Advertisement
20 ವರ್ಷಗಳಿಂದ ಅಭಿವೃದ್ಧಿಯಿಲ್ಲ ಸುಮಾರು 20 ವರ್ಷಗಳ ಹಿಂದೆ ಈ ರಸ್ತೆಯು ಡಾಮರೀಕರಣಗೊಂಡಿದ್ದು ನಂತರ ಡಾಮರು ಭಾಗ್ಯವನ್ನು ಕಂಡಿಲ್ಲ. ಕಳೆದ 5-6 ವರ್ಷಗಳಿಂದ ತೇಪೆ ಕಾರ್ಯವೂ ನಡೆದಿಲ್ಲ. ಪೆಲತ್ತಿಜೆ, ಕಾನಂಗಿ, ಪಾಲಿಜೆ, ಎಲ್ಲಿಬೆಟ್ಟು, ಬೆಂಗಾಲ್ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣವಾಗಿವೆ.
ಸಂಚಾರ ಅಸಾಧ್ಯ
ಪಾಲಿಜೆ ಭಾಗದಲ್ಲಿ ಪರಿಶಿಷ್ಟ ಜಾತಿಯ ಕಾಲನಿ ಇದ್ದು ಈ ಕಾಲನಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಸ್ಥಳೀಯರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಸುಮಾರು 4 ಕಿ.ಮೀ.ನಷ್ಟು ಉದ್ದವಿರುವ ಈ ರಸ್ತೆಯಲ್ಲಿ ಡಾಮಾರು ಎಲ್ಲಿದೆ ಎಂದು ಹುಡುಕಿ ನೋಡಬೇಕಾದ ಪರಿಸ್ಥಿತಿ ಇದೆ. ರಸ್ತೆಯಲ್ಲಿ ನಿರ್ಮಾಣವಾಗಿರುವ ಬೃಹತ್ ಹೊಂಡಗಳಲ್ಲಿ ಮಳೆಯ ನೀರು ಶೇಖರಣೆಗೊಂಡು ನಡೆದಾಡಲೂ ಕಷ್ಟವಾಗಿದೆ ಎನ್ನುವುದು ಸ್ಥಳೀಯರ ಅಳಲು.
ಕಾನಂಗಿ ಭಾಗದ ಜನತೆ ತಮ್ಮ ನಿತ್ಯ ವ್ಯವಹಾರಕ್ಕಾಗಿ ಕಾರ್ಕಳ, ಹಿರ್ಗಾನ ಪೇಟೆಗೆ ತೆರಳಬೇಕಾಗಿದ್ದು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಸುಮಾರು 300 ಕುಟುಂಬಗಳು ವಾಸಿಸುತ್ತಿದ್ದು ಪ್ರತಿನಿತ್ಯ ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ಸಂಚಾರ ನಡೆಸುತ್ತಿದ್ದು ಮಳೆಗಾಲದಲ್ಲಿ ಪ್ರತಿ ನಿತ್ಯ ಕೆಸರಿನ ಅಭಿಷೇಕವಾಗುತ್ತಿದೆ. ಸಂಚಾರ ಅಸಾಧ್ಯವಾದ್ದರಿಂದ ಪಂಚಾಯತ್ ಪ್ರತಿವರ್ಷ ಹೊಂಡಗಳಿಗೆ ಮಣ್ಣು ಹಾಕುತ್ತಿದೆ. ಆದರೆ ಮಳೆಗೆ ಅದು ಫಲಕಾರಿಯಾಗದೆ ಮತ್ತೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ರಸ್ತೆ ಸಮಸ್ಯೆ ಹಿನ್ನೆಲೆಯಲ್ಲಿ ಆಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸಲು ಸ್ಥಳೀಯರು ಸಿದ್ಧತೆ ನಡೆಸುತ್ತಿದ್ದಾರೆ.
Related Articles
Advertisement
ಸ್ಪಂದನೆ ದೊರೆತಿಲ್ಲಅತೀ ಅಗತ್ಯವಾಗಿರುವ ಕುಕ್ಕುದಕಟ್ಟೆ ಕಾನಂಗಿ ರಸ್ತೆ ಅಭಿವೃದ್ಧಿಪಡಿಸುವಂತೆ ದಶಕಗಳಿಂದ ಸಂಬಂಧಪಟ್ಟವರಿಗೆ ಮನವಿ ಮಾಡುತ್ತಾ ಬಂದಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ರಸ್ತೆಗೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.
– ಸಂತೋಷ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಗ್ರಾ.ಪಂ. ಹಿರ್ಗಾನ ಪ್ರಸ್ತಾವನೆ ಸಲ್ಲಿಕೆ
ಹಿರ್ಗಾನ ಗ್ರಾಮ ಪಂಚಾಯತ್‌ನ ಮನವಿಯಂತೆ ಕುಕ್ಕುದಕಟ್ಟೆ ಕಾನಂಗಿ ರಸ್ತೆ ದುರಸ್ತಿಗಾಗಿ ಪ್ರಾಕೃತಿಕ ವಿಕೋಪದಡಿ ಅನುದಾನ ಮಂಜೂರು ಮಾಡುವಂತೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಶ್ರೀಧರ ನಾಯಕ್,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕಾರ್ಕಳ – ಜಗದೀಶ್ ರಾವ್ ಅಂಡಾರು