Advertisement

Kodi: ಪ್ರವಾಸೋದ್ಯಮ ಅಭಿವೃದ್ಧಿಗೆ ನೀಲನಕ್ಷೆ; ರಾಜ್ಯದಿಂದ 6.5 ಕೋ.ರೂ.ಗೆ ಬೇಡಿಕೆ

02:40 PM Sep 13, 2024 | Team Udayavani |

ಕುಂದಾಪುರ: ಕೋಡಿ ಕಡಲತಡಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ, ಪ್ರವಾಸಿ ಸ್ನೇಹಿ ವಾತಾವರಣ ನಿರ್ಮಿಸಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ನೀಡಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ನೀಲನಕಾಶೆ ಸಿದ್ಧಪಡಿಸಲಾಗಿದ್ದು ಕೇಂದ್ರ ಹಾಗೂ ರಾಜ್ಯದಿಂದ ಅನುದಾನಕ್ಕೆ ಮನವಿ ಮಾಡಲಾಗಿದೆ. ಯಾವ ಪ್ರಮಾಣದ ಅನುದಾನ ದೊರೆಯಲಿದೆ ಎನ್ನುವುದನ್ನು ಅವಲಂಬಿಸಿ, ಕಡಿಮೆ ಅನುದಾನ ಬಂದರೆ ಖಾಸಗಿ ಸರಕಾರದ ಸಹಭಾಗಿತ್ವದಲ್ಲಿ ಪಿಪಿಪಿ ಮಾಡೆಲ್‌ನಲ್ಲಿ ಕೆಲಸ ನಡೆಯುವ ನಿರೀಕ್ಷೆ ಇದೆ. ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಕೋಡಿಗೆ ಭೇಟಿ ನೀಡಿದ್ದಾಗಲೂ ಅಭಿವೃದ್ಧಿಗೆ ಉತ್ಸುಕರಾಗಿದ್ದರು. ಆದರೆ ಅನುದಾನ ಈವರೆಗೆ ಬಂದಿಲ್ಲ.

Advertisement

ಕೋಡಿ
ಕುಂದಾಪುರದ ಕೋಡಿ ಕಡಲ ತೀರ ಉತ್ತರ ಕನ್ನಡ, ಉಡುಪಿ, ದ.ಕ. ಜಿಲ್ಲೆಯಲ್ಲಿ ಅತಿ ದೀರ್ಘ‌ವಾದ ತಟವಿರುವ ಪ್ರದೇಶವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯಲು ಅವಕಾಶ ಇದೆ. ಹೆಚ್ಚು ಜನ ಬಂದರೂ ಸಮಸ್ಯೆಯಾಗದಷ್ಟು ವ್ಯವಸ್ಥೆ ಮಾಡಬಹುದು. ವಿಸ್ತಾರವೂ ಇದೆ. ಸ್ಥಳಾವಕಾಶವೂ ಇದೆ. ಈ ನಿಟ್ಟಿನಲ್ಲಿ ಉಡುಪಿಯ ಮಲ್ಪೆ, ಮಂಗಳೂರಿನ ಸುರತ್ಕಲ್‌, ಪಣಂಬೂರು ಸೇರಿದಂತೆ ವಿವಿಧೆಡೆ ಇರುವ ಬೀಚ್‌ಗಳಿಗಿಂತಲೂ ಇಲ್ಲಿ ಉತ್ತಮ ಸೌಕರ್ಯ ನೀಡುವಂತಹ ವಾತಾವರಣ ಇದೆ. ಮಂಗಳೂರಿನ ಪಣಂಬೂರಿನಲ್ಲಿರುವ 1 ಕಿ.ಮೀ. ದೂರ ಹಾಗೂ ವಿಶಾಖಪಟ್ಟಣದಲ್ಲಿ ಇರುವ 3 ಕಿ.ಮೀ. ದೂರದ ಸೀವಾಕ್‌ ಪ್ರವಾಸಿಗರನ್ನು ಸೆಳೆಯಲು ಅಷ್ಟೊಂದು ಸಫಲವಾಗಿಲ್ಲ. ಮಲ್ಪೆಯಲ್ಲಿ ಜನ ಆಗಮಿಸುತ್ತಾರೆ. ಕುಂದಾಪುರದ ಕೋಡಿಯಲ್ಲಿ ಸಾವಿರಾರು ಮಂದಿ ರಜಾದಿನಗಳಲ್ಲಿ, ಸಂಜೆ ವೇಳೆಯಲ್ಲಿ ಆಗಮಿಸುತ್ತಾರೆ. ವ್ಯವಸ್ಥಿತವಾದ ಪ್ರವಾಸಿ ತಾಣವಾಗಿ ಮಾರ್ಪಟ್ಟರೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಲಿದೆ.

ಅರಣ್ಯ ಇಲಾಖೆ ದತ್ತು
ಅರಣ್ಯ ಇಲಾಖೆ ಇಲ್ಲಿನ ಸಮುದ್ರತೀರವನ್ನು ದತ್ತು ಪಡೆದು ಸ್ವತ್ಛತೆ, ರಕ್ಷಣೆಗೆ ಸಿಬಂದಿಯನ್ನು ನಿಯೋಜಿಸಿತ್ತು. ದೇಶದಲ್ಲೇ ಸಮುದ್ರತೀರ ದತ್ತು ಪಡೆದು ಸ್ವತ್ಛತೆ ಕಾಪಾಡಿದ್ದು ಅರಣ್ಯ ಇಲಾಖೆ ಇತಿಹಾಸದಲ್ಲಿ ಅಪರೂಪದ ಪ್ರಕರಣವಾಗಿತ್ತು. ಕೆಲವೇ ಬೀಚ್‌ಗಳನ್ನು ಹೀಗೆ ದತ್ತು ಪಡೆಯಲಾಗಿತ್ತು. ಆದರೆ ಎರಡು ವರ್ಷದಲ್ಲೇ ಈ ಯೋಜನೆ ಕೊನೆಗೊಂಡಿದ್ದು ಮುಂದುವರಿಯಲೇ ಇಲ್ಲ.

ಪ್ರತೀ ವಾರ ಸ್ವತ್ಛತೆ ಕಾರ್ಯ
ಪ್ರಸ್ತುತ ಕೋಡಿ ಕಡಲತೀರದಲ್ಲಿ ವಿವಿಧ ಸಂಘ ಸಂಸ್ಥೆಗಳು ಪ್ರತೀ ವಾರ ಸ್ವತ್ಛತೆ ಕಾರ್ಯ ನಡೆಸುತ್ತಿವೆ. ಟನ್‌ಗಟ್ಟಲೆ ತ್ಯಾಜ್ಯ ಸಂಗ್ರಹಿಸುತ್ತಿವೆ. ಮಳೆಗಾಲದ ಸಂದರ್ಭದಲ್ಲಿ ತಾಲೂಕು ಆಡಳಿತ ಜೀವರಕ್ಷಕರನ್ನು, ಹೋಮ್‌ ಗಾರ್ಡ್‌ಗಳನ್ನು ನಿಯೋಜಿಸಿದೆ.

ಅವಶ್ಯಗಳು
ಪ್ರವಾಸೋದ್ಯಮ ಇಲಾಖೆ ಸಿದ್ಧಪಡಿಸಿದ ನಕ್ಷೆ ಪ್ರಕಾರ ಶೌಚಾಲಯ, ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ, ವಾಣಿಜ್ಯ ಮಳಿಗೆಗಳು, ಕಲ್ಲಿನ ಬೆಂಚುಗಳು, ಸುಂದರೀಕರಣ, ಇಂಟರ್‌ಲಾಕ್‌ ಅಳವಡಿಕೆ, ಜೀವರಕ್ಷಕರ ವೀಕ್ಷಣಗೋಪುರ, ಕಸದ ಬುಟ್ಟಿ, ಸೂಚನಾ ಫಲಕ, ಸಣ್ಣ ಸಣ್ಣ ಗುಡಿಸಲು ಮಾದರಿಯ ವಿಶ್ರಾಂತಿ ಕೇಂದ್ರಗಳು ಇರಲಿವೆ.

Advertisement

ಶಾಸಕರ ಭೇಟಿ
ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರು ಈ ನಿಟ್ಟಿನಲ್ಲಿ ಉತ್ಸುಕರಾಗಿದ್ದು ಪ್ರವಾಸೋದ್ಯಮ ಇಲಾಖೆಯವರ ಜತೆ ಚರ್ಚಿಸಿ, ಅವರ ಜತೆ ಸ್ಥಳಕ್ಕೆ ಭೇಟಿ ನೀಡಿ ಸೂಚನೆಗಳನ್ನು ನೀಡಿದ್ದಾರೆ. ಇಲ್ಲಿ ಈಗಾಗಲೇ ದೀಪಸ್ತಂಭ, ಸೀವಾಕ್‌ ಇದ್ದು, ಖಾಸಗಿಯವರಿಂದ ಮನೋರಂಜನ ಆಟಗಳು, ದೋಣಿ ವಿಹಾರ, ಡಾಲ್ಫಿನ್‌ ವೀಕ್ಷಣೆ, ಕಯಾಕಿಂಗ್‌ಗೆ ವ್ಯವಸ್ಥೆ ಇದೆ. ಪ್ರವಾಸೋದ್ಯಮ ಇಲಾಖೆ ಮೂಲಕ ಮಾಡಿದಾಗ ಇವೆಲ್ಲದಕ್ಕೆ ಪ್ರಮಾಣೀಕರಣ ಬರುತ್ತದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕೋಟ ಕಾರಂತ ಥೀಮ್‌ ಪಾರ್ಕ್‌, ಮರವಂತೆ ತ್ರಾಸಿ ಬೀಚ್‌ ಕೂಡ ವೀಕ್ಷಿಸಬಹುದು.

ಮನವಿ ಮಾಡಲಾಗಿದೆ
ಕೇಂದ್ರ ಸರಕಾರದ ಸ್ವದೇಶ ದರ್ಶನ್‌ ಯೋಜನೆ ಮೂಲಕ 26 ಕಿ.ಮೀ. ವ್ಯಾಪ್ತಿಯ ಬೀಚ್‌ ಅಭಿವೃದ್ಧಿಗೆ ಅನುದಾನಕ್ಕೆ ಮನವಿ ಮಾಡಲಾಗುವುದು. ಪ್ರಾಥಮಿಕ ಅವಶ್ಯಗಳನ್ನು ಪೂರೈಸಲು ರಾಜ್ಯದಿಂದ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ 6.5 ಕೋ.ರೂ. ನೀಡುವಂತೆ ಮನವಿ ಕಳುಹಿಸಲಾಗಿದೆ.
-ಕುಮಾರ್‌ ಸಿ.ಯು. ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಉಡುಪಿ

26 ಕಿ.ಮೀ.ಗೆ ಯೋಜನೆ
ಕೇಂದ್ರ ಸರಕಾರದ ಸ್ವದೇಶ್‌ ದರ್ಶನ್‌ ಯೋಜನೆಯಡಿ ಕುಂದಾಪುರದ 26 ಕಿ.ಮೀ. ಕಡಲತಡಿಯ ಅಭಿವೃದ್ಧಿಗೆ ನೀಲನಕಾಶೆ ಮಾಡಲಾಗಿದೆ. ಈ ಬಗ್ಗೆ ಶಾಸಕರು ಸಂಸದರ ಮೂಲಕ ಕೇಂದ್ರ ಸರಕಾರಕ್ಕೆ ಅನುದಾನಕ್ಕೆ ಮನವಿ ನೀಡಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಮೂಲಭೂತ ಅವಶ್ಯಕತೆಗಳ ಪೂರೈಕೆಗಾಗಿ ರಾಜ್ಯ ಸರಕಾರದಿಂದ 6.5 ಕೋ.ರೂ. ಅನುದಾನ ಕೇಳಲಾಗಿದೆ. ಇದರಲ್ಲಿ 1 ಎಕರೆ ಜಾಗದಲ್ಲಿ ಎರಡು ಕಡೆ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ, ಹೈ ಮಾಸ್ಟ್‌ ಲೈಟಿಂಗ್‌, ಪ್ರವಾಸಿಗರಿಗೆ ಬಟ್ಟೆ ಬದಲಿಸುವ ಕೊಠಡಿ, ಅಲ್ಲಲ್ಲಿ ಸೂಚನಾ ಫಲಕ ಅಳವಡಿಕೆ ಸೇರಿದಂತೆ ಪ್ರಾಥಮಿಕ ಆವಶ್ಯಕತೆಗಳನ್ನು ನೆರವೇರಿಸಲು ಯೋಜಿಸಲಾಗಿದೆ.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next