ನವದೆಹಲಿ:ಭಾರತದ ಪರ ಗೂಢಚಾರಿಕೆ ನಡೆಸುತ್ತಿದ್ದ ಎಂದು ಆರೋಪಿಸಿ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿ ಗಲ್ಲುಶಿಕ್ಷೆ ವಿಧಿಸಿರುವ ಪಾಕ್ 21 ತಿಂಗಳ ಬಳಿಕ ಪತ್ನಿ ಮತ್ತು ತಾಯಿಗೆ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಏತನ್ಮಧ್ಯೆ ಇಸ್ಲಾಮಾಬಾದ್ ನಲ್ಲಿ ತಾಯಿ, ಪತ್ನಿಯನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಜಾಧವ್ ತಾಯಿ ಹಾಗೂ ಪತ್ನಿಯ ಉಡಿಗೆ, ತೊಡಿಗೆಯನ್ನು ಬಲವಂತವಾಗಿ ಬದಲಾಯಿಸಿರುವುದಾಗಿ ಭಾರತ ಆರೋಪಿಸಿದ್ದು, ತಾಯಿಗೆ ಮರಾಠಿ ಭಾಷೆಯಲ್ಲೂ ಮಾತನಾಡಲು ಅವಕಾಶ ಕೊಟ್ಟಿಲ್ಲ ಎಂದು ಹೇಳಿದೆ.
ಸೋಮವಾರ ಗಲ್ಲುಶಿಕ್ಷೆಗೊಳಗಾಗಿದ್ದ ಜಾಧವ್ ಅವರನ್ನು ಪತ್ನಿ ಚೇತನ್ ಕುಲ್ ಹಾಗೂ ತಾಯಿ ಆವಂತಿಗೆ ಸುಮಾರು 45 ನಿಮಿಷಗಳ ಕಾಲ ಗ್ಲಾಸ್ ಗಳ ತಡೆಗೋಡೆ ಮಧ್ಯೆ ಮಾತುಕತೆ ನಡೆಸಲು ಪಾಕ್ ಅವಕಾಶ ಕಲ್ಪಿಸಿತ್ತು.
ಪತಿಯನ್ನು ಭೇಟಿ ಮಾಡುವ ಮುನ್ನ ಜಾಧವ್ ಪತ್ನಿಯ ಕೊರಳಿನಲ್ಲಿದ್ದ ಮಂಗಳಸೂತ್ರ(ಕರಿಮಣಿ), ಬಳೆ ಹಾಗೂ ಬಿಂದಿಯನ್ನು ಬಲವಂತವಾಗಿ ತೆಗೆಯಿಸಿರುವುದಾಗಿ ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲ ಕಳಚಿಟ್ಟ ಶೂವನ್ನು ವಾಪಸ್ ಕೊಟ್ಟಿಲ್ಲ ಎಂದು ವರದಿ ವಿವರಿಸಿದೆ.
ಈ ಹಿನ್ನೆಲೆಯಲ್ಲಿ ಮಿ.ಜಾಧವ್ ಅವರು ಒತ್ತಡದಲ್ಲಿ ಇದ್ದಾರೆ ಎಂಬುದು ಸ್ಪಷ್ಟವಾಗಿದೆ.ಅಲ್ಲದೇ ಜಾಧವ್ ಅವರ ಆರೋಗ್ಯದ ಬಗ್ಗೆಯೂ ಪ್ರಶ್ನೆ ಮೂಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.