Advertisement

ವಿಜಯನಗರಕ್ಕೆ ಕೂಡ್ಲಿಗಿ ಸೇರ್ಪಡೆ ಮಾಡಿ

03:38 PM Sep 25, 2019 | Naveen |

ಕೂಡ್ಲಿಗಿ: ವಿಶ್ವ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯಕ್ಕೂ ಹಾಗೂ ಕೂಡ್ಲಿಗಿ ತಾಲೂಕಿನ ಪಾಳೇಗಾರರಿಗೂ 13ನೇ ಶತಮಾನದಿಂದಲೂ ನಂಟಿದೆ ಹಾಗಾಗಿ ಕೂಡ್ಲಿಗಿ ವಿಜಯನಗರ ನೂತನ ಜಿಲ್ಲೆಗೆ ಸೇರ್ಪಡೆ ಮಾಡುವುದರ ಮೂಲಕ ಐತಿಹಾಸಿಕ ಪರಂಪರೆಯನ್ನು ಮುಂದುವರೆಸಿಕೊಂಡು ಬರಬೇಕೆಂದು ಬಳ್ಳಾರಿ ಜಿಲ್ಲಾ ರೈತ ಸಂಘದ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಜಿಲ್ಲಾ ಅಧ್ಯಕ್ಷ ದೇವರಮನಿ ಮಹೇಶ ಅವರು ಒತ್ತಾಯಿಸಿದರು.

Advertisement

ಅವರು ಸೋಮವಾರ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ಜೊತೆ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ್‌ ರಿಗೆ ಮನವಿಪತ್ರ ಸಲ್ಲಿಸಿದ ನಂತರ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ಮೇಲೆ ಯುದ್ಧಗಳಾದ ತಾಲೂಕಿನ ಜರ್ಮಲಿ ಪಾಳೆಗಾರರು, ವೀರನದುರ್ಗ ಪಾಳೇಗಾರರು, ಗುಡೇಕೋಟೆ ಪಾಳೇಗಾರರು ವಿಜಯನಗರ ಸಾಮ್ರಾಜ್ಯದ ಬೆಂಬಲಕ್ಕೆ ನಿಂತಿದ್ದರು. ಇಂದು ರಾಜಪರಂಪರೆ ಇಲ್ಲದಿದ್ದರೂ ಅವರ ಇತಿಹಾಸ ಇಂದಿಗೂ ಅಜರಾಮರವಾಗಿದೆ, ಜಿಲ್ಲಾ ಕೇಂದ್ರವಾಗುವ ಎಲ್ಲ ಅಗತ್ಯತೆಗಳು, ಸೌಲಭ್ಯಗಳು ಹೊಸಪೇಟೆಯಲ್ಲಿರುವುದರಿಂದ ವಿಜಯನಗರ ನೂತನ ಜಿಲ್ಲೆಯಾಗುವುದು ಸೂಕ್ತವಾಗಿದೆ.
ಪ್ರಸ್ತಾಪಿತ ವಿಜಯನಗರ ಜಿಲ್ಲೆ ರಚನೆಯಾದರೆ ಯಾವುದೇ ಕಾರಣಕ್ಕೆ ಕೂಡ್ಲಿಗಿ ಕೈಬಿಡುವಂತಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.

ಮಾನವ ಹಕ್ಕು ಹಾಗೂ ಗ್ರಾಹಕರ ಹಕ್ಕುಗಳ ತಾಲೂಕು ಅಧ್ಯಕ್ಷ ಜಿ. ಈಶಪ್ಪ ಮಾತನಾಡಿ, ಕೂಡ್ಲಿಗಿ ತಾಲೂಕು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕಾಗಿದ್ದು ನೂತನ ವಿಜಯನಗರ ಜಿಲ್ಲೆಗೆ ಸೇರಿದರೆ ಇಲ್ಲಿಯ ಯುವಕರಿಗೆ ಉದ್ಯೋಗ ಅರಸಿಹೋಗಲು ಅನುಕೂಲವಾಗುತ್ತದೆ. ಈಗಾಗಲೇ ಹಂಪಿ ಕನ್ನಡ ವಿಶ್ವವಿದ್ಯಾಲಯ, ತುಂಗಭದ್ರಾ ಜಲಾಶಯ, ವಿಶ್ವ ಪ್ರಸಿದ್ಧ ಹಂಪಿ, ಸಹಾಯಕ ಆಯುಕ್ತರ ಕಚೇರಿ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸೇವೆ ಇರುವುದರಿಂದ ಎಲ್ಲ ರೀತಿಯಿಂದಲೂ ಹೊಸಪೇಟೆ ಜಿಲ್ಲಾ ಕೇಂದ್ರವಾಗಲು ಆರ್ಹತೆ ಇದೆ. ಹಾಗಾಗಿ ಕೂಡ್ಲಿಗಿ ತಾಲೂಕನ್ನು ವಿಜಯನಗರಕ್ಕೆ ಸೇರಿಸಿದರೆ ಹಿಂದುಳಿದ ತಾಲೂಕು ಅಭಿವೃದ್ಧಿಯಾಗಲು ಸಾಧ್ಯ ಎಂದು ತಿಳಿಸಿದರು.

ನಂತರ ತಹಶೀಲ್ದಾರರಿಗೆ ಮನವಿಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತ ಸಂಘಟನೆಗಳ ಮುಖಂಡರಾದ ಕೆ. ಶಿವಕುಮಾರ, ಎನ್‌.ಪಕ್ಕೀರಪ್ಪ, ವೀರಭದ್ರಪ್ಪ, ಎಚ್‌. ನಿಂಗಪ್ಪ, ಎಚ್‌. ಪಾಲಯ್ಯ, ಜೆ.ನಾಗರಾಜ, ಅಜ್ಜಪ್ಪ, ಎಂ. ಷಣ್ಮುಖಪ್ಪ ಸೇರಿದಂತೆ ಹಲವಾರು ರೈತ ಸಂಘಗಳ ಕಾರ್ಯಕರ್ತರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next