ಹೊಸದಿಲ್ಲಿ : ಭಾರತದ ಬೇಹುಗಾರನೆಂದು ಆರೋಪಿಸಲ್ಪಟ್ಟು ಪಾಕ್ ಮಿಲಿಟರಿಯಿಂದ ಮರಣದಂಡನೆಗೆ ಗುರಿಯಾಗಿರುವ 46ರ ಹರೆಯದ ಭಾರತದ ಮಾಜಿ ನೌಕಾ ಪಡೆ ಅಧಿಕಾರಿ ಕುಲುಭೂಷಣ್ ಜಾಧವ್, “ಪಾಕಿಸ್ಥಾನದಲ್ಲಿ ಈಚೆಗೆ ನಡೆದಿರುವ ಭಯೋತ್ಪಾದಕ ದಾಳಿಗಳ ಬಗ್ಗೆ ನಿರ್ಣಾಯಕ ಹಾಗೂ ಅತ್ಯಂತ ಮಹತ್ವದ ಮಾಹಿತಿಗಳನ್ನು ನೀಡುತ್ತಿದ್ದಾನೆ’ ಎಂದು ಪಾಕಿಸ್ಥಾನದ ವಿದೇಶ ಸಚಿವಾಲಯ ಹೇಳಿದೆ.
ಪಾಕಿಸ್ಥಾನದಲ್ಲಿ ಈಚೆಗೆ ನಡೆದಿರುವ ಉಗ್ರ ದಾಳಿಗಳ ಕುರಿತಾದ ಮಹತ್ವದ ರಹಸ್ಯ ಮಾಹಿತಿಗಳನ್ನು ಕುಲಭೂಷಣ್ ಜಾಧವ್ ತನಿಖಾಧಿಕಾರಿಗಳಿಗೆ ನೀಡುತ್ತಿದ್ದಾನೆ ಮಾತ್ರವಲ್ಲದೆ ಆ ಮಾಹಿತಿಗಳನ್ನು ಆತ ಡಾನ್‌ನೂÂಸ್‌ಗೆ ಬಹಿರಂಗಪಡಿಸಿದ್ದಾನೆ’ ಎಂದು ಪಾಕ್ ವಿದೇಶ ಕಾರ್ಯಾಲಯದ ವಕ್ತಾರ ನಫೀಸ್ ಝಕಾರಿಯಾ ಹೇಳಿದ್ದಾರೆ.
ಕುಲಭೂಷಣ್ ಜಾಧವ್ ಭಾರತೀಯ ಬೇಹುಗಾರನೆಂದು ಸಾಬೀತುಪಡಿಸುವುದಕ್ಕೆ ಪಾಕ್ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಪಾಕ್ ಅಟಾರ್ನಿ ಜನರಲ್ ಅಷ್‌ತರ್ ಔಸಾಫ್ ಹೇಳಿದ ಕೆಲವೇ ತಾಸುಗಳ ಬಳಿಕ, ಪಾಕ್ ವಿದೇಶ ಕಾರ್ಯಾಲಯದ ವಕ್ತಾರ ಝಕಾರಿಯಾ ಅವರಿಂದ ಈ ಹೇಳಿಕೆ ಬಂದಿದೆ.
“ಜಾಧವ್ ಡಾನ್ ನ್ಯೂಸ್‌ಗೆ ಕೊಟ್ಟಿರುವ ಮಹತ್ವದ ಮಾಹಿತಿಗಳು ಯಾವುವು?’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಝಕಾರಿಯಾ, “ಜಾಧವ್ ಕೊಟ್ಟಿರುವ ಸಾಕ್ಷ್ಯಗಳನ್ನು ಕೇವಲ ಐಸಿಜೆ ಮುಂದೆ ಮಾತ್ರವೇ ಮಂಡಿಸಲಾಗುವುದು’ ಎಂದು ಹೇಳಿದರು.
ಕುಲಭೂಷಣ್ ಜಾಧವ್ ಓರ್ವ ಭಾರತೀಯ ಬೇಹುಗಾರನೆಂದು ಪಾಕಿಸ್ಥಾನ ಹೇಳಿಕೊಂಡು ಬಂದಿದೆಯಾದರೆ ಭಾರತ ಅದನ್ನು ತಿರಸ್ಕರಿಸಿ, “ಜಾಧವ್ ಓರ್ವ ನಿವೃತ್ತ ಭಾರತೀಯ ನೌಕಾಪಡೆ ಅಧಿಕಾರಿ; ಪಾಕಿಸ್ಥಾನ ಆತನನ್ನು ಇರಾನ್‌ನಲ್ಲಿ ಅಪಹರಿಸಿ ಬಲೂಚಿಸ್ಥಾನದಲ್ಲಿ ಬಂಧಿಸಿರುವುದಾಗಿ ಸುಳ್ಳು ಹೇಳುತ್ತಿದೆ’ ಎಂದು ಪುನರುಚ್ಚರಿಸುತ್ತಲೇ ಇದೆ.