Advertisement

ಸಂಪರ್ಕ ರಸ್ತೆ ನಿರ್ಮಿಸಿ: ಕುದ್ರುಬೈಲು ನಿವಾಸಿಗಳ ಆಗ್ರಹ

02:40 AM Jul 25, 2018 | Team Udayavani |

ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾ.ಪಂ.ವ್ಯಾಪ್ತಿಯ ಕುದ್ರುಬೈಲು ಪರಿಸರಕ್ಕೆ ಸಂಪರ್ಕ ರಸ್ತೆ ಇಲ್ಲದಿರುವುದರಿಂದ ಜನತೆ ವರ್ಷವಿಡೀ ಪ್ರಯಾಸ ಪಡುವಂತಾಗಿದೆ. ಇದರೊಂದಿಗೆ ಮಳೆಗಾಲದಲ್ಲಂತೂ ಈ ಭಾಗದಲ್ಲಿ ನೆರೆ ಸಮಸ್ಯೆಯಿಂದಾಗಿ ಇಡೀ ಪರಿಸರವೇ ಜಲಾವೃತಗೊಳ್ಳುತ್ತಿದ್ದು ಸಂಪರ್ಕ ತಪ್ಪಿ ಹೋಗುತ್ತಿದೆ.  ಪರಿಸರದಲ್ಲಿ ಪ್ರತಿವರ್ಷವೂ ನೆರೆ ಭೀತಿಯಿಂದ ಸರಿಯಾದ ಸಂಪರ್ಕ ರಸ್ತೆಗಳಿಲ್ಲದೆ ಪ್ರಯಾಸಪಡುವಂತಾಗಿದೆ.

Advertisement

ಸಂಪರ್ಕ ರಸ್ತೆಗಳಿಲ್ಲ 
ಕುದ್ರುಬೈಲು ಪರಿಸರದಲ್ಲಿ ಕೆಲವು ಮನೆಗಳು ಮತ್ತು ನೂರಾರು ಎಕರೆ ಕೃಷಿ ಭೂಮಿ ಇದೆ. ತೆಕ್ಕಟ್ಟೆ ರಾ.ಹೆ. 66 ಕ್ಕೆ ಹತ್ತಿರದಲ್ಲೇ ಈ ಜಾಗವಿದ್ದರೂ ಇಲ್ಲಿ ಮನೆ ಹೊಂದಿದವರು ಸಂಪರ್ಕ ರಸ್ತೆ ಇಲ್ಲದೆ ಪರದಾಡುಂತಾಗಿದೆ. ಜತೆಗೆ ಕೃಷಿ ಕಾರ್ಯಕ್ಕೂ ತೀವ್ರ ಅಡಚಣೆಯಾಗುತ್ತಿದ್ದು ತೊಂದರೆ ಅನುಭವಿಸುವಂತಾಗಿದೆ. ಇನ್ನು ಇಲ್ಲಿರುವ ಕಾಲುಸಂಕವೂ ಶಿಥಿಲವಾಗಿದ್ದು, ನೀರಿನ ಹರಿವು ತೀವ್ರವಾಗಿರುವಾಗ ದಾಟುವುದು ತೀವ್ರ ಅಪಾಯಕಾರಿಯಾಗಿದೆ. ಕುದ್ರುಬೈಲುಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಇಲ್ಲಿನ ಜನರು ದಶಕಗಳಿಂದ ಆಗ್ರಹಿಸುತ್ತಲೇ ಬಂದಿದ್ದಾರೆ.

ಹುಸಿಯಾದ ಭರವಸೆ !
ಗ್ರಾ.ಪಂ. ವ್ಯಾಪ್ತಿಯಲ್ಲಿ ಕುದ್ರುಬೈಲು ನೆರೆ ಪೀಡಿತ ಪ್ರದೇಶಗಳಲ್ಲಿ ಒಂದು. ವರ್ಷವೂ ಈ ಸಮಸ್ಯೆ ಮರುಕಳಿಸುತ್ತಲೇ ಇದೆ. ಆದರೆ ಪರಿಹಾರ ಸಿಕ್ಕಿಲ್ಲ. 2011ರಲ್ಲಿ ಉಡುಪಿ ಸಂಸದರಾಗಿದ್ದ  ಡಿ.ವಿ.ಸದಾನಂದ ಗೌಡರು ಇಲ್ಲಿಗೆ ಭೇಟಿ ನೀಡಿ ಕುದ್ರು ಸಂಪರ್ಕ ರಸ್ತೆ ಬಗ್ಗೆ ಭರವಸೆ ನೀಡಿದ್ದರು. ಆದರೆ ಅದು ಬರಿಯ ಮಾತಾಗಿ ಉಳಿದಿದೆ. ಜನರು ಸಂಪರ್ಕ ರಸ್ತೆ ಬಗ್ಗೆ ಇನ್ನೂ ಕಾಯುತ್ತಲೇ ಇದ್ದಾರೆ.

ಶಾಶ್ವತ ಪರಿಹಾರ ಕಲ್ಪಿಸಿ
ಕುದ್ರುಬೈಲು ಸಂಪರ್ಕ ರಸ್ತೆ ಇಲ್ಲದ್ದರಿಂದ ಶಿಥಿಲಗೊಂಡ ಕಾಲು ಸಂಕದ ಮೇಲೆ ಅಪಾಯದ ನಡುವೆ ಕೃಷಿಕರು ಹೊಳೆ ಸಾಲು ದಾಟಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣರ ಸಂಕಷ್ಟವನ್ನು ಅರಿತು ಇನ್ನಾದರೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ.
– ಶ್ರೀನಾಥ್‌ ಶೆಟ್ಟಿ  ಮೇಲ್ತಾರುಮನೆ, ತೆಕ್ಕಟ್ಟೆ  ಕೃಷಿಕರು

ತೀವ್ರ ನಿರ್ಲಕ್ಷ್ಯ
ಕಳೆದ ಹಲವು ವರ್ಷಗಳಿಂದಲೂ ಈ ಕುದ್ರುಬೈಲು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಳೆಗಾಲದಲ್ಲಿ ಇಲ್ಲಿ ಅಪಾಯದ ನಡುವೆ ಸಂಚರಿಸಬೇಕಾಗಿದೆ.  
– ನಾಗೇಶ್‌ ದೇವಾಡಿಗ, ಕುದ್ರುಮನೆ. ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next