ಕುಡುಪು: ಇಲ್ಲಿನ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಅನಂತ ಪದ್ಮನಾಭ ದೇವರ ಜೋಡು ಬಲಿ ಉತ್ಸವದೊಂದಿಗೆ ಷಷ್ಠಿ ಮಹೋತ್ಸವ ಶನಿವಾರ ಸಂಪನ್ನಗೊಂಡಿತು.
ಮುಂಜಾನೆ ಶ್ರೀ ಅನಂತ ಪದ್ಮನಾಭ ದೇವರ ಜೋಡು ಬಲಿ ಹೊರಟು ದೇಗುಲದ ರಾಜಾಂಗಣದಲ್ಲಿ ಕ್ಷೇತ್ರಪಾಲ ಪೂಜೆ ಜರಗಿತು. ಅತೀ ವಿಶೇಷವಾದ ಉಡುಕು ಸುತ್ತು ಬಲಿ ಉತ್ಸವ ಈ ಸಂದರ್ಭದಲ್ಲಿ ನೆರವೇರಿತು. ಅತೀ ವಿಶಿಷ್ಟವಾದ ಚೆಂಡೆ ಸುತ್ತಿನ ಸೇವೆಯಲ್ಲಿ ಈ ಬಾರಿ 5 ಚೆಂಡೆ, 4 ಡೋಲು, 6 ಚಕ್ರತಾಳ, 2 ಕೊಂಬು ಹಾಗೂ ಇಬ್ಬರು ವಾದ್ಯ ವಾದಕರು, ಒಬ್ಬರು ಶುೃತಿರನ್ನೊಳಗೊಂಡ 30 ಮಂದಿಯ ಚೆಂಡೆ ಬಳಗ ಉತ್ಸಾಹದಿಂದ ಪಾಲ್ಗೊಂಡು ಚೆಂಡೆ ಸುತ್ತು ಬಲಿ ಸಂಪನ್ನಗೊಳಿಸಿತು. ಈ ರೀತಿಯ ಚೆಂಡೆ ಸುತ್ತು ಬಲಿ ಕುಡುಪು ಕ್ಷೇತ್ರದಲ್ಲಿ ಮಾತ್ರ ವಿಶೇಷವಾಗಿ ಕಂಡು ಬರುತ್ತದೆ.
ಅನಂತರ ಶ್ರೀ ಅನಂತ ಪದ್ಮನಾಭ ದೇವರಿಗೆ ಚಂದ್ರಮಂಡಲೋತ್ಸವ, ಪಾಲಕಿ ಉತ್ಸವ ನಡೆಯಿತು. ಬಳಿಕ ಸಹಸ್ರಾರು ಭಕ್ತರಿಗೆ ಬಟ್ಟಲು ಕಾಣಿಕೆಯೊಂದಿಗೆ ದೇವರ ಮಹಾಪ್ರಸಾದ ವಿತರಿಸಲಾಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ ಹಾಗೂ ಅನುವಂಶಿಕ ಮೊಕ್ತೇಸರ ಕೆ. ನರಸಿಂಹ ತಂತ್ರಿ, ಅನುವಂಶಿಕ ಮೊಕ್ತೇಸರ ಪಿ. ಅನಂತ ಭಟ್, ಅನುವಂಶಿಕ ಮೊಕ್ತೇಸರ ಕೆ. ಬಾಲಕೃಷ್ಣ ಕಾರಂತ, ಮೊಕ್ತೇಸರ ಕೆ. ಭಾಸ್ಕರ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ಸರದಿಯಲ್ಲಿ ನಿಂತು ಸುಮಾರು 40 ಸಾವಿರ ಭಕ್ತರು ದೇವರ ದರ್ಶನ ಪಡೆದರು. ನಾಗಬನದಲ್ಲಿ ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕ ನಿರಂತರವಾಗಿ ನಡೆಯಿತು. ಭದ್ರ ಸರಸ್ವತಿ ತೀರ್ಥ ಸರೋವರದಲ್ಲಿ ಷಷ್ಠಿ ತೀರ್ಥಸ್ನಾನ ವಿಶೇಷವಾಗಿತ್ತು. ಬಂದ ಭಕ್ತರಿಗೆಲ್ಲ ಕುಡುಪು ಗ್ರಾಮಸ್ಥರು ಹಾಗೂ ಪರವೂರಿನ ಭಕ್ತರಿಂದ ನಿರಂತರ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ದೇವರ ಬಲಿ ಉತ್ಸವ ನಡೆದು, ಬಳಿಕ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಜರಗಿತು. ಮಂಗಳೂರು ಗ್ರಾಮಾಂತರ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.