ಕೊಲಂಬೋ: 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಫಿಕ್ಸಿಂಗ್ ಪ್ರಕರಣದ ಬಗ್ಗೆ ತನಿಖೆ ಆರಂಭವಾಗಿದೆ. ಇದರ ಕಾರಣವಾಗಿ ಲಂಕನ್ ಮಾಜಿ ನಾಯಕ ಕುಮಾರ ಸಂಗಕ್ಕರ ಸತತ ಹತ್ತು ಗಂಟೆಗಳ ವಿಚಾರಣೆ ಎದುರಿಸಿದರು.
ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತಗಮಗೆ ಅವರು 2011 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದರು. ಈ ಕುರಿತು ವಿಶೇಷಾ ತನಿಖಾ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ.
2011ರಲ್ಲಿ ಶ್ರೀಲಂಕಾ ತಂಡದ ನಾಯಕತ್ವ ವಹಿಸಿದ್ದ ಕುಮಾರ ಸಂಗಕ್ಕರ ಗುರುವಾರ ವಿಚಾರಣೆ ಎದುರಿಸಿದರು. ಮೂಲಗಳ ಪ್ರಕಾರ 10 ಗಂಟೆಗಳ ಕಾಲ ಸಂಗಕ್ಕರ ವಿಚಾರಣೆ ನಡೆಸಲಾಗಿದೆ. ಆದರೆ ಯಾವೆಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗಿದೆ ಎನ್ನುವುದು ಬಹಿರಂಗವಾಗಿಲ್ಲ.
ಆದರೆ ದಿಗ್ಗಜ ಕುಮಾರ ಸಂಗಕ್ಕರ ಅವರನ್ನು ವಿಚಾರಣೆ ನಡೆಸಿದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಎದುರುಗಡೆ ಪೋಸ್ಟರ್ ಹಿಡಿದು ಹಲವರು ಪ್ರತಿಭಟನೆ ನಡೆಸಿದರು.
2011ರಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅರವಿಂದ ಡಿಸಿಲ್ವ, ಆರಂಭಿಕ ಆಟಗಾರ ಉಪುಲ್ ತರಂಗ ಈಗಾಗಲೇ ವಿಚಾರಣೆ ಎದುರಿಸಿದ್ದಾರೆ.
2011ರ ಎಪ್ರಿಲ್ 2ರಂದು ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಜಯ ಗಳಿಸಿತ್ತು.