ಕುಳಗೇರಿ ಕ್ರಾಸ್ (ಜಿ.ಬಾಗಲಕೋಟೆ): ಕಾಕನೂರು ನೀರಾವರಿ ಇಲಾಖೆಗೆ ಸಂಬಂಧಿಸಿದ ಮಲಪ್ರಭಾ ಎಡದಂಡೆ 38ನೇ ಹಂಚು ಕಾಲುವೆ ನೀರು ಪೋಲಾಗಿ ರಸ್ತೆ ತುಂಬೆಲ್ಲ ಹರಿದು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಕ್ಕೆ ನುಗ್ಗಿದ್ದು ಆಸ್ಪತ್ರೆಯ ಸೇಪ್ಟಿ ಟ್ಯಾಂಕ್ ಇಂಗು ಗುಂಡಿಗಳು ಸೇರಿದಂತೆ ತಗ್ಗು ಪ್ರದೇಶಗಳೆಲ್ಲ ತುಂಬಿಕೊಂಡಿವೆ. ಆಸ್ಪತ್ರೆಗೆ ಬರುವ ರೋಗಿಗಳು ನೀರಲ್ಲೇ ನಡೆದುಕೊಂಡು ಹೋಗಿ ಚಿಕಿತ್ಸೆ ಪಡೆಯುತ್ತಿದ್ದು, ಭಾರಿ ತೊಂದರೆ ಅನುಭವಿಸುತ್ತಿದ್ದಾರೆ.
ಚಿರ್ಲಕೊಪ್ಪ ಹಾಗೂ ಖಾನಾಪೂರ ಎಸ್‌ಕೆ ಗ್ರಾಮಗಳ ಹೃದಯ ಭಾಗದಲ್ಲಿ ಹರಿದು ಹೋಗುವ ಮಲಪ್ರಭಾ ಎಡದಂಡೆ ಕಾಲುವೆ ಸುಮಾರು ವರ್ಷಗಳಿಂದ ಸಮರ್ಪಕ ನಿರ್ವಹಣೆ ಮಾಡದ್ದರಿಂದ ಹೂಳು ತುಂಬಿಕೊಂಡಿದೆ. ಅಲ್ಲಲ್ಲಿ ಗಿಡಗಂಟಿಗಳು ಬೆಳೆದು ಜಮಿನುಗಳಿಗೆ ಹರಿಸಬೇಕಾದ ಕಾಲುವೆ ನೀರು ಎಲ್ಲೆಂದರಲ್ಲಿ ಹರಿದು ಪೋಲಾಗಿ ಜನಜೀವನಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಕಾಲುವೆ ಸ್ವಚ್ಛಗೊಳ್ಳದ ಕಾರಣ ನೀರು ಕೊನೆಯ ತನಕ ಹರಿಯದ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಾಕಷ್ಟು ಬಾರಿ ಗ್ರಾಮಸ್ಥರು ರೈತರು ಮನವಿ ಮಾಡಿದರೂ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಲುವೆಯಲ್ಲಿ ತುಂಬಿಕೊಂಡಿರುವ ಹೂಳು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.
ಸಧ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಕಾಲುವೆ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುತ್ತೇವೆ. ಸಾರ್ವಜನಿಕರಿಗೆ ಆಗುವ ತೊಂದರೆ ಸರಿಪಡಿಸುತ್ತೇವೆ ಎಂದು ಕಾಕನೂರು ನೀರಾವರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.