ಮೈಸೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್ ನಡೆದಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನಗಿರುವ ಮೂಲಗಳ ಮಾಹಿತಿ. ಕಳೆದ ಮೂರು ತಿಂಗಳಿಂದ ಈ ಡೀಲ್ ವ್ಯವಹಾರ ನಡೆದಿದೆ. ದೊಡ್ಡ ದೊಡ್ಡವರೇ ಈ ಪ್ರಕರಣದಲ್ಲಿ ಇದ್ದಾರೆ. ಇದನ್ನು ತನಿಖೆ ಮಾಡಿಸುವ ಜವಾಬ್ದಾರಿ ಸರ್ಕಾರದ್ದು. ನಾನು ಈ ಪ್ರಕರಣ ನೋಡಿ ಖುಷಿ ಪಡುವವನಲ್ಲ. ಸರ್ಕಾರ ಬೀಳಿಸಿದರು ಎನ್ನುವ ಕಾರಣಕ್ಕೆ ನಾನು ಒಂದು ಕಲ್ಲು ಹೊಡೆಯಬೇಕು ಅಂತ ಹೊಡೆಯೋದಿಲ್ಲ ಎಂದರು.
ಇದೀಗ ಹಲವು ರೀತಿಯ ವ್ಯಾಖ್ಯಾನ ಶುರುವಾಗಿದೆ. ಪ್ರಕರಣ ಹಳ್ಳ ಹಿಡಿಯುವಂತದ್ದು ಏನು? ಆ ಸಚಿವರಿಂದ ರಾಜೀನಾಮೆ ಕೊಡಿಸಬೇಕೆಂಬ ಉದ್ದೇಶ ಇತ್ತು. ಇದೀಗಾ ರಾಜೀನಾಮೆ ಕೊಡಿಸುವಲ್ಲಿ ಅವರು ಸಫಲರಾಗಿದ್ದಾರೆ. ಇದೀಗಾ ಆ ಹೆಣ್ಣು ಮಗಳನ್ನು ಕಟ್ಟಿಕೊಂಡು ಅವರಿಗೆ ಏನು? ಅವರಿಬ್ಬರೇ ವಿಡಿಯೊ ಮಾಡಿಕೊಂಡಿದ್ದಾರೆ. ಆದರೆ, ಆ ವಿಡಿಯೊವನ್ನು ಹೊರಗೆ ಕೊಟ್ಟವರು ಯಾರು, ಗೊತ್ತಿಲ್ಲ? ಇಂತಹ ವಿಚಾರದಲ್ಲಿ ಸುಮ್ಮನೆ ಕಲ್ಲು ಹೊಡೆಯಬಾರದು ಎಂದು ತಿಳಿಸಿದರು.
ಈಗಿನ ರಾಜಕೀಯ ತುಂಬಾ ಕಲುಷಿತವಾಗಿದೆ. ಕೆಸರು ನಮ್ಮ ಮೇಲೆ ನಾವೇ ಎರಚಿಕೊಂಡ ಹಾಗಾಗಿದೆ. ಇಂತಹ ಪ್ರಕರಣದಿಂದ ನಮ್ಮನ್ನು ಜನ ತಪ್ಪಾಗಿ ತಿಳಿದುಕೊಳ್ಳುತ್ತಾರೆ ಎಂದರು.
ರಾಜಕಾರಣಿಗಳ ಸಿಡಿ ಇದೆ ಅನ್ನೋರನ್ನ ಮೊದಲು ಒದ್ದು ಒಳಗೆ ಹಾಕಿ ಏರೋಪ್ಲೇನ್ ಹತ್ತಿಸಬೇಕು. ಜೊತೆಗೆ ಅವನ ಬಳಿ ಇರುವ ಸಿಡಿಗಳನ್ನ ಸರ್ಕಾರ ವಶಕ್ಕೆ ಪಡೆದು ಬಿಡುಗಡೆ ಮಾಡಲಿ ಎಂದು ಹೇಳಿದರು.