ಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅಂಬರೀಶ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಶನಿವಾರ ರಾತ್ರಿ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಮತದಾನಕ್ಕೆ ಇನ್ನು ಕೆಲವೇ ದಿನ ಇದೆ ಎನ್ನುವ ಸಂದರ್ಭದಲ್ಲಿ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಅಂಬರೀಶ್ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಸಾಕಷ್ಟು ಹೊತ್ತು ಚರ್ಚೆ ನಡೆಸಿದ್ದಾರೆ. ಆದರೆ, ಇಬ್ಬರೂ ಚರ್ಚೆಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಮಂಡ್ಯ ಕ್ಷೇತ್ರದ ಹಾಲಿ ಶಾಸಕರಾಗಿರುವ ಅಂಬರೀಶ್, ಚುನಾವಣೆ ಘೋಷಣೆಯಾದಾಗಿನಿಂದಲೂ ತಮ್ಮ ನಡವಳಿಕೆ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದರು. ಕಾಂಗ್ರೆಸ್ ನಿಯಮದಂತೆ ಟಿಕೆಟ್‌ಗೆ ಅರ್ಜಿ ಹಾಕದೆ,ನಾನು ಹಾಲಿ ಶಾಸಕ, ಅವರಾಗಿಯೇ ಟಿಕೆಟ್ ಘೋಷಿಸಬೇಕು ಎಂದು ಹೇಳಿದ್ದರು. ಟಿಕೆಟ್ ಘೋಷಣೆಯಾದ ಮೇಲೂ ತಮ್ಮ ಮನೆಗೆ ತಲುಪಿಸಬೇಕು ಎಂದು ಹೇಳಿದ್ದರು. ಈ ಕುರಿತ ಮಾತುಕತೆಗೂ ಕಾಂಗ್ರೆಸ್ ಮುಖಂಡರಿಗೆ ಸಿಕ್ಕಿರಲಿಲ್ಲ. ಕೊನೆಗೆ ತಾವು ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದರು. ಹೀಗಾಗಿ, ಮಂಡ್ಯ ಟಿಕೆಟ್ ಗಣಿಗ ರವಿ ಅವರ ಪಾಲಾಗಿತ್ತು.
ನಂತರ ಮೌನಕ್ಕೆ ಶರಣಾಗಿದ್ದ ಅಂಬರೀಶ್ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆಗೆ ಅಂಬರೀಶ್ ನೆರವು ಪಡೆಯುವ ಕುರಿತು ಭೇಟಿ ವೇಳೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಎಚ್.ಡಿ. ಕುಮಾರಸ್ವಾಮಿ ಹಾಗೂ ಅಂಬರೀಶ್ ಭೇಟಿ ವಿಚಾರ ನನಗೆ ಗೊತ್ತಿಲ್ಲ. ಅವರು ನಮ್ಮ ಕುಟುಂಬ ಸ್ನೇಹಿತರು. ಉತ್ತಮ ಬಾಂಧವ್ಯ ಹೊಂದಿದ್ದಾರೆ ಅಷ್ಟೇ.
– ಎಚ್.ಡಿ.ದೇವೆಗೌಡ, ಜೆಡಿಎಸ್ ವರಿಷ್ಠ