ಜೆಡಿ(ಎಸ್)-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಚುನಾವಣೆ ಬಳಿಕ ರಾಜ್ಯದ ರಾಜಕೀಯದಲ್ಲಿದ್ದ ಅನಿಶ್ಚಿತತೆಯೂ ಒಂದು ಹಂತಕ್ಕೆ ಮುಗಿದಂತಾಗಿದೆ. ರಾಜ್ಯದ ಪಾಲಿಗಿದು ನಾಲ್ಕನೇ ಸಮ್ಮಿಶ್ರ ಸರಕಾರ. ಹಿಂದೆಂದೂ ಈ ಸಲ ಎದ್ದಷ್ಟು ರಾಜಕೀಯ ರಾಡಿ ಎದ್ದಿರಲಿಲ್ಲ. ಈ ಕಾರಣಕ್ಕೆ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದರೂ ಬಹುಮತವಿಲ್ಲದ ಕಾರಣಕ್ಕೆ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿರುವ ಪಕ್ಷಗಳು ಸರಕಾರ ರಚಿಸಿವೆ.
ಎರಡು ಕಾರಣಕ್ಕೆ ಇಂದಿನ ಪ್ರಮಾಣ ವಚನ ಸಮಾರಂಭ ಗಮನ ಸೆಳೆದಿದೆ. ಒಂದು ಬರೀ 37 ಸ್ಥಾನಗಳನ್ನು ಹೊಂದಿರುವ ಪಕ್ಷ ಅಧಿಕಾರ ಸೂತ್ರ ಹಿಡಿದದ್ದು. ಎರಡನೆಯದ್ದು ಈ ಸಮಾರಂಭದಲ್ಲಿ ಬಿಜೆಪಿ ವಿರೋಧಿಗಳೆಲ್ಲ ಒಗ್ಗೂಡಿರುವುದು. ಬಿಜೆಪಿಗೆ ಪರ್ಯಾಯವಾಗಿ ತೃತೀಯ ಶಕ್ತಿಯೊಂದು ಉದಯವಾಗಲು ಈ ಸಮಾರಂಭ ವೇದಿಕೆಯಾಯಿತು ಎನ್ನುವುದು ರಾಷ್ಟ್ರೀಯ ನೆಲೆಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿರುವ ಅಂಶ.
ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಹಲವು ಪ್ರಾದೇಶಿಕ ಪಕ್ಷಗಳ ಮುಖಂಡರು, ಬಿಜೆಪಿ ವಿರೋಧಿ ರಾಷ್ಟ್ರೀಯ ನಾಯಕರ ಸಮಾವೇಶಕ್ಕೆ ಕಾರಣವಾಗಿರುವ ಈ ಬೆಳವಣಿಗೆ ರಾಷ್ಟ್ರ ರಾಜಕಾರಣದ ದಿಕ್ಕನ್ನು ಬದಲಾಯಿಸೀತೇ ಎನ್ನುವುದನ್ನು ಈಗಲೇ ಹೇಳುವುದು ಅಸಾಧ್ಯ. ಆದರೆ ಬಿಜೆಪಿಯನ್ನು ಕಟ್ಟಿ ಹಾಕಲು ಎಲ್ಲ ವಿರೋಧ ಪಕ್ಷಗಳು ಒಗ್ಗಟ್ಟಾಗುತ್ತಿವೆ ಎಂಬ ಸಂದೇಶವಂತೂ ರವಾನೆಯಾಗಿದೆ.
ಇಂದಿನ ಸಮಾರಂಭದಲ್ಲಿ ಭಾಗವಹಿಸಿದವರಲ್ಲಿ ಚಂದ್ರಬಾಬು ನಾಯ್ಡು, ಪಿಣರಾಯಿ ವಿಜಯನ್, ಕೆ.ಸಿ.ಆರ್.ಚಂದ್ರಶೇಖರ್, ಮಮತಾ ಬ್ಯಾನರ್ಜಿ ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಅಧಿಕಾರ ವಂಚಿತರು. ಅಖೀಲೇಶ್ ಯಾದವ್, ಮಾಯಾವತಿ, ಸೀತಾರಾಮ್ ಯೆಚೂರಿ, ಶರದ್ ಪವಾರ್, ಸೋನಿಯಾ, ರಾಹುಲ್ ಇವರೆಲ್ಲ ಚುನಾವಣೆಗಳಲ್ಲಿ ಸೋತವರು. ಒಂದು ಲೆಕ್ಕದಲ್ಲಿ ಇದು ರಾಜಕೀಯ ಅಸ್ತಿತ್ವ ಪಡೆಯುವ / ಪುನರ್ ಸ್ಥಾಪಿಸುವ ಪ್ರಯತ್ನವಾಗಿಯೂ ತೋರುತ್ತಿದೆ. ಹೀಗಾಗಿ ಈ ಶಕ್ತಿ ಪ್ರದರ್ಶನವನ್ನು ಐಡೆಂಟಿಟಿ ಪಾಲಿಟಿಕ್ಸ್ ಎನ್ನಬಹುದು. ಪ್ರಾದೇಶಿಕ ಪಕ್ಷಗಳು ರಚಿಸಲುದ್ದೇಶಿಸಿರುವ ಈ ತೃತೀಯ ರಂಗದಲ್ಲಿ ಕಾಂಗ್ರೆಸ್ ಯಾವ ಪಾತ್ರ ವಹಿಸಲಿದೆ ಎನ್ನುವುದು ಕುತೂಹಲಕಾರಿ ಅಂಶ. ಸದ್ಯ ಒಟ್ಟಾಗಿರುವವರೆಲ್ಲ ವಿವಿಧ ಕಾಲಘಟ್ಟದಲ್ಲಿ ಬೇರೆ ಬೇರೆ ತೃತೀಯ ರಂಗಗಳಲ್ಲಿ ಗುರುತಿಸಿಕೊಂಡವರು. ಆದರೆ ಈ ಎಲ್ಲ ಸಂದರ್ಭದಲ್ಲಿ ಒಂದೋ ಕಾಂಗ್ರೆಸ್ ಇಲ್ಲವೇ ಬಿಜೆಪಿ ದೊಡ್ಡಣ್ಣನ ಸ್ಥಾನದಲ್ಲಿತ್ತು. ಸದ್ಯಕ್ಕೆ ಕಾಂಗ್ರೆಸ್‌ಗೆ ಈ ಪಾತ್ರ ನಿಭಾಯಿಸುವ ಸಾಮರ್ಥ್ಯವಿಲ್ಲ. ಆದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಇಡೀ ದೇಶದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅಗತ್ಯವಿದೆ. ಈ ಪ್ರಯತ್ನದಲ್ಲಿ ಅದು ಪುಟಿದೇಳಬಹುದು. ಹೀಗಾದಾಗ ತೃತೀಯ ರಂಗ ಇದೇ ರೂಪದಲ್ಲಿ ಉಳಿದೀತೆ ಎಂಬ ಕುತೂಹಲ ಸದ್ಯದ್ದು.
ವಿರೋಧ ಪಕ್ಷಗಳ ಈ ಒಗ್ಗಟ್ಟು ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ಅವಲಂಬಿಸಿದೆ. ಪರಸ್ಪರ ಹೊಂದಿಕೊಂಡು ಯಾವುದೇ ವಿವಾದಗಳಿಗೆ ಎಡೆಯಿಲ್ಲದಂತೆ ಸರಕಾರವನ್ನು ನಡೆಸಿಕೊಂಡು ಹೋದರೆ ಈ ಮಾದರಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬಹುದು. ಆದರೆ ಎರಡೂ ಪಕ್ಷಗಳಲ್ಲಿ ಅಧಿಕಾರಕ್ಕಾಗಿ ಕಾದು ಕುಳಿತಿರುವವರ ದೊಡ್ಡ ದಂಡೇ ಇರುವುದರಿಂದ ಸರಕಾರ ಎಷ್ಟು ಸಮಯ ಬಾಳುತ್ತದೆ ಎನ್ನುವ ಅನುಮಾನವೂ ಇದ್ದೇ ಇದೆ. ಪ್ರಜಾತಂತ್ರದಲ್ಲಿ ಯಾವುದೇ ಬಗೆಯ ಏಕಸ್ವಾಮ್ಯ ಅಪಾಯಕಾರಿ. ಈ ನಿಟ್ಟಿನಲ್ಲಿ ಬಿಜೆಪಿಯನ್ನು ಎದುರಿಸಲು ತೃತೀಯ ಶಕ್ತಿಗಳ ಕ್ರೋಢೀಕರಣವಾಗುತ್ತಿರುವುದು ಪ್ರಜಾತಂತ್ರದ ಹಿತದೃಷ್ಟಿಯಿಂದ ಆರೋಗ್ಯಕಾರಿ ನಡೆ ಎಂದಷ್ಟೇ ಹೇಳಬಹುದು.