ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರವಿವಾರ ಬೆಳಗ್ಗೆ ರಾಮ ಲಕ್ಷ್ಮಣ ಕೊಪ್ಪರಿಗೆ ಏರುವುದರೊಂದಿಗೆ ಚಂಪಾಷಷ್ಠಿ ಉತ್ಸವ ಆರಂಭಗೊಂಡಿತು.
ಎಲ್ಲ ಕ್ಷೇತ್ರದಲ್ಲಿ ಕೊಡಿ ಏರುವುದರ ಮೂಲಕ ಜಾತ್ರೆ ಆರಂಭವಾದರೆ ಕುಕ್ಕೆಯಲ್ಲಿ ಕೊಪ್ಪರಿಗೆ ಒಲೆಗೇರಿಸುವುದರೊಂದಿಗೆ ಉತ್ಸವ ಆರಂಭಗೊಳ್ಳುವುದು ವಿಶೇಷ.
ಆರಂಭದಲ್ಲಿ ಪ್ರಧಾನ ಅರ್ಚಕರು ರಾಮ – ಲಕ್ಷ್ಮಣ ಎಂಬ ಜೋಡಿ ಅನ್ನದ ಕೊಪ್ಪರಿಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಎರಡು ಬೃಹತ್ ಒಲೆಗಳ ಮೇಲೆ ಅನ್ನದಾನದ ಸಂಕೇತವಾದ ಕೊಪ್ಪರಿಗೆಗಳನ್ನು ಏರಿಸಿ ಅನ್ನ ಬೆಂದ ಬಳಿಕ ಪೂಜೆ ಸಲ್ಲಿಸಲಾಯಿತು. ಅದೇ ಅನ್ನವನ್ನು ಭಕ್ತರಿಗೆ ಪ್ರಸಾದ ಭೋಜನವಾಗಿ ವಿತರಿಸಲಾಗುತ್ತದೆ.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ ವ್ಯವಸ್ಥಾಪನ ಸಮಿತಿ ಸದಸ್ಯರು, ದೇವಸ್ಥಾನದ ಅಧಿಕಾರಿಗಳು, ಸಿಬಂದಿ, ಭಕ್ತರು ಉಪಸ್ಥಿತರಿದ್ದರು. ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ರವಿವಾರ ಬೆಳಗ್ಗೆ ಅಖಂಡ ಭಜನೋತ್ಸವಕ್ಕೆ ಚಾಲನೆ ನೀಡಲಾಯಿತು.
ಡಿ.11ರಂದು ರಾತ್ರಿ ಶೇಷವಾಹನ ಯುಕ್ತ ಬಂಡಿ ಉತ್ಸವ ಜರುಗಲಿದೆ. ಡಿ.12ರಂದು ಲಕ್ಷದೀಪೋತ್ಸವ ಹಾಗೂ ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ.