ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಹತ್ತಾರು ವರ್ಷದಿಂದ ದೂರುಗಳಿವೆ. ಅದನ್ನು ತಡೆಯುವಂತೆ ಕೂಗು ಕೇಳಿ ಬರುತ್ತಿದೆ. ಗಣಿಗಾರಿಕೆಗಿಂತ ಕೆ ಆರ್ ಎಸ್ ಜಲಾಶಯ ಬಹಳ ಮುಖ್ಯ. ತಜ್ಞರ ನೇಮಕ ಮಾಡಿ ವರದಿ ಪಡೆದು ಕ್ರಮಕೈಗೊಳ್ಳಬೇಕು. ಆದರೆ, ಕುಮಾರಸ್ವಾಮಿ ಸಂಸದರ ಬಗ್ಗೆ ಆ ರೀತಿಯ ಹೇಳಿಕೆ ಕೊಡಬಾರದಾಗಿತ್ತು. ಎಂಥಹ ಕಠಿಣ ಸಂದರ್ಭ ಬಂದರೂ ಕುಮಾರಸ್ವಾಮಿ ಎದುರಿಸಿದ್ದಾರೆ. ಒಳ್ಳೆಯದು ಮಾಡುವಾಗಲೂ ಅಪವಾದ ಬರಲಿದೆ ಎಂದು ಜಿ.ಟಿ ದೇವೇಗೌಡ ಹೇಳಿಕೆ ನೀಡಿದ್ದಾರೆ.
ಸಂಸದರು ಕೂಡ ಜಲಾಶಯದ ಬಿರುಕಿನ ಬಗ್ಗೆ ಹೇಳಿಕೆ ನೀಡಬಾರದಾಗಿತ್ತು. ಮಾಹಿತಿ ಕೊರತೆಯಿಂದ ಆ ಹೇಳಿಕೆ ಕೊಟ್ಟಿದ್ದಾರೆ. ಸಂಸದರಾಗಿದ್ದು, ಹೇಳಿಕೆ ಕೊಡುವಾಗ ಜವಾಬ್ದಾರಿ ಇರಬೇಕು. ಮೈಸೂರಿನ ಮಹಾರಾಜರ ಪರಿಶ್ರಮದಿಂದ ಜಲಾಶಯ ಆಗಿದೆ. ಮಾಹಿತಿ ತಿಳಿದುಕೊಂಡು ಹೇಳಿಕೆ ನೀಡಬೇಕು. ಪ್ರತಿಯೊಂದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ನಾನು ಚಾಮರಾಜಪೇಟೆ ಪೇಟೆ ಅಳಿಯ ಎಂಬ ಸಿದ್ದು ದಿಢೀರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಜಿ.ಟಿ ದೇವೇಗೌಡ, ಸಿದ್ದರಾಮಯ್ಯ ಚಾಮರಾಜಪೇಟೆಗೆ ಬಂದಾಗ ಚಾಮರಾಜಪೇಟೆ ಅಳಿಯ ಅಂತಾರೆ. ಮೈಸೂರಿಗೆ ಬಂದಾಗ ಮೈಸೂರು ಮಗ ಅಂತಾರೆ. ಜಮೀರ್ ಅಹಮ್ಮದ್ ಅಭಿಮಾನದಿಂದ ಆಹ್ವಾನ ನೀಡಿದ್ದಾರೆ. ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ. ಸ್ವತಃ ಅವರೇ ಇನ್ನೂ ನಿರ್ಧಾರ ಮಾಡಿಲ್ಲ ಅಂತಾ ಹೇಳಿದ್ದಾರೆ. ಹಾಗಾಗಿ ಯಾರು ಯಾವ ಕ್ಷೇತ್ರದಲ್ಲಿ ನಿಲ್ತಾರೆ ಅಂತಾ ಹೇಳೋಕೆ ಆಗೋದಿಲ್ಲ ಎಂದರು.
ಚುನಾವಣೆಯ ಕೊನೆಯ ಕ್ಷಣದವರೆಗೂ ಗೊತ್ತಾಗೋದಿಲ್ಲ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಬದಾಮಿಯಿಂದ ಸ್ಪರ್ಧಿಸ್ತಾರೆ ಅಂತಾ ಯಾರಿಗೆ ಗೊತ್ತಿತ್ತು. ಕೊನೆಯ ಕ್ಷಣದಲ್ಲಿ ಅಲ್ಲಿಗೆ ಹೋಗಿ ಸ್ಪರ್ಧೆ ಮಾಡಲಿಲ್ಲವೇ ? ಅದೇ ಕಾರಣಕ್ಕೆ ಈಗಲೇ ಯಾವ ಕ್ಷೇತ್ರ ಅಂತಾ ಹೇಳೋಕೆ ಆಗೋದಿಲ್ಲ. ಮುಖ್ಯಮಂತ್ರಿಗಳನ್ನೂ ಅಷ್ಟೇ ಕೊನೆಯ ಕ್ಷಣದವರೆಗೆ ಹೇಳಲು ಆಗೋದಿಲ್ಲ ಎಂದರು.
ಚಾಮರಾಜಪೇಟೆಗೆ ಸಿದ್ದರಾಮಯ್ಯ ಜೊತೆ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಹೌದು.. ನಾನು ಕೂಡ ಚಾಮರಾಜಪೇಟೆಗೆ ಹೋಗುತ್ತಿದ್ದೆ. ಸಿದ್ದರಾಮಯ್ಯ ಮಾವ ಎಂಜಿನಿಯರ್ ಆಗಿದ್ದರು. ನಾವೆಲ್ಲಾ ಅವರ ಮನೆಗೆ ಆಗಾಗ್ಗೆ ಹೋಗುತ್ತಿದ್ದೆವು. ಸಿದ್ದರಾಮಯ್ಯ ಶಾಸಕರಾಗಿದ್ದ ಆರಂಭದ ದಿನಗಳಲ್ಲಿ ಅವರ ಮಾವನ ಮನೆಗೆ ಹೋಗುತ್ತಿದ್ದೆವು. ಯಾವಾಗಲೂ ಅವರ ಮನೆಯಲ್ಲಿ ನಾನ್ ವೆಜ್ ಮಾಡುತ್ತಿದ್ದರು. ಪ್ರತಿನಿತ್ಯ ಮಾಡೋರು. ಬೆಳಗ್ಗೆ ಇಡ್ಲಿ, ರುಚಿಯಾದ ಬೋಟಿ ಮಾಡುತ್ತಿದ್ದರು ಎಂದರು.