Advertisement

ಕ್ಯಾಬ್‌ ಚಾಲಕರಿಗಾಗಿ ಆ್ಯಪ್‌ ರೂಪಿಸಲು ಎಚ್‌ಡಿಕೆ ನಿರ್ಧಾರ

11:48 AM Mar 10, 2017 | Team Udayavani |

ಬೆಂಗಳೂರು: ಓಲಾ ,ಉಬರ್‌  ಮತ್ತು ಟ್ಯಾಕ್ಸಿ ಚಾಲಕರ ನಡುವಿನ ವಿವಾದ ಈಗಾಗಲೇ ತಾರಕಕ್ಕೇರಿದೆ. ಪ್ರತಿಭಟನೆಗಳೂ ನಡೆದು ಹೋಗಿವೆ. ಒಂದಷ್ಟು ಚಾಲಕರು ಸಂಸ್ಥೆಯಿಂದ ಹೊರಬಿದ್ದದ್ದೂ ಆಗಿದೆ. ಹೀಗಿರುವಾಗಲೇ, ಚಾಲಕರ ಸಮಸ್ಯೆ ನಿವಾರಣೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಸಂಕಷ್ಟದಲ್ಲಿರುವ ಚಾಲಕರಿಗಾಗಿ ತಾವೇ ಪ್ರತ್ಯೇಕ ಆ್ಯಪ್‌ ರೂಪಿಸಲು ಎಚ್‌ಡಿಕೆ ನಿರ್ಧರಿಸಿದ್ದಾರೆ. ಚಾಲಕರು ಈ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ದುಡಿಮೆ ಮಾಡಬಹುದಾಗಿದೆ. 

Advertisement

ಈ ಮೂಲಕ 25 ಸಾವಿರ ಚಾಲಕರ ಕುಟುಂಬಗಳಿಗೆ ಸಹಾಯ ಕಲ್ಪಿಸುವುದು ಕುಮಾರಸ್ವಾಮಿಯವರ ಉದ್ದೇಶ. ಜತೆಗೆ ರಾಜಕೀಯವಾಗಿಯೂ ಇದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಬಹುದು ಎಂಬ ಹಿನ್ನೆಲೆಯಲ್ಲಿ ಇಂತದ್ದೊಂದು ಕಾರ್ಯಕ್ಕೆ ಎಚ್‌ಡಿಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಓಲಾ ಮತ್ತು ಉಬರ್‌ ಸಂಸ್ಥೆಗಳಿಗೆ ವಾಹನ ನೋಂದಾಯಿಸಿಕೊಂಡಿದ್ದ ಚಾಲಕರು ತಮಗಾಗುತ್ತಿರುವ ತೊಂದರೆ ಮತ್ತು ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಿದ್ದರು. ಆದರೆ, ಸಂಸ್ಥೆಗಳು ಚಾಲಕರಿಗೆ ಸ್ಪಂದಿಸಲಿಲ್ಲ. ಈ ಕಾರಣಕ್ಕೆ ಚಾಲಕರು ಆ ಸಂಸ್ಥೆಗಳಿಂದ ಹೊರಬಂದಿದ್ದಾರೆ. ಕಂಪನಿಗಳಿಂದ ಹೊರಬಂದ ಮೇಲೆ ಸಾರ್ವಜನಿಕರಿಗೆ ಸೇವೆ ಒದಗಿಸಲು ಚಾಲಕರಿಗೆ ಸಂಪರ್ಕ ಸಾಧನವಿರಲಿಲ್ಲ. ಈ ಕೊರತೆ ತುಂಬಲು ಪ್ರತ್ಯೇಕ ಆ್ಯಪ್‌ ಸೇವೆ ಪ್ರಾರಂಭಿಸಲು ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ.

ಸಹಾಯವಾಣಿ ಕೇಂದ್ರದ ಸಹತ ಹೊಸ ಆ್ಯಪ್‌ ಸೇವೆ ಪ್ರಾರಂಭಿಸಲು ಸುಮಾರು 10 ಲಕ್ಷ ರೂ.ವರೆಗೆ ವೆಚ್ಚವಾಗಬಹುದು ಎನ್ನಲಾಗಿದ್ದು, ಆ ಹಣವನ್ನು ಕುಮಾರಸ್ವಾಮಿ ಸ್ವಂತವಾಗಿ ಭರಿಸಲಿದ್ದಾರೆ. ಓಲಾ ಮತ್ತು ಉಬರ್‌ ಸಂಸ್ಥೆಗಳಿಗೆ ವಾಹನ ನೋಂದಾಯಿಸಿರುವ ಚಾಲಕರು ಇದೀಗ ಹೊಸ ಆ್ಯಪ್‌ನಡಿ ಸೇವೆ ನೀಡಬಹುದಾಗಿದೆ.

ಹೊಸ ಆ್ಯಪ್‌ನ ವಿನ್ಯಾಸ ಕುರಿತು ಖಾಸಗಿ ಕಂಪನಿಯೊಂದಿಗೆ ಕುಮಾರಸ್ವಾಮಿ ಮಾತುಕತೆ ನಡೆಸುತ್ತಿದ್ದು, ಆದಷ್ಟು ಶೀಘ್ರ ಆ್ಯಪ್‌ ಸಿದ್ಧವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಓಲಾ ಮತ್ತು ಉಬರ್‌ ಸಂಸ್ಥೆಗಳ ಧೋರಣೆಯಿಂದ ಬೇಸರಗೊಂಡ ಆ ಸಂಸ್ಥೆಗಳ ಒಪ್ಪಂದಿಂದ ಹೊರ ಬಂದಿರುವ ಚಾಲಕರು ಹೊಸ ಆ್ಯಪ್‌ನಡಿ ನೋಂದಾಯಿಸಿಕೊಳ್ಳಬಹುದು.

Advertisement

ಅದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಜತೆಗೆ ಚಾಲಕರು ಗಳಿಸಿದ ಆದಾಯದಲ್ಲೂ ಯಾರಿಗೂ ಪಾಲು ಕೊಡಬೇಕಿಲ್ಲ. ಗ್ರಾಹಕರ ಜತೆ ನೇರವಾಗಿಯೇ ಸಂಪರ್ಕಿಸಿ ನಿಯಮಾನುಸಾರ ದರ ನಿಗದಿಪಡಿಸಿಕೊಂಡು ಹಣ ಪಡೆಯಬಹುದು ಎಂದು ಹೇಳಲಾಗಿದೆ.

ಪ್ರಯಾಣಿಕರಿಗೆ ಉಬರ್‌ ನೀತಿ
ಬೆಂಗಳೂರು:
ಈಚೆಗೆ ಆ್ಯಪ್‌ ಆಧಾರಿತ ಟ್ಯಾಕ್ಸಿ ಚಾಲಕರ ಪ್ರತಿಭಟನೆ ವೇಳೆ ಕಾರುಗಳ ಮೇಲೆ ಕಲ್ಲು ತೂರಾಟ, ಮೊಟ್ಟೆ ಒಡೆದ ಘಟನೆಗಳು ನಡೆದ ಬೆನ್ನಲ್ಲೇ ಉಬರ್‌ ಕಂಪೆನಿಯು ಪ್ರಯಾ­ಣಿಕರಿಗೂ ಮಾರ್ಗಸೂಚಿಗಳನ್ನು ಹೊರಡಿಸಿದೆ. 

ಚಾಲಕರ ಸ್ವತ್ತನ್ನು ಪ್ರಯಾಣಿಕರು ಹಾಳು­ಮಾಡುವುದು, ಫೋನ್‌ ಒಡೆಯುವುದು, ಉದ್ದೇಶಪೂರ್ವಕವಾಗಿ ಆಹಾರ ಅಥವಾ ಪಾನೀಯ ಚೆಲ್ಲುವುದನ್ನು ನಿಷೇಧಿಸಿ ನೀತಿ ನಿಬಂಧನೆ ರೂಪಿಸಿದೆ. ಚಾಲಕ ಅಥವಾ ಸಹ ಪ್ರಯಾಣಿಕರನ್ನು ದೈಹಿಕವಾಗಿ ಮುಟ್ಟುವುದು, ಅಸಮರ್ಪಕ ಅಥವಾ ಅವಹೇಳನಕಾರಿ ಭಾಷೆಯನ್ನು ಚಾಲಕರ ವಿರುದ್ಧ ಬಳಸುವುದು, ಬೆದರಿಕೆ ಹಾಕುವುದು, ಅತಿರೇಕದಿಂದ ವರ್ತಿಸುವಂತಿಲ್ಲ ಎಂದು ಉಬರ್‌ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖೀಸಿದೆ. 

ಅಷ್ಟೇ ಅಲ್ಲ, ಟ್ರಿಪ್‌ ಮುಗಿದ ನಂತರವೂ ಚಾಲಕ ಮತ್ತು ಸಹ ಪ್ರಯಾಣಿಕರ ಜತೆ ಅನಗತ್ಯ ಸಂಪರ್ಕ ಹೊಂದುವುದು, ಕಾರಿನಲ್ಲಿ ಡ್ರಗ್ಸ್‌ನ ತೆರೆದ ಕಂಟೈನರ್‌ ತರುವುದು, ವೇಗ ಮಿತಿಯಂತಹ ರಸ್ತೆಗಳಲ್ಲಿ ನಿಯಮಗಳನ್ನು ಮೀರುವಂತೆ ಚಾಲಕರಿಗೆ ಸೂಚಿಸಬಾರದು ಎಂದು ಸೂಚಿಸಿದೆ. 

ಹಾಗೊಂದು ವೇಳೆ ಈ ರೀತಿಯ ವರ್ತನೆಗಳು ಕಂಪೆನಿ ಅರಿವಿಗೆ ಬಂದರೆ, ಅಂತಹ ಪ್ರಯಾಣಿಕರ ಖಾತೆಯನ್ನೇ ಅಮಾನತು ಮಾಡಲಾಗುವುದು. ಸಮಸ್ಯೆ ಗಂಭೀರವಾಗಿದ್ದರೆ, ಗ್ರಾಹಕರ ಉಬರ್‌ ಪ್ರವೇಶವನ್ನು ಸ್ಥಗಿತಗೊಳಿಸಲಾಗುವುದು ಎಂದು ಮಾರ್ಗ­ಸೂಚಿಯಲ್ಲಿ ಹೇಳಲಾಗಿದೆ. 

ಅದೇ ರೀತಿ ಉಬರ್‌ ಆ್ಯಪ್‌ ಸೇವೆಯೊಂದಿಗೆ ನೋಂದಣಿ ಮಾಡಿಕೊಂಡಿರುವ ಟ್ಯಾಕ್ಸಿ ಚಾಲಕರಿಗೂ ಕೆಲವು ಸೂಚನೆಗಳನ್ನು ನೀಡಿರುವ ಕಂಪೆನಿ, ಸರಾಸರಿ ರೇಟಿಂಗ್‌ 4 ಇರಬೇಕು, ಟ್ರಿಪ್‌ ರದ್ದತಿ, ಸಮ್ಮತಿ ದರ ಸೇರಿದಂತೆ ಹಲವು ಅಂಶಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ. 

ಚಾಲಕರ ಪ್ರತಿಭಟನೆ ಸಂದರ್ಭದಲ್ಲಿ ಪ್ರಯಾಣಿಕರ ನೆಪದಲ್ಲಿ ಕೆಲ ಕಿಡಿಗೇಡಿಗಳು ಕಾರುಗಳನ್ನು ಏರಿ ಮೊಟ್ಟೆಗಳನ್ನು ಒಡೆದು, ಚಾಲಕರಿಗೆ ಬೆದರಿಕೆ ಒಡ್ಡಿದ ಘಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಮಾನವೀಯತೆ ದೃಷ್ಟಿಯಿಂದ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಲಾಭದ ಮಾತಿಲ್ಲ. ಬೀದಿಗೆ ಬಿದ್ದಿರುವ ಚಾಲಕರ ಕುಟುಂಬಗಳಿಗೆ ಜೀವನ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಇದಾಗಿದೆ 
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next