಗೆ. ಅಬ್ಬಿ ಋಣ ಯಾವಾಗ್ಲೂ ತೀರ್ಸೋಕೆ ಆತಿಲ್ಲೆ. ಇದ್‌ ಸಾವ್ರ ವರ್ಷದ ಗಟ್ಟಿ ಭಾಷಿ’ ಕುಂದಾಪ್ರ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವಕರ ಶ್ರಮ ಶ್ಲಾಘನೀಯ ಎಂದು ಹೇಳಿದರು.

ಹತ್ತಾರು ಕಡೆ ಆಚರಣೆ
ಕುಂದಾಪುರ, ಬೈಂದೂರು, ಬ್ರಹ್ಮಾವರ, ಉಡುಪಿ, ಮಾತ್ರವಲ್ಲದೆ ರಾಜ್ಯದ ನಾನಾ ಕಡೆಗಳಲ್ಲಿ, ದೇಶದ ವಿವಿಧ ಭಾಗಗಳಲ್ಲಿರುವ, ವಿಶ್ವದೆಲ್ಲೆಡೆ ಇರುವ ಕುಂದಾಪುರ ಕನ್ನಡ ಭಾಷಿಕರು ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಆಚರಿಸಿದರು. ಭಾರತ, ಯುಎಇ, ಒಮಾನ್‌, ಕತಾರ್‌, ಕುವೈಟ್‌, ಬಹ್ರೈನ್‌ ಸೇರಿದಂತೆ ವಿವಿಧೆಡೆ ಕಾರ್ಯಕ್ರಮ ನಡೆಸಲಾಗಿದ್ದು, ಜಾಲತಾಣಗಳ ಮೂಲಕ ಲಕ್ಷಾಂತರ ಮಂದಿ ಭಾಗಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next