Advertisement

ಕುಮಾರಸ್ವಾಮಿ ಕ್ಷಮೆ ಯಾಚಿಸಲಿ

06:00 AM Jun 25, 2018 | |

ಬೆಂಗಳೂರು: ಭಾರತೀಯ ಯೋಧರ ಬಗ್ಗೆ ವ್ಯಂಗ್ಯವಾಡುವ ಹಾಗೂ ಉಗ್ರ ಸಂಘಟನೆಗಳ ಬೆಂಬಲ ಪಡೆಯುವ ಕಾಂಗ್ರೆಸ್‌ನೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿರುವುದಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸಂಬೀತ್‌ ಪಾತ್ರಾ ಆಗ್ರಹಿಸಿದರು.

Advertisement

ಸ್ವದೇಶಿ ಸಂಘವು ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್‌ ಪ್ರಸಾದ್‌ ಮುಖರ್ಜಿಯವರ 65ನೇ ಹುತಾತ್ಮ ದಿನದ ಪ್ರಯುಕ್ತ ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ತಾವು ಜನರ ಮುಲಾಜಿನಲ್ಲಿಲ್ಲ. ಬದಲಿಗೆ ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಇಂತಹ ಪಕ್ಷದ ಬೆಂಬಲ ಪಡೆದಿರುವುದಕ್ಕೆ ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ತೊಂದರೆಯಾಗುತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ. ಭಾರತೀಯ ಯೋಧರು ನರಹತ್ಯೆ ಮಾಡುತ್ತಿದ್ದಾರೆ ಎನ್ನುವುದು ಸರಿಯಲ್ಲ. ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಯೋಧರು ಕೈಯಲ್ಲಿ ಬಂದೂಕಿದ್ದರೂ ಕಲ್ಲೇಟು ಎದುರಿಸುತ್ತಾ ಮುನ್ನಡೆಯುತ್ತಾರೆ. ಇಂತಹ ಯೋಧರ ಬಗ್ಗೆ ನರಹತ್ಯೆ ಆರೋಪ ಹೊರಿಸುವುದು ನಾಚಿಕೆಗೇಡಿನ ಸಂಗತಿ. ಎಲ್‌ಇಟಿಯಂತಹ ಉಗ್ರವಾದಿ ಸಂಘಟನೆಯ ಬೆಂಬಲ ಪಡೆಯುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕಾಶ್ಮೀರಕ್ಕೆ ನೀಡಿರುವ ಪರಿಚ್ಛೇದ 370ರ ಸ್ಥಾನಮಾನ ರದ್ಧತಿಗೆ ಹೋರಾಡಿದ ಅಪ್ರತಿಮ ದೇಶಭಕ್ತ ಶ್ಯಾಮ ಪ್ರಸಾದ್‌ ಮುಖರ್ಜಿ. ಕಾಂಗ್ರೆಸ್‌ ನಾಯಕರು ಮುಖರ್ಜಿ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದರಿಂದಾಗಿ ಅವರು ಜನಸಂಘ ಕಟ್ಟಿದರು ಎಂದು ಹೇಳಿದರು.

ಮುಖರ್ಜಿ ಅವರು ಹೋರಾಟ ನಡೆಸುತ್ತಲೇ ಅಸುನೀಗಿದರೂ ಅಂದಿನ ಕೇಂದ್ರ ಸರ್ಕಾರ ಸರಿಯಾದ ಸಮಜಾಯಿಷಿ ಕೊಡಲಿಲ್ಲ. ಮುಖರ್ಜಿಯವರ ತಾಯಿ, ಜವಾಹರ ಲಾಲ್‌ ನೆಹರು ಅವರಿಗೆ ಪತ್ರ ಬರೆದು ತನಿಖೆಗೆ‌ ಒತ್ತಾಯಿಸಿದರೂ ಸ್ಪಂದಿಸಲಿಲ್ಲ. ಅವರ ಆಶಯ ಈಡೇರಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ತಿಳಿಸಿದರು.

Advertisement

ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಸುಶೀಲ್‌ ಪಂಡಿತ್‌, ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಸೇರಿ ಸರ್ಕಾರ ರಚನೆ ಮತ್ತು ನಂತರ ಮೈತ್ರಿ ಮುರಿಯುವುದು ಪೂರ್ವ ನಿರ್ಧಾರಿತದಂತಿದೆ. ಮೈತ್ರಿ ಹೆಚ್ಚು ಕಾಲ ಮುಂದುವರಿಯುವುದಿಲ್ಲ ಎಂದು ಎರಡೂ ಪಕ್ಷಗಳಿಗೂ ಗೊತ್ತಿತ್ತು. ಹಾಗಾಗಿಯೇ ಪರಸ್ಪರ ತೆಗಳಿಕೆಯೂ ಇಲ್ಲದಂತೆ ಮೈತ್ರಿ ಅಂತ್ಯವಾಗಿದೆ ಎಂದು ಬಿಜೆಪಿ ನಡೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ಸಂವಿಧಾನದ ಪರಿಚ್ಛೇದ 370ರ ಸ್ಥಾನಮಾನ ಹಿಂಪಡೆಯುವ ಬಗ್ಗೆ ಮಾತನಾಡುವುದಿಲ್ಲ ಎಂದ ಸಂಬೀತ್‌ ಪಾತ್ರಾ ಹೇಳಿಕೆಗೆ ಆಕ್ಷೇಪಿಸಿದ ಅವರು, ಈ ಪರಿಚ್ಛೇದ ತೆಗೆದುಹಾಕಬೇಕೆಂದು ಒತ್ತಾಯಿಸಿ ಶ್ಯಾಮ ಪ್ರಸಾದ್‌ ಮುಖರ್ಜಿ ಹೋರಾಡಿದ್ದರು. ಈ ವಿಚಾರ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲೂ ಇದೆ ಎಂದು ಮಾರ್ಮಿಕವಾಗಿ ನುಡಿದರು.

ಪುಣೆಯ ಎಫ್ಟಿಐಐ ಸಂಸ್ಥೆ ಮಾಜಿ ಅಧ್ಯಕ್ಷ ಗಜೇಂದ್ರ ಚವ್ಹಾಣ್‌, ಎಫ್ಟಿಐಐನೊಳಗೆ ನುಸುಳಿದ್ದ ಅಸಹ್ಯ ಸಂಸ್ಕೃತಿಯನ್ನು ಸರಿಪಡಿಸಲು ಪ್ರಯತ್ನಿಸಿದ ಬಗ್ಗೆ ಸುಳ್ಳು ಸುದ್ದಿ ಹರಡಲಾಯಿತು. ಮದ್ಯ ಸೇವನೆ, ಮಾಂಸಾಹಾರ ಸೇವನೆ, ಪ್ರಾಧ್ಯಾಪಕರಿಗೆ ವಿರೋಧ ತೋರುವುದು ಅಲ್ಲಿ ಸಾಮಾನ್ಯವೆನಿಸಿತ್ತು. ನನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ಉತ್ತಮ ಕೆಲಸಗಳಾಗಿವೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ನ್ಯೂ ಹೊರೈಜಾನ್‌ ಕಾಲೇಜಿನ ಅಧ್ಯಕ್ಷ ಮೋಹನ್‌ ಮಂಗ್ನಾನಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next