ನವದೆಹಲಿ: ಕೋವಿಡ್ ಸೋಂಕು ಪ್ರಕರಣ ದೇಶದಲ್ಲಿ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಏ.17) ಜುನಾ ಅಖಾಡದ ಮುಖ್ಯಸ್ಥ ಸ್ವಾಮಿ ಅವಧೇಶಾನಂದ ಅವರಲ್ಲಿ, ಈಗ ನಡೆಯುತ್ತಿರುವ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಸ್ ಚಾಲಕನನ್ನು ಕಲ್ಲಿನಿಂದ ಹೊಡೆದು ಕೊಂದ ಘಟನೆ ನನ್ನನ್ನು ದಿಗ್ಭ್ರಾಂತನನ್ನಾಗಿಸಿದೆ: HDK
ಕುಂಭಮೇಳದಲ್ಲಿ ಗಂಗಾನದಿಯಲ್ಲಿ ಈಗಾಗಲೇ ನಡೆದ ಎರಡು ಶಾಹಿ ಸ್ನಾನಗಳಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಇದರಿಂದಾಗಿ ಕೋವಿಡ್ ಸೋಂಕು ಇನ್ನಷ್ಟು ಹೆಚ್ಚಳವಾಗಲಿದೆ ಎಂಬ ಆತಂಕ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಸದ್ಯ ನಡೆಯುತ್ತಿರುವ ಕುಂಭಮೇಳವನ್ನು ಸಾಂಕೇತವಾಗಿ ಆಚರಿಸುವ ಮೂಲಕ ಕೋವಿಡ್ ಸೋಂಕು ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ತುಂಬಬೇಕಾಗಿದೆ ಎಂದು ಪ್ರಧಾನಿ ಮೋದಿ ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕುಂಭಮೇಳದಲ್ಲಿ ಪಾಲ್ಗೊಂಡಿರುವ ಹಲವು ಸಾಧುಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರ ಆರೋಗ್ಯದ ಕುರಿತು ವಿಚಾರಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಸ್ಥಳೀಯ ಆಡಳಿತಕ್ಕೆ ಅಖಾಡಗಳು ನೀಡಿರುವ ಸಹಕಾರಕ್ಕೆ ಅಭಿನಂದನೆ ತಿಳಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಕುಂಭಮೇಳದಲ್ಲಿ ಪಾಲ್ಗೊಂಡಿರುವ ಸುಮಾರು 2,000 ಸಾಧುಗಳಿಗೆ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಎರಡು ಶಾಹಿ ಸ್ನಾನಗಳಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡೆಗಣಿಸಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆಯಲ್ಲಿ ಮಾತನಾಡಿದ ನಂತರ ಸ್ವಾಮಿ ಅವಧೇಶಾನಂದ ಅವರು, ಕುಂಭಮೇಳಕ್ಕೆ ಬೃಹತ್ ಸಂಖ್ಯೆಯಲ್ಲಿ ಜನರು ಆಗಮಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಜನರು ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ ಇತರರು ಬದುಕುಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.