Advertisement

ಕುದುರೆಮುಖ: ಕಾಳ್ಗಿಚ್ಚು ಹತೋಟಿಗೆ ಅರಣ್ಯ ಇಲಾಖೆ ಸಿಬಂದಿ ಹರಸಾಹಸ

11:12 PM Feb 22, 2023 | Team Udayavani |

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆ ಮುಖ ಕಡೆಯಿಂದ ಬೆಳ್ತಂಗಡಿ ವನ್ಯಜೀವಿ ವಿಭಾಗ ವ್ಯಾಪ್ತಿಯ ಅಳದಂಗಡಿ, ಊರ್ಜಾಲುಬೆಟ್ಟ, ಹೂವಿನಕೊಪ್ಪಲು ಅರಣ್ಯದ ಹುಲ್ಲುಗಾವಲು ಪ್ರದೇಶದಲ್ಲಿ ವ್ಯಾಪಿಸಿರುವ ಬೆಂಕಿಯನ್ನು ಹತೋಟಿಗೆ ತರಲು ವನ್ಯಜೀವಿ ವಿಭಾಗ ಹರಸಾಹಸ ಪಡುತ್ತಿದೆ.

Advertisement

ಮಲವಂತಿಗೆ ಗ್ರಾಮದ ಕೊಲ್ಲಿ ಪ್ರದೇಶದಲ್ಲಿ, ಚಾರ್ಮಾಡಿಯ ಪರ್ಲಾಣಿ ಪರಿಸರ ಹಾಗೂ ಕೊಟ್ಟಿಗೆಹಾರ ವಿಭಾಗದ ಅಣ್ಣಪ್ಪ ಬೆಟ್ಟ ಸಮೀಪ ಕಂಡುಬಂದ ಬೆಂಕಿಯನ್ನು ಪೂರ್ಣ ಪ್ರಮಾಣದಲ್ಲಿ ಹತೋಟಿಗೆ ತರಲಾಗಿದೆ. ಆದರೆ ಮೇಲ್ಭಾಗದ ಹುಲ್ಲುಗಾವಲು ವ್ಯಾಪ್ತಿಗೆ ಬೆಂಕಿ ಪಸರಿಸಿದ್ದರಿಂದ ದುರ್ಗಮ ಹಾದಿಯಲ್ಲಿ ಮಂಗಳವಾರದಿಂದ ಬುಧವಾರದ ವರೆಗೂ ಬೆಂಕಿ ಹತೋಟಿಗೆ ತರುವ ಕಾರ್ಯ ಅಹರ್ನಿಶಿಯಾಗಿ ಮುಂದುವರಿದಿದೆ.

ಕಾರ್ಯಾಚರಣೆಯಲ್ಲಿ ವನ್ಯಜೀವಿ ವಿಭಾಗದ ಬೆಳ್ತಂಗಡಿ ಆರ್‌ಎಫ್‌ಒ ಸ್ವಾತಿ, ಡಿಆರ್‌ಎಫ್‌ಒ ಕಿರಣ್‌ ಪಾಟೀಲ್‌, ರಂಜಿತ್‌, ರವೀಂದ್ರ ಅಂಕಲಗಿ, ನಾಗೇಶ್‌, ಗಸ್ತು ಅರಣ್ಯ ಪಾಲಕರಾದ ಮಾರುತಿ, ರಾಜು, ಭರತೇಶ್‌, ರಾಘವೇಂದ್ರ, ಪಾಂಡುರಂಗ ಕಮತಿ, ಸ್ಥಳೀಯರು ಸೇರಿ 50ಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ.

ದುರ್ಗಮ ಪ್ರದೇಶ
ಬಿಸಿಲಿನಿಂದಾಗಿ ಹುಲ್ಲು ಒಣಗಿರುವುದರಿಂದ ಬೆಂಕಿ ಕ್ಷಿಪ್ರವಾಗಿ ಪಸರಿಸುತ್ತಿದೆ. ಅರಣ್ಯ ಸಿಬಂದಿ ರಸ್ತೆಯಿಂದ ಈ ಪ್ರದೇಶಕ್ಕೆ ಏಳೆಂಟು ಕಿ.ಮೀ. ದೂರವನ್ನು ಗುಡ್ಡ ಗಾಡು ಹತ್ತಿ ಕ್ರಮಿಸಬೇಕಿದೆ. ವನ್ಯಜೀವಿ ವಿಭಾಗದ ಸಕಾಲಿಕ ಕ್ರಮದಿಂದ ಮರಮಟ್ಟುಗಳಿಗೆ ಹಾನಿಯಾಗಿಲ್ಲ.

ಆಧುನಿಕ ತಂತ್ರಜ್ಞಾನದ ಕೊರತೆ
ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ ಅರಣ್ಯ ಪ್ರದೇಶದಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸಿದ್ದರೂ ಬೆಂಕಿ ಅದನ್ನು ಮೀರಿ ಆವರಿಸಿದೆ. ಆಧುನಿಕ ತಂತ್ರಜ್ಞಾನವಿಲ್ಲದೆ ಸಿಬಂದಿ ಕತ್ತಿ, ಕೋಲು, ಸೊಪ್ಪುಗಳಿಂದಲೇ ಕೆನ್ನಾಲಗೆ ಚಾಚುತ್ತಿರುವ ಬೆಂಕಿಯನ್ನು ಆರಿಸುವ ಅನಿವಾರ್ಯ ಬಂದಿದೆ. ಇತ್ತೀಚೆಗೆ ಸಕಲೇಶಪುರದ ಮೂರ್ಕಣ್ಣು ಗುಡ್ಡ ಅರಣ್ಯ ಪ್ರದೇಶದಲ್ಲಿ ಕಾಳಿYಚ್ಚಿಗೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದ ಅರಣ್ಯ ವೀಕ್ಷಕ ತೀರ್ಥಹಳ್ಳಿಯ ಸುಂದರೇಶ್‌ ಮೃತಪಟ್ಟಿದ್ದರು. ಶೂ, ಜಾಕೆಟ್‌, ಬೆಂಕಿ ರಕ್ಷಕ ವಸ್ತ್ರಗಳ ವ್ಯವಸ್ಥೆಯಿಲ್ಲ. ಬೆಂಕಿ ಆರಿಸಲು ಅಗತ್ಯ ಬೇಕಾದ ಬ್ಲೋಯರ್‌, ಫೈರ್‌ ಎಕ್ಸ್‌ಟಿಂಗ್ವಿಷರ್‌ ಉಪಕರಣ ಕೂಡ ನಿಗದಿತ ಪ್ರಮಾಣದಲ್ಲಿ ಇಲಾಖೆಯಲ್ಲಿಲ್ಲ. ಜತೆಗೆ ಸಿಬಂದಿ ಕೊರತೆಯಿಂದ ಬೆಂಕಿ ಆರಿಸುವುದು ವಿಳಂಬವಾಗುತ್ತಿದೆ.

Advertisement

ಕುದುರೆಮುಖ ರಾ. ಉದ್ಯಾನವನದ ಬೆಳ್ತಂಗಡಿ ವಿಭಾಗದ ಎರಡು ಗುಡ್ಡ ಪ್ರದೇಶದಲ್ಲಿ ಬೆಂಕಿ ಹರಡಿ ಕೊಂಡಿದೆ. ಬೆಂಕಿ ನಂದಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕುದುರೆಮುಖ ಪ್ರದೇಶದ ಕಡೆಯಿಂದಲೂ ಬೆಂಕಿ ಆರಿಸುವ ಕೆಲಸ ನಡೆಯುತ್ತಿದೆ. ಗುರುವಾರವೂ ಕಾರ್ಯಾಚರಣೆ ಮುಂದುವರಿಯಲಿದೆ.
– ಸ್ವಾತಿ, ಆರ್‌ಎಫ್‌ಒ, ವನ್ಯಜೀವಿ ವಿಭಾಗ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next