ಕದ್ರಿ: ಕರಾವಳಿ ಚಿತ್ರಕಲಾ ಚಾವಡಿ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಕದ್ರಿ ಪಾರ್ಕ್‌ನಲ್ಲಿ ಎರಡು ದಿನಗಳ ಕಾಲ ಜರಗಿದ ಬೃಹತ್ ಕಲಾ ಪ್ರದರ್ಶನ ‘ಕುಡ್ಲ ಕಲಾಮೇಳ’ವು ರವಿವಾರ ಸಂಪನ್ನಗೊಂಡಿತು. ರಾಜ್ಯದ ಮೂಲೆ ಮೂಲೆಯ ಕಲಾವಿದರು ಕದ್ರಿ ಪಾರ್ಕ್‌ನಲ್ಲಿ ಸಮ್ಮಿಲನಗೊಳ್ಳುವ ಮೂಲಕ ಕಲಾಲೋಕ ಅನಾವರಣಗೊಂಡಿತು. ರಜಾದಿನವೂ ಆಗಿದ್ದರಿಂದ ರವಿವಾರ ಆಸಕ್ತರು ಸಾಗರೋಪಾದಿಯಾಗಿ ನೆರೆದಿದ್ದರು. ಮಕ್ಕಳು, ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿದ್ದು, ಕಲಾ ಮೇಳದ ಸೊಬಗನ್ನು ಕಣ್ತುಂಬಿಕೊಂಡರು. ಸುಮಾರು 150ಕ್ಕೂ ಅಧಿಕ ಸ್ಟಾಲ್‌ಗಳಲ್ಲಿ ರಾಜ್ಯದ 200ಕ್ಕೂ ಅಧಿಕ ಕಲಾವಿದರು ಭಾಗವಹಿಸಿದ್ದರು. ಸಾವಿರಾರು ರೂ. ಮೌಲ್ಯದ ತರಹೇವಾರಿ ಚಿತ್ರಗಳು ಕಲಾಲೋಕದ ಚಿತ್ತಾರವನ್ನೇ ನಡೆಸಿದವು. ಕಲಾಪ್ರಿಯರು, ಕುತೂಹಲಿಗಳ ದಂಡೇ ಕದ್ರಿ ಪಾರ್ಕಿನಲ್ಲಿ ನೆರೆದಿದ್ದು, ಜನಜಾತ್ರೆಯಾಗಿ ಕಂಡುಬಂತು. ಕಲಾವಿದರ ಕುಂಚದ ಕಲಾತ್ಮಕತೆಯನ್ನು ವೀಕ್ಷಿಸಿದ ಬಹುತೇಕ ಜನರೂ ಆಶ್ಚರ್ಯದಿಂದ ಅಬ್ಬಬ್ಟಾ ಎನ್ನುತ್ತಿದ್ದುದು ಕಂಡು ಬರುತ್ತಿದ್ದವು. ಮಕ್ಕಳಂತೂ ಪ್ರತಿಯೊಂದು ಸ್ಟಾಲ್‌ಗಳಿಗೂ ತೆರಳಿ ಚಿತ್ರಗಳನ್ನು ವೀಕ್ಷಿಸುತ್ತಿದ್ದುದು ಕಂಡುಬಂತು.
ಮಾರಾಟ
ಬಹುತೇಕ ಜನರು ಕಲಾವಿದರ ಕಲಾ ಚಾತುರ್ಯವನ್ನು ಕೊಂಡಾಡಿದರೆ, ಬಹುತೇಕ ಜನರು ಚಿತ್ರಗಳನ್ನು ಹಣ ಕೊಟ್ಟುಕೊಳ್ಳುವ ಮೂಲಕ ಪ್ರೋತ್ಸಾಹಿಸಿದರು. ಅಗ್ಗದ ಮತ್ತು ದುಬಾರಿ ಬೆಲೆಯ ಕೃತಿಗಳು, ಚಿತ್ರಗಳು ಇಲ್ಲಿ ಮಾರಾಟವಾಗಿದ್ದು, ಕಲಾವಿದರು ಕೂಡ ಸಂತಸಗೊಂಡರು. ಜತೆಗೆ ಸೇರಿದ ಜನಸ್ತೋಮ ಕಂಡು ಅವರಲ್ಲಿ ಕೃತಾರ್ಥ ಭಾವ ಕಂಡುಬಂತು.