Advertisement

ಕುಕ್ಕೆ: ಕಿದು ತೆಂಗು ಅಭಿವೃದ್ಧಿ ಸಂಸ್ಥೆ ಆಂಧ್ರಕ್ಕೆ  ಸ್ಥಳಾಂತರ

10:03 AM Jul 20, 2018 | |

ಸುಬ್ರಹ್ಮಣ್ಯ: ದಕ್ಷಿಣ ಏಷ್ಯಾದಲ್ಲಿ ಅಗ್ರಸ್ಥಾನ ಪಡೆದ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕಿದುವಿನ ಅಂತಾರಾಷ್ಟ್ರೀಯ ತೆಂಗು ಅಭಿವೃದ್ಧಿ ಸಂಸ್ಥೆ ಸ್ಥಳಾಂತರ ಭೀತಿ ಎದುರಿಸುತ್ತಿದೆ. ಈ ಸಂಶೋಧನ ಕೇಂದ್ರ ವನ್ನು ಆಂಧ್ರಕ್ಕೆ ಸ್ಥಳಾಂತರಿಸುವ ಹುನ್ನಾರ ಉನ್ನತ ಮಟ್ಟದಲ್ಲಿ ಗುಪ್ತವಾಗಿ ನಡೆಯುತ್ತಿದೆ. ಹೀಗಾಗಿ, ಸಂಶೋಧನ ಕೇಂದ್ರವೊಂದು ರಾಜ್ಯದ ಕೈತಪ್ಪುವ ಸಾಧ್ಯತೆ ಇದೆ.

Advertisement

ಕೇಂದ್ರ ಸರಕಾರದ ಕೃಷಿ ಮಂತ್ರಾಲಯದ ಅಧೀನದಲ್ಲಿ ಇಂಡಿಯನ್‌ ಕೌನ್ಸಿಲ್‌ ಅಗ್ರಿಕಲ್ಚರ್‌ ರಿಸರ್ಚ್‌ ಎಂಬ ಸಂಸ್ಥೆ ಕಾರ್ಯಾಚರಿಸುತ್ತಿದೆ. ಇದರ ಕೆಳಗೆ ದೇಶದಲ್ಲಿ 140 ಅಂಗಸಂಸ್ಥೆಗಳು ಕೃಷಿ ಸಂಶೋಧನೆಯಲ್ಲಿ ತೊಡಗಿವೆ. ಈ ಪೈಕಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆಯೂ ಒಂದು. ಇದರ ಮುಖ್ಯ ಕಚೇರಿ ಕೇರಳ ರಾಜ್ಯದ ಕಾಸರಗೋಡಿನ ಕೂಡ್ಲು ಎಂಬಲ್ಲಿದೆ. ಇಲ್ಲಿ ತೋಟದ ಬೆಳೆಗಳಾದ ಅಡಿಕೆ, ತೆಂಗು ಕೊಕ್ಕೊ ಬಗ್ಗೆ ಸಂಶೋಧನೆ ಮತ್ತು ಉತ್ತಮ ತಳಿಗಳ ಸಂರಕ್ಷಣೆ ಮಾಡಲಾಗುತ್ತಿದೆ. ರೈತರಿಗೆ ಉತ್ತಮ ತಳಿಗಳ ಬೀಜ ಮತ್ತು ಸಸಿಗಳನ್ನು ವಿತರಿಸಲಾಗುತ್ತದೆ.

1972ರಲ್ಲಿ ಪುತ್ತೂರು ತಾಲೂಕಿನ ಬಿಳಿನೆಲೆ ಗ್ರಾಮದ ಕಿದುವಿನ ರಕ್ಷಿತಾರಣ್ಯದಲ್ಲಿ 300 ಎಕರೆ ಭೂಮಿಯನ್ನು ಅರಣ್ಯ ಇಲಾಖೆಯಿಂದ 30 ವರ್ಷಗಳ ಅವಧಿ ಲೀಸಿಗೆ ಪಡೆದು ಅಡಿಕೆ, ತೆಂಗು ಮತ್ತು ಕೊಕ್ಕೊ ಗಿಡಗಳನ್ನು ಬೆಳೆಸಿ ಸಂಶೋಧನ ಉಪಕೇಂದ್ರವನ್ನು ಸ್ಥಾಪಿಸಿದೆ. ಕೃಷಿಗೆ ಸಂಬಂಧಿಸಿ ವಿಜ್ಞಾನಿಗಳ ಸಂಶೋಧನೆಗೆ ಮಾಹಿತಿ ಹಾಗೂ ಕೃಷಿಕರಿಗೆ ಉತ್ತಮ ತಳಿಗಳನ್ನು ಒದಗಿಸಲಾಗುತ್ತಿದೆ.

140 ತಳಿ ಸಂರಕ್ಷಣೆ
ವಿಶ್ವದ ಐದು ತೆಂಗು ವಂಶಾಭಿವೃದ್ಧಿ ಬ್ಯಾಂಕ್‌ಗಳಲ್ಲಿ ಇದು ಸ್ಥಾನ ಪಡೆದಿದೆ. ಇಲ್ಲಿ ಸಂಕರ ತಳಿಗಳನ್ನು ಅಭಿವೃದ್ಧಿಪಡಿಸಿ ಸಸಿಗಳನ್ನು ಮಿತದರದಲ್ಲಿ ಒದಗಿಸುವುದರಿಂದ ದೇಶಾದ್ಯಂತ ಬೇಡಿಕೆಯಿದೆ. ಬೀಜ ಮತ್ತು ಗಿಡಗಳಿಂದಲೇ ವಾರ್ಷಿಕ 1.50 ಕೋಟಿ ರೂ. ಆದಾಯ ಬರುತ್ತಿದೆ. 15 ವರ್ಷಗಳ ಹಿಂದೆ ತೆಂಗಿನ 140 ಉತ್ತಮ ತಳಿಗಳನ್ನು ತಂದು, ಬೆಳೆಸಿ, ತೆಂಗಿನ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡಲಾಗಿದೆ.ಇಲ್ಲಿ ಬೆಳೆಯುವ ಮಂಗಳ, ಮೋಹಿತ್‌ನಗರ, ಸುಮಂಗಲ, ಸ್ವರ್ಣಮಂಗಲ ಇತ್ಯಾದಿ ಅಡಿಕೆ ಬೀಜ ಮತ್ತು ಸಸಿಗಳಿಗೆ ಅಪಾರ ಬೇಡಿಕೆಯಿದೆ. ಕೇಂದ್ರದ 300 ಎಕ್ರೆ ಭೂಮಿಯ ಲೀಸ್‌ ಅವಧಿ 2000ನೇ ಇಸವಿಗೆ ಮುಗಿದಿದೆ. ಸುಪ್ರೀಂ ಕೋರ್ಟ್‌ನ ಆದೇಶದಂತೆ ಅರಣ್ಯ ಇಲಾಖೆ ಭೂಮಿ ಮರಳಿ ಪಡೆಯಲು ಮುಂದಾಗಿತ್ತು. ಜಾಗ ಮರಳಿ ನೀಡುವುದು ಅಥವಾ ಬದಲಾಗಿ 300 ಎಕರೆ ಖಾಲಿ ಜಾಗದಲ್ಲಿ ಅರಣ್ಯ ಬೆಳೆಸಲು ತಗಲುವ 12 ಕೋಟಿ ರೂ.ಗಳನ್ನು ಭರಿಸಿ ಮತ್ತೆ 30 ವರ್ಷಕ್ಕೆ ಲೀಸಿಗೆ ಪಡೆಯಲು ಅವಕಾಶ ಕಲ್ಪಿಸಿತ್ತು.

ಪಾವನ ಭೂಮಿ
ಕುಕ್ಕೆ ಸುಬ್ರಹ್ಮಣ್ಯ ಪವಿತ್ರ ಕ್ಷೇತ್ರ. ಪಕ್ಕದ ಕಿದು ಕೃಷಿಕರ ಪಾಲಿಗೆ ಪಾವನ ಭೂಮಿ. ಸುಮಾರು 18,000 ತೆಂಗು, 15,000 ಅಡಿಕೆ, 5,000 ಕೊಕ್ಕೊ ಸಸಿಗಳು 300 ಎಕರೆ ಭೂಮಿಯಲ್ಲಿ ಫಲಭರಿತವಾಗಿ ಬೆಳೆದು ನಿಂತಿವೆ. ಕಡಬ-ಸುಬ್ರಹ್ಮಣ್ಯ ರಾ.ಹೆ. ಬದಿಯಲ್ಲೆ ಈ ತಾಣವಿದೆ. ಪ್ರವಾಸಿಗರ, ಕೃಷಿಕರ ಸೆಳೆಯುವ ಈ ಕೇಂದ್ರದಲ್ಲಿ ಖಾಯಂ ಹಾಗೂ ಹೊರಗುತ್ತಿಗೆಯಲ್ಲಿ 40 ಮಂದಿ ಕೆಲಸಕ್ಕಿದ್ದಾರೆ. ಈ ಕೇಂದ್ರವನ್ನು ಕೃಷಿಕರಿಗಾಗಿ ಉಳಿಸಲು ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಬಲ ಹೋರಾಟ ನಡೆಸಬೇಕಿದೆ.

Advertisement

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next