Advertisement

ಡೆಲ್ಲಿ ಗೆದ್ದದ್ದು 4 ಮ್ಯಾಚ್‌; ಎಲ್ಲದರಲ್ಲೂ ಕುಲದೀಪ್‌ ಮ್ಯಾನ್‌ ಆಫ್ ದ ಮ್ಯಾಚ್‌!

07:45 AM Apr 30, 2022 | Team Udayavani |

ಮುಂಬಯಿ: ಇದು ಈ ಐಪಿಎಲ್‌ನ ಸ್ವಾರಸ್ಯಗಳಲ್ಲೊಂದು. ಪ್ರಸಕ್ತ ಕೂಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಜಯಿಸಿದ್ದು ನಾಲ್ಕೇ ಪಂದ್ಯ. ಈ ನಾಲ್ಕರಲ್ಲೂ ಪಂದ್ಯಶ್ರೇಷ್ಠರಾಗಿ ಮೂಡಿಬಂದವರು ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌!

Advertisement

ಯೋಗ್ಯ ನಾಯಕರ ಕೈಯಲ್ಲಿ ಅವಕಾಶ ಲಭಿಸಿದರೆ ಕ್ರಿಕೆಟಿಗನೋರ್ವ ಯಾವ ಮಟ್ಟಕ್ಕೆ ಏರಬಲ್ಲ ಎಂಬುದಕ್ಕೆ ಕುಲದೀಪ್‌ ಯಾದವ್‌ಗಿಂತ ಉತ್ತಮ ನಿದರ್ಶನ ಬೇಕಿಲ್ಲ. ಹಿಂದಿನ ಐಪಿಎಲ್‌ ಋತುಗಳಲ್ಲಿ ಅವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿತ್ತು. ಟೀಮ್‌ ಇಂಡಿಯಾದ ಕೆಟ್ಟ ರಾಜಕೀಯಕ್ಕೂ ಬಲಿಪಶು ಆಗಿದ್ದರು. ಆದರೆ ಈ ಐಪಿಎಲ್‌ನಲ್ಲಿ ಕುಲದೀಪ್‌ ಸಾಮರ್ಥ್ಯ ದೊಡ್ಡ ಮಟ್ಟದಲ್ಲೇ ಅನಾವರಣಗೊಂಡಿದೆ.

ಮುಂಬೈ ವಿರುದ್ಧ 18ಕ್ಕೆ 4
ಡೆಲ್ಲಿ ತನ್ನ ಗೆಲುವಿನ ಖಾತೆ ತೆರೆದದ್ದು ಮುಂಬೈ ಇಂಡಿಯನ್ಸ್‌ ವಿರುದ್ಧ. ಅಂತರ 4 ವಿಕೆಟ್‌. ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 5 ವಿಕೆಟಿಗೆ 177 ರನ್‌ ಬಾರಿಸಿತು. ಐದರಲ್ಲಿ 3 ವಿಕೆಟ್‌ ಉರುಳಿಸಿದವರು ಕುಲದೀಪ್‌ ಯಾದವ್‌. ನೀಡಿದ್ದು ಬರೀ 18 ರನ್‌. ರೋಹಿತ್‌, ಅನ್ಮೋಲ್‌ಪ್ರೀತ್‌, ತಿಲಕ್‌ ವರ್ಮ ಮತ್ತು ಪೊಲಾರ್ಡ್‌ ಚೈನಾಮನ್‌ ಮೋಡಿಗೆ ಸಿಲುಕಿದರು.

ಕೆಕೆಆರ್‌ ವಿರುದ್ಧ 35ಕ್ಕೆ 4
ಡೆಲ್ಲಿಯ ಎರಡನೇ ಗೆಲುವು ದಾಖಲಾದದ್ದು ಕೆಕೆಆರ್‌ ವಿರುದ್ಧ. ಇಲ್ಲಿ ಡೆಲ್ಲಿ 5ಕ್ಕೆ 215 ರನ್‌ ಪೇರಿಸಿತ್ತು. ಕೆಕೆಆರ್‌ ದಿಟ್ಟ ರೀತಿಯಲ್ಲೇ ಜವಾಬು ನೀಡಲಾರಂಭಿಸಿತು. ಆದರೆ ಕುಲದೀಪ್‌ ಮ್ಯಾಜಿಕ್‌ ಮೊದಲ್ಗೊಂಡ ಬಳಿಕ ತಣ್ಣಗಾಯಿತು. ಶ್ರೇಯಸ್‌, ಕಮಿನ್ಸ್‌, ಸುನೀಲ್‌ ನಾರಾಯಣ್‌ ಮತ್ತು ಉಮೇಶ್‌ ಯಾದವ್‌ ವಿಕೆಟ್‌ ಕುಲದೀಪ್‌ ಪಾಲಾದವು.

ಪಂಜಾಬ್‌ ವಿರುದ್ಧ 24ಕ್ಕೆ 2
ಪಂಜಾಬ್‌ ಕೇವಲ 115ಕ್ಕೆ ಆಲೌಟ್‌ ಆಗಿತ್ತು. ಡೆಲ್ಲಿ 9 ವಿಕೆಟ್‌ಗಳಿಂದ ಗೆದ್ದಿತು. ಇದರಲ್ಲಿ ಕುಲದೀಪ್‌ ಸಾಧನೆ 24ಕ್ಕೆ 2. ಇವೇನೂ ಬಿಗ್‌ ವಿಕೆಟ್‌ ಆಗಿರಲಿಲ್ಲ. ಅಕ್ಷರ್‌ ಪಟೇಲ್‌ 10ಕ್ಕೆ 2 ವಿಕೆಟ್‌ ಹಾರಿಸಿದ್ದರು. ಆದರೂ ಪಂದ್ಯಶ್ರೇಷ್ಠ ಗೌರವ ಕುಲದೀಪ್‌ಗೆ ಲಭಿಸಿದ್ದೊಂದು ಅಚ್ಚರಿ. ಇದಕ್ಕೆ ಅಕ್ಷರ್‌ ಅರ್ಹರಾಗಿದ್ದರು ಎಂದು ಕುಲದೀಪ್‌ ಹೇಳಿದ್ದು ಅವರ ಕ್ರೀಡಾಸ್ಫೂರ್ತಿಗೆ ಸಾಕ್ಷಿ.

Advertisement

ಕೆಕೆಆರ್‌ ವಿರುದ್ಧ 14ಕ್ಕೆ 4
ಕೋಲ್ಕತಾ ಎದುರಿನ ದ್ವಿತೀಯ ಸುತ್ತಿನ ಪಂದ್ಯದಲ್ಲೂ ಕುಲದೀಪ್‌ 4 ವಿಕೆಟ್‌ ಉಡಾಯಿಸಿದರು. ನೀಡಿದ ರನ್‌ ಕೇವಲ 14. ಎಸೆದದ್ದು ಮೂರೇ ಓವರ್‌. ಇದು ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಸಾಧನೆ. ಅವರಿಗೆ ಇನ್ನೂ ಒಂದು ಓವರ್‌ ನೀಡಿದ್ದರೆ ವಿಕೆಟ್‌ ಬೇಟೆ ಹೆಚ್ಚುತ್ತಿತ್ತೋ ಏನೋ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಅನಿಸಿಕೆ.

Advertisement

Udayavani is now on Telegram. Click here to join our channel and stay updated with the latest news.

Next