ಇಸ್ಲಾಮಾಬಾದ್/ಹೊಸದಿಲ್ಲಿ: ಬೇಹುಗಾರಿಕೆ ಆರೋಪದಲ್ಲಿ ಪಾಕ್ ಜೈಲಲ್ಲಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ ಜಾಧವ್ ಕೈಯಿಂದ ಗಲ್ಲು ಶಿಕ್ಷೆ ವಿರುದ್ಧ ಮೇಲ್ಮನವಿ ಬೇಡ ಎಂದು ಬಲವಂತದ ಹೇಳಿಕೆ ಕೊಡಿಸಲಾಗಿದೆ ಎಂದು ಭಾರತ ಸರಕಾರ ಆರೋಪಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ವಿದೇಶಾಂಗ ಇಲಾಖೆ, ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ ತೀರ್ಪಿನ ಅನ್ವಯ ರಾಜತಾಂತ್ರಿಕವಾಗಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಅದನ್ನು ಪಾಲನೆ ಮಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ಸರಕಾರ ಆರೋಪಿಸಿದೆ.
ಇದಕ್ಕೂ ಮೊದಲು ನಡೆದಿದ್ದ ಬೆಳವಣಿಗೆಯಲ್ಲಿ ಜಾಧವ್ ತಮಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ ಎಂದು ಪಾಕಿಸ್ಥಾನ ಹೇಳಿದೆ.
ಜತೆಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಬದಲು ತಾವು ಈಗಾಗಲೇ ಸಲ್ಲಿಸಿರುವ ಕ್ಷಮಾದಾನ ಅರ್ಜಿಯ ತೀರ್ಪಿಗಾಗಿ ಕಾಯುತ್ತೇನೆ ಎಂದು ಜಾಧವ್ ಹೇಳಿರುವುದಾಗಿ ಪಾಕ್ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಜಾಧವ್ ಅವರಿಗಿರುವ ಕಾನೂನುಬದ್ಧ ಹಕ್ಕುಗಳ ಅನ್ವಯ ಕಳೆದ ಜೂನ್ 17ರಂದು ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿತ್ತು. ಆದರೆ ಅವರು ಅದಕ್ಕೆ ನಿರಾಕರಿಸಿದ್ದು, ತಮ್ಮ ವಿರುದ್ಧದ ಶಿಕ್ಷೆ ಪ್ರಶ್ನಿಸಿ ಕೋರ್ಟ್‌ಗೆ ಹೋಗಲ್ಲ ಎಂದಿದ್ದಾರೆ ಎಂದು ಹೆಚ್ಚುವರಿ ಅಟಾರ್ನಿ ಜನರಲ್ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಜಾಧವ್‌ಗೆ ಎರಡನೇ ಬಾರಿಗೆ ರಾಜತಾಂತ್ರಿಕ ಅಧಿಕಾರಿಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.