Advertisement

ಕುಂಚಾವರಂಗೆ ಪ್ರವಾಸಿ ತಾಣ ಮೆರಗು

07:31 PM Apr 05, 2021 | Team Udayavani |

ಚಿಂಚೋಳಿ : ಕುಂಚಾವರಂ ಅರಣ್ಯ ಪ್ರದೇಶ ಕಣ್ಮನ ಸೆಳೆಯುವಂತಿದ್ದು ಪ್ರವಾಸಿ ತಾಣವೆಂದು ಸರ್ಕಾರ ಘೋಷಿಸಬೇಕಿದೆ. ಗೋಪುನಾಯಕ-ಸಂಗಾಪುರ ತಾಂಡಾದ ಹತ್ತಿರ ಬೆಟ್ಟಗುಡ್ಡಗಳಿಂದ ಹರಿದು ಬರುವ ಎತ್ತಪೋತಾ ಜಲಧಾರೆ ನೋಡಲು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಅನೇಕ ನಗರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಪ್ರವಾಸಿಗರು ಪ್ರಕೃತಿ ಸೌಂದರ್ಯ ನೋಡಿ ಆನಂದಿಸಲು ಸೂಕ್ತ ವ್ಯವಸ್ಥೆ-ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತಂಗುದಾಣವೂ ಇಲ್ಲಿಲ್ಲ.

Advertisement

ಕುಂಚಾವರಂ ವನ್ಯಜೀವಿಧಾಮ 13,488,31 ಹೆಕ್ಟೇರ್‌ ಅರಣ್ಯ ಪ್ರದೇಶ ಹೊಂದಿದ್ದು, ಇದರಲ್ಲಿ ವನ್ಯಜೀವಿಧಾಮ ಮೀಸಲು ಅರಣ್ಯಪ್ರದೇಶ ವ್ಯಾಪ್ತಿಗೆ 134.88 ಚದರ ಕಿ.ಮೀ ಒಳಪಡುತ್ತದೆ. ಶ್ರೀಗಂಧ, ಸಾಗವಾನಿ, ಹೊನ್ನೆಕರಮತಿ ವಿವಿಧ ಜಾತಿಯ ಮರ, ಔಷಧ  ಸಸ್ಯ, ಹಣ್ಣಿನ ಮರ, ದೊಡ್ಡದಾದ ಪೊದೆ ಹುಲುಸಾಗಿ ಬೆಳೆದಿವೆ. ಅರಣ್ಯದಲ್ಲಿ ತೋಳ, ಮಂಗ, ಕೋತಿ, ಜಿಂಕೆ, ಕಾಡು ಕುರಿ, ಕಾಡು ಹಂದಿ, ನವಿಲು, ಮುಳ್ಳು ಹಂದಿ, ಮುಂಗಸಿ, ಮೊಲ, ಹಾವು, ಸಾರಂಗ, ಹೆಬ್ಟಾವು, ವಿವಿಧ ಜಾತಿ ಪಕ್ಷಿಗಳು ಇಲ್ಲಿವೆ. ಗೊಟ್ಟಂಗೊಟ್ಟ, ಕುಸರಂಪಳ್ಳಿ ಅರಣ್ಯಪ್ರದೇಶದಲ್ಲಿ ಆಗಾಗ ಚಿರತೆಗಳು ಕಾಣಿಸುತ್ತವೆ. ಕುಂಚಾವರಂ ಮೀಸಲು ವನ್ಯಜೀವಿಧಾಮ ಅರಣ್ಯ ಪ್ರದೇಶದಲ್ಲಿ ಸುಮಾರು 100 ಕಿಲೋ ಮೀಟರ್‌ ಉದ್ದದ ಅರಣ್ಯದ ಸುಂದರ ಬೆಟ್ಟಗುಡ್ಡ, ಹಸಿರು ಬೆಟ್ಟಗಳ ಸೌಂದರ್ಯ, ವನಸಿರಿ ಸೊಬಗು ನೋಡಿ ಆನಂದಿಸಲು ವನ್ಯಜೀವಿಧಾಮ ಇಲಾಖೆಯಿಂದ ವಾಚ್‌ ಗೋಪುರಗಳನ್ನು ನಿರ್ಮಿಸಲಾಗಿದೆ.

ಕುಂಚಾವರಂ ವನ್ಯಜೀವಿಧಾಮದಲ್ಲಿ ಮಂಡಿ ಬಸವಣ್ಣ, ಬುರುಗದೊಡ್ಡಿ, ಕೋತ್ವಾಲ ನಾಲಾ, ಗೊಟ್ಟಂಗೊಟ್ಟ, ಹಾಥಿ ಲಾಲ್‌ ತಲಾಬ, ಸೇರಿಭಿಕನಳ್ಳಿ, ನಿಜಾಮ ದೊರೆ ಆಡಳಿತದಲ್ಲಿ ನಿರ್ಮಿಸಿದ ತಾಣಗಳು, ಮುಲ್ಲಾಮಾರಿ ನದಿ ದಂಡೆಯಲ್ಲಿನ ಪಂಚಲಿಂಗ ಹತ್ತಿರ ಹರಿಯುವ ಬುಗ್ಗಿ ನೋಡಲು ಜನರನ್ನು ಕೈ ಮಾಡಿ ಕರೆಯುವಂತಹ ಸುಂದರ ತಾಣಗಳಿವೆ. ಶಿವರಾಮಪುರ-ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ಬರುವ ಕುಂಚಾವರಂ ಅರಣ್ಯ ಪ್ರದೇಶವನ್ನು 2011ರಲ್ಲಿ ರಾಜ್ಯ ಸರ್ಕಾರ ವನ್ಯಜೀವಿಧಾಮ ಪ್ರದೇಶವೆಂದು ಘೋಷಣೆ ಮಾಡಿದೆ.

ಇದಾದ ನಂತರ ಕಾಡಿನಲ್ಲಿ ವಿವಿಧ ಜಾತಿಯ ಮರಗಳು, ಔಷ ಧೀಯ ಸಸ್ಯಗಳು, ವಿವಿಧ ಜಾತಿಯ ಹಕ್ಕಿಗಳು, ಕಾಡು ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ. ಸೇರಿಭಿಕನಳ್ಳಿ, ಶಾದೀಪುರ, ಮಂಡಿ ಬಸವಣ್ಣ, ಸಂಗಾಪುರ, ಗೊಟ್ಟಂಗೊಟ್ಟ,ಬೊಮ್ಮಾಪುರ, ಕುಂಚಾ ವರಂ- ಜಹೀರಾಬಾದ ರಸ್ತೆ, ಬಡಾತಾಂಡಾ, ವಂಟಿ ಚಿಂತಾ ತಾಂಡಾ ಪ್ರದೇಶ ಮತ್ತು ಬಡೆಸಾಬ್‌ ದರ್ಗಾ ಅರಣ್ಯಪ್ರದೇಶ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಮಳೆಗಾಲ-ಚಳಿಗಾಲದಲ್ಲಿ ಕುಂಚಾವರಂ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತದೆ.

ಸಣ್ಣ ಪುಟ್ಟ ಜಲಪಾತಗಳು, ಬಾನೆತ್ತರಕ್ಕೆ ಬೆಳೆದಿರುವ ವಿವಿಧ ಜಾತಿಯ ಗಿಡಮರಗಳು, ಚಿಟ್ಟೆಗಳು, ವಿವಿಧ ಹೂವು ಬಳ್ಳಿಗಳು, ಹಕ್ಕಿಗಳ ಕಲರವ, ಕಾಡು ಪ್ರಾಣಿಗಳ ಕೂಗಾಟ ನೋಡುವ ಪ್ರದೇಶವೆಂದರೆ ಕುಂಚಾವರಂ ಅರಣ್ಯ ಪ್ರದೇಶ. ಆದ್ದರಿಂದ ಸರ್ಕಾರ ಈ ಪ್ರದೇಶವನ್ನು ಪ್ರವಾಸಿ ತಾಣವೆಂದು ಘೋಷಿಸಬೇಕು. ಬಂಡಿಪುರ, ಅಭಯಾರಣ್ಯ ದೊಡ್ಡವಾದ ಕಾಡು ಪ್ರದೇಶ ಇಲ್ಲಿದ್ದು,ಇದರ ರಕ್ಷಣೆ ನಮ್ಮೆಲ್ಲರದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next