Advertisement

ಕುಕನೂರು: ಸೌಕರ್ಯವಿಲ್ಲದೇ ಹಮಾಲರ ಕಾಲೋನಿ ಅನಾಥ!

06:11 PM May 14, 2024 | Team Udayavani |

ಉದಯವಾಣಿ ಸಮಾಚಾರ
ಕುಕನೂರು: ಪಟ್ಟಣದ ಗುದ್ನೇಪ್ಪನ ಮಠದಲ್ಲಿರುವ ರುದ್ರಮುನೀಶ್ವರ ಹಮಾಲರ ಕಾಲೋನಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ಬೀದಿ ದೀಪಗಳಿಲ್ಲದೇ ಅನಾಥವಾಗಿದೆ. 2004ರಲ್ಲಿ ಸರ್ಕಾರ ಸಹಾಯಧನ ನೀಡಿ ಇಲ್ಲಿನ ಹಮಾಲರಿಗೆ ನೀಡಲಾದ ನಿವೇಶನಗಳ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸದ ಕಾರಣ ನಿವೇಶನಗಳಲ್ಲಿ ಜಾಲಿ ಮರಗಳು ಬೆಳೆದು ನಿಂತಿವೆ. ಹೀಗಾಗಿ ಈ ಕಾಲೋನಿಯು ವಿಷ ಜಂತುಗಳ ವಾಸಸ್ಥಾನವಾಗಿದೆ.

Advertisement

ಹೀಗಾಗಿ ಫಲಾನುಭವಿಗಳು ಈ ಕಾಲೋನಿಗೆ ಹೋಗಲು ಭಯ ಪಡುವಂತಾಗುದೆ. ಸರ್ಕಾರ ಡಾ|ಬಿ.ಆರ್‌. ಅಂಬೇಡ್ಕರ್‌, ರಾಜೀವ
ಗಾಂಧಿ  ವಸತಿ ಯೋಜನೆ, ಬಸವ ಆವಾಸ್‌ ಇನ್ನಿತರೆ ಯೋಜನೆಗಳ ಮೂಲಕ ಮನೆಗಳನ್ನು ನೀಡಲಾಗಿದೆ.ನೀರಿನ ಅಭಾವದಿಂದ ಕೆಲವು ಪೂರ್ಣಗೊಂಡರೆ ಇನ್ನೂ ಕೆಲ ಮನೆಗಳನ್ನು ಅರೆಬರೆ ನಿರ್ಮಿಸಿ ಅರ್ಧದಲ್ಲೇ ಬಿಡಲಾಗಿದೆ. ಸರ್ಕಾರ ಈ ಕಾಲೋನಿಗೆ ಮೂಲ ಸೌಕರ್ಯ ನೀಡದಿರುವುದು ಈ ದುರಾವಸ್ಥೆಗೆ ಕಾರಣ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಜನರು ನೀರಿಲ್ಲದೇ ಇರುವುದರಿಂದ ಈ ಕಾಲೋನಿಯ ಮನೆಗಳಲ್ಲಿ ವಾಸವಾಗದೇ ಕಟ್ಟಿದ ಮನೆಗಳ ಬಿಟ್ಟು ಬೇರೆಡೆಗೆ ವಾಸವಾಗುತ್ತಿದ್ದಾರೆ.

ಹೀಗಾಗಿ ಕಟ್ಟಿರುವ ಮನೆಗಳು ಕೂಡ ಅಳಿದು ಹೋಗುತ್ತಿವೆ. ಕೆಲವರು ಬೇರೆ ಕಡೆ ಹೋಗಲಾರದೇ ಅನಿವಾರ್ಯವಾಗಿ ಇಲ್ಲಿಯೇ ವಾಸವಾಗಿದ್ದಾರೆ. ಹಾವು, ಚೇಳು ಇನ್ನಿತರ ವಿಷ ಜಂತುಗಳ ಮಧ್ಯೆಯೇ ಭಯದಲ್ಲಿ ಬದುಕುವಂತಾಗಿದೆ. ಈ ಬಗ್ಗೆ ಹಲವು
ಬಾರಿ ಪಪಂಗೆ ಮನವಿ ನೀಡಲಾಗಿದೆ. ಆದರೆ ಬೆರಳೆಣಿಕೆಯಷ್ಟು ಮನೆಗಳಿಗೆ ಎನ್ನುವ ನೆಪದಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ನಿವೇಶನಗಳ ದಾಖಲಾತಿ ಕೇಳಿದರೆ ಬೀದಿ ದೀಪ, ಸ್ವತ್ಛತೆ, ಗ್ರಂಥಾಲಯ ಇನ್ನಿತರೆ ಎಲ್ಲ ಕರಗಳ ಟ್ಯಾಕ್ಸ್‌ ಹಾಕುತ್ತಾರೆ. ಆದರೆ ಕಾಲೋನಿಗೆ ಯಾವುದೇ ಮೂಲ ಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ ತೋರುತ್ತಾರೆ ಎನ್ನುವುದು ನಿವಾಸಿಗಳ ಆರೋಪ.

ಅಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ನೀರಿನ ವ್ಯವಸ್ಥೆ ಕಲ್ಪಿಸಲು ಹಣ ಕಾಯ್ದಿರಿಸಲಾಗಿದೆ ಎನ್ನುವ ಬಗ್ಗೆ ಕೇಳಿದ್ದೇನೆ. ನಾನು ಈಗ ಬಂದಿದ್ದು, ಯಾವ ಯೋಜನೆಯಲ್ಲಿ ಹಣ ಇಟ್ಟಿದ್ದಾರೆ ನೋಡಿ ಸೌಲಭ್ಯ ಕಲ್ಪಿಸುತ್ತೇವೆ.
*ರವೀಂದ್ರ ಬಾಗಲ್ಕೋಟಿ,ಮುಖ್ಯಾಧಿಕಾರಿ,
ಪಟ್ಟಣ ಪಂಚಾಯತಿ, ಕುಕನೂರು

ಸೌಕರ್ಯ ನೀಡುವಂತೆ ಸಂಘದ ವತಿಯಿಂದ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಇದುವರೆಗೂ ಯಾವುದೇ ಕ್ರಮ
ಕೈಗೊಂಡಿಲ್ಲ. ಕುಡಿಯುವ ನೀರು, ರಸ್ತೆ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಆಗಬೇಕಿದೆ.
*ನಿಂಗಪ್ಪ ಗೊರ್ಲೆಕೊಪ್ಪ,
ಹಮಾಲರ ಸಂಘದ ಅಧ್ಯಕ್ಷ

Advertisement

*ಬಸವರಾಜ ಕೋನಾರಿ

Advertisement

Udayavani is now on Telegram. Click here to join our channel and stay updated with the latest news.

Next