ಸುಬ್ರಹ್ಮಣ್ಯ : ಕುಮಾರ ಪರ್ವತದ ತುದಿಯಲ್ಲಿರುವ ಕುಮಾರನ ಪಾದಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯ ಅವರು ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಗುರುವಾರ ಪೂಜೆ ನೆರವೇರಿಸಿದರು.
ಕುಮಾರ ಪರ್ವತದ ಮೇಲಿರುವ ಕುಮಾರನ ಪಾದಗಳಿಗೆ ಅರ್ಚಕರು ಪೂಜೆ ಸಲ್ಲಿಸಿದರು. ದೇಗುಲದ ಆಡಳಿತ ಮಂಡಳಿ ಸದಸ್ಯರು ಸಹಿತ ನೂರಾರು ಭಕ್ತರು ಕುಕ್ಕೆಯಿಂದ 18 ಕಿ.ಮೀ. ದೂರವಿರುವ ಎತ್ತರದ ಪರ್ವತವನ್ನೇರಿ ಭಾಗವಹಿಸಿದ್ದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕುಮಾರ ಪರ್ವತಕ್ಕೆ ಪವಿತ್ರ ಸಂಬಂಧವಿದೆ. ಕುಮಾರಪರ್ವತದಲ್ಲಿ ಕುಮಾರನ ಪಾದಗಳಿಗೆ ಜಲಾಭಿಷೇಕ ನೆರವೇರಿತು. ಅನಂತರ ಸೀಯಾಳಾಭಿಷೇಕ ನಡೆಯಿತು. ಬಳಿಕ ಅರಸಿನ, ಕಲ್ಲು ಸಕ್ಕರೆ, ಸಕ್ಕರೆಯನ್ನು ಪಾದಗಳಿಗೆ ಅರ್ಪಿಸುವ ಮೂಲಕ ಅಭಿಷೇಕ ನೆರವೇರಿಸಲಾಯಿತು. ಪುಷ್ಪಾಲಂಕಾರ ಮಾಡಿ ಫಲ ಸಮರ್ಪಣೆ ನೀಡಲಾಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು. ಪುರೋಹಿತರಾದ ರಾಜಶೇಖರ ಭಟ್, ಸೂರ್ಯ ಭಟ್, ರಮೇಶ್ ಭಟ್, ರಾಮಚಂದ್ರ ಭಟ್, ರಾಜಶೇಖರ್ ಭಟ್ ಕಲ್ಲಾಜೆ ಸಹಕರಿಸಿದರು.
ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ದಮಯಂತಿ ಕೂಜುಗೋಡು, ಮಾಸ್ಟರ್ ಪ್ಲಾನ್ ಅಭಿವೃದ್ಧಿ ಸಮಿತಿ ಸದಸ್ಯ ಶಿವರಾಮ ರೈ, ಗ್ರಾ.ಪಂ. ಸದಸ್ಯ ಮೋಹನದಾಸ ರೈ, ದೇಗುಲದ ಅಭಿಯಂತರ ಉದಯ ಕುಮಾರ್, ಕುಮಾರಸ್ವಾಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಣೇಶ್ ಪ್ರಸಾದ್, ರೋಟರಿ ಪೂರ್ವಾಧ್ಯಕ್ಷ ಗಿರಿಧರ್ ಸ್ಕಂಧ, ವೆಂಕಟೇಶ್ ಎಚ್.ಎಲ್., ಉಪನ್ಯಾಸಕ ರತ್ನಾಕರ ಎಸ್., ದೇಗುಲದ ಸಿಬಂದಿ ಹಾಗೂ 150ಕ್ಕೂ ಅಧಿಕ ಭಕ್ತರು ಯಾತ್ರೆಯಲ್ಲಿ ಭಾಗವಹಿಸಿದ್ದರು.