ಕುಂಬಳೆ: ಶಿಥಿಲ ಕುಂಬಳೆ ಬಸ್ ನಿಲ್ದಾಣವನ್ನು ಕಾನೂನಿನ ಬಲಪ್ರಯೋಗಿಸಿ ಕೆಡವಲಾಯಿತು. ಕಟ್ಟಡದೊಳಗೆ ವ್ಯಾಪಾರ ನಡೆಸುತ್ತಿರುವವರೆಲ್ಲರನ್ನೂ ಕಾನೂನಿನ ಬಲಪ್ರಯೋಗಿಸಿ ಬಿಡುಗಡೆಗೊಳಿಸಲಾಯಿತು. ಆಡಳಿತದ ಈ ಆತುರದ ನಿರ್ಧಾರ ಕಟ್ಟಡ ನೆಲಸಮಗೊಳಿಸುವ ತನಕ ಮಾತ್ರ ಸೀಮಿತವಾಯಿತು.ಆ ಬಳಿಕ ಬಸ್ ಪ್ರಯಾಣಿಕರು ಅಂಗಡಿ ಬಾಗಿಲಲ್ಲಿ ಬಸ್ಸಿಗಾಗಿ ಕಾಯುವಂತಾಗಿದೆ.ಕೆಲವರು ಬಿರು ಬಿಸಿಲಲ್ಲೇ ಹಿಂಸೆ ಅನುಭವಿಸಬೇಕಾಗಿದೆ.
ಇದೀಗ ಮುಂಗಾರು ಆರಂಭವಾಗುವ ಹಂತದಲ್ಲಿದೆ.ಆದರೆ ಬಸ್ಸಿಗಾಗಿ ಕಾಯಲು ಕುಂಬಳೆ ನಿಲ್ದಾಣ ಪ್ರದೇಶದಲ್ಲಿ ಸ್ಥಳವಿಲ್ಲ.ಕಟ್ಟಡ ಕೆಡವಿದ ಸ್ಥಳದಲ್ಲಿ ವಾಹನಗಳ ಪಾರ್ಕ್ ಮತ್ತು ಕೆಲವೊಂದು ಸಂತೆಗಳನ್ನು ಕಾಣಬಹುದು.
ಸ್ಥಳೀಯಾಡಳಿತ ನಿಲ್ದಾಣ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಲು ಮುಂದಾಗಿದೆಯಂತೆ.ಆದರೆ ಈ ತನಕ ಇದಕ್ಕೆ ತಾಂತ್ರಿಕ ಅನುಮತಿ ದೊರೆತಿಲ್ಲವಂತೆ.ಮಳೆಗಾಲಕ್ಕೆ ಮುನ್ನ ಅನುಮತಿ ದೊರೆಯುವ ಭರವಸೆ ಹೊಂದಲಾಗಿದೆ.
ಮುಂದಿನ ವಾರದಲ್ಲಿ ಶೆಲ್ಟರ್ ಕಾಮಗಾರಿ ಆರಂಭವಾಗಲಿರುವುದಾಗಿ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರೋರ್ವರು ಭರವಸೆ ನೀಡಿದ್ದಾರೆ. ಆದರೆ ಈ ತನಕ ಕಾಮಗಾರಿ ನಡೆದಿಲ್ಲ.ಮುಂದೆ ಯಾವಾಗ ನಡೆಯುವುದೋ ತಿಳಿಯದು.
ತಾತ್ಕಾಲಿಕ ಶೆಲ್ಟರ್‌ಗಾಗಿ 50 ಸಹಸ್ರದ ಯೋಜನೆಯನ್ನು ಸಿದ್ಧಪಡಿಸಲಾಗಿದೆ.ತಾಂತ್ರಿಕ ಅನುಮತಿ ದೊರಕಿದ ಬಳಿಕ ಕಾಮಗಾರಿ ಕೈಗೊಳ್ಳಲಾಗುವುದೆಂಬುದಾಗಿ ಗ್ರಾ. ಪಂ. ಅಧ್ಯಕ್ಷರು ಉದಯವಾಣಿಗೆ ತಿಳಿಸಿದ್ದಾರೆ.ಆದರೆ ತಾಂತ್ರಿಕ ಅನುಮತಿಗೆ ಇನ್ನೆಷ್ಟು ಕಾಲ ಕಾಯಬೇಕೋ ? ಪ್ರಯಾಣಿಕರು ಬಸ್ಸಿಗಾಗಿ ಮಳೆಯಲ್ಲಿ ಒದ್ದಾಡಬೇಕೋ ಆ ದೇವರೇ ಬಲ್ಲ.
– ಅಚ್ಯುತ ಚೇವಾರ್
ಚಿತ್ರ: ಹರೀಶ್ ಮೆಘಾ ಕುಂಬಳೆ