ಕುಳಗೇರಿ ಕ್ರಾಸ್: ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ತಿಮ್ಮಾಪುರ ಎಸ್.ಎನ್. ಗ್ರಾಮದ ಮಕ್ಕಳು ಸಾರಿಗೆ ಬಸ್ ಕೊರತೆಯಿಂದ ನಿತ್ಯ ಪರದಾಡುವಂತಾಗಿದೆ. ತಿಮ್ಮಾಪುರ ಎಸ್.ಎನ್. ಗ್ರಾಮದ ನೂರಾರು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ತಾಲೂಕು ಕೇಂದ್ರ
ಬಾದಾಮಿಗೆ ಹೋಗುತ್ತಾರೆ ಆದರೆ ಸಮರ್ಪಕ ಸಾರಿಗೆ ಇಲ್ಲದೆ ಇರುವುದರಿಂದ ಹರಸಾಹಸ ಪಡುತ್ತಿದ್ದಾರೆ.
ನಮ್ಮ ಮಕ್ಕಳಿಗೆ ಶಿಕ್ಷಣ ಕಲಿಯುವ ಹಂಬಲವಿದೆ ಆದರೆ ಸರಿಯಾಗಿ ಬಸ್ ನೀಡದೇ ನಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ನಮ್ಮ ಗ್ರಾಮದ ಮಾರ್ಗದಲ್ಲೇ ನಿತ್ಯ 50ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿದ್ದರೂ ಏನೂ ಪ್ರಯೋಜನ ಇಲ್ಲದಂತಾಗಿದೆ. ಬೆರಳೆಣಿಕೆಯ ಪ್ರಯಾಣಿಕರು ಹತ್ತುವ ಕೂಗಳತೆಯಲ್ಲಿರುವ ನೀಲಗುಂದ ಕ್ರಾಸ್ ನಲ್ಲಿ ಎಲ್ಲ ಬಸ್ ನಿಲುಗಡೆಯಾಗುತ್ತವೆ ಆದರೆ ನಮ್ಮೂರಿಗೆ ಮಾತ್ರ ಬಸ್‌ಗಳು ನಿಲುಗಡೆಯಾಗುತ್ತಿಲ್ಲ.
ಈ ಕುರಿತು ನಾವು ಸಾಕಷ್ಟು ಬಾರಿ ಲಿಖಿತವಾಗಿ ಮನವಿ ಮಾಡಿದ್ದೇವೆ. ಸಂಬಂಧಿಸಿದ ಅಧಿ ಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತರಗತಿಗಳು ತಪ್ಪಿ ಹೋದಾವು ಎಂಬ ಕಾರಣಕ್ಕೆ ಪ್ರಾಣ ಪಣಕ್ಕಿಟ್ಟು ಬಸ್‌ಗಳ ಮೆಟ್ಟಿಲಿನಲ್ಲೇ ನೇತಾಡಿಕೊಂಡು ಪ್ರಯಾಣಿಸುವ ಅನಿವಾರ್ಯತೆ ಬಂದೊದಗಿದೆ. ನೂಕು ನುಗ್ಗಲಿನಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡು ಪ್ರಯಾಣಿಸುವುದು ಅನಿವಾರ್ಯ ಎಂಬಂತಾಗಿದೆ. ವಿದ್ಯಾರ್ಥಿನಿಯರ ಸಮಸ್ಯೆಯನ್ನು ಸಂಬಂಧಿಸಿದ ಅಧಿ ಕಾರಿಗಳು ಗಮನ ಹರಿಸದಿರುವುದಕ್ಕೆ ವಿದ್ಯಾರ್ಥಿನಿಯರ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಿಯಾದ ಸಮಯಕ್ಕೆ ಬರದ, ಭರ್ತಿಯಾಗಿ ಬರುವ ಬಸ್‌ನಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಕೆಲ ವಿದ್ಯಾರ್ಥಿಗಳು ಆಟೋಗಳಲ್ಲಿ ಪ್ರಯಾಣಿಸಿದರೆ, ಬಡ ವಿದ್ಯಾರ್ಥಿಗಳು ಬಸ್ ಇಲ್ಲದೇ ಪರಿತಪಿಸುವಂತಾಗಿದೆ.
ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿಯವರು ನಮಗೆ ತಿಳಿಸಿದ್ದಾರೆ. ಸದ್ಯ ಬಸ್ ಸೌಲಭ್ಯ ಮಾಡಲಾಗಿದೆ. ಸಮಯದಲ್ಲಿ ಸ್ವಲ್ಪ ವಿಳಂಬವಾಗುತ್ತಿದೆ. ಕಾರಣ ಗಮನಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸುತ್ತೇವೆ. ಹೆದ್ದಾರಿಯಲ್ಲಿ ನಿಂತು ಕೈ ಮಾಡುವ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಬರುವಂತೆ ವೇಗದೂತ ಬಸ್‌ಗಳ ಚಾಲಕರಿಗೂ ತಿಳಿಸಿದ್ದೇನೆ.
ಕೆ.ಆರ್.ಚವ್ಹಾಣ, ಡಿಪೋ ಮ್ಯಾನೇಜರ್ ಬಾದಾಮಿ.
ನಮ್ಮ ಗ್ರಾಮಕ್ಕೆ ಸಾಕಷ್ಟು ಬಸ್ ಸಂಚಾರವಿದೆ ಆದರೆ ನಿಲ್ಲೋದಿಲ್ಲ. ಬಸ್ ನಿಲುಗಡೆಗೆ ಸಾಕಷ್ಟು ಮನವಿ ಪತ್ರ ಕೊಟ್ಟಿದ್ದೇವೆ. ಸಂಬಂಧಿಸಿದವರು ಗಮನಿಸುತ್ತಿಲ್ಲ. ಮಕ್ಕಳ ತರಗತಿಗಳು ನಿತ್ಯ ತಪ್ಪುತ್ತಿವೆ. ಸಂಬಂಧಿಸಿದವರು ತೊಂದರೆ ಸರಿಪಡಿಸಬೇಕಿದೆ.
ಸಿದ್ಧಲಿಂಗಯ್ಯ ಹಿರೇಮಠ, ಬಾಂಡ್‌ರೈಟರ್
ಮಹಾಂತಯ್ಯ ಹಿರೇಮಠ