Advertisement

ಕುಡ್ಲ ಎಕ್ಸ್‌ಪ್ರೆಸ್‌: ಜನಪ್ರಿಯಗೊಳಿಸಿಲು ಕೈಜೋಡಿಸೋಣ

05:05 PM Apr 17, 2017 | Karthik A |

ಮಹಾನಗರ: ತುಳುನಾಡಿನ ಜನರ ಹಲವು ವರ್ಷದ ಬೇಡಿಕೆಯ ಫಲವಾಗಿ ಎ.9ರಂದು ಚಾಲನೆಗೊಂಡ ಕುಡ್ಲ ಎಕ್ಸ್‌ಪ್ರೆಸ್‌ ತನ್ನ ಸಂಚಾರ ಪ್ರಾರಂಭಿಸಿದೆ. ಈ ರೈಲಿನ ಸಾಕ್ಷಾತ್‌ ಅನುಭವ ಪಡೆಯಲು ಉದಯವಾಣಿ ಪುತ್ತೂರಿನವರೆಗೆ ಪ್ರಯಾಣಿಸಿತು. ಆಗ ಸಿಕ್ಕ ಅನುಭವ ಮತ್ತು ಪ್ರಯಾಣಿಕರ ನಿರೀಕ್ಷೆಗಳನ್ನೆಲ್ಲಾ ಪತ್ರಿಕೆಯ ವರದಿಗಾರರು ಇಲ್ಲಿ ತೆರೆದಿಟ್ಟಿದ್ದಾರೆ.

Advertisement

ಇನ್ನು ಪ್ರಯಾಣ ಆರಂಭ
ಬುಧವಾರ ನಾನು (ಭರತ್‌) ಮತ್ತು ನಮ್ಮ ಛಾಯಾಗ್ರಾಹಕ ಸತೀಶ್‌ ಇರಾ ಅವರು ಕಂಕನಾಡಿಯ ರೈಲು ನಿಲ್ದಾಣಕ್ಕೆ ಬಂದೆವು. ಟಿಕೆಟ್‌ ಕೌಂಟರ್‌ ಉದ್ದಕ್ಕೆ ಪ್ರಯಾಣಿಕರು ಸಾಲುಗಟ್ಟಿದ್ದರು. ನನ್ನ ಸರದಿ ಬಂದಾಗ ‘ಕುಡ್ಲ ಎಕ್ಸ್‌ಪ್ರೆಸ್‌..ಪುತ್ತೂರು 2’ ಎಂದು ಹೇಳಿ ಟಿಕೆಟ್‌ಪಡೆದು ರೈಲು ಬಳಿ ತಲುಪಿದೆವು. ಇನ್ನೇನು ಬೆಂಗಳೂರಿಗೆ ಹೊರಡಲು ಅಣಿಯಾಗುತ್ತಿದ್ದ ಕುಡ್ಲ ಎಕ್ಸ್‌ಪ್ರೆಸ್‌ನ ಸಾಮಾನ್ಯ ಬೋಗಿಗೆ ಹೋದೆವು. ಅಲ್ಲಿ ಮಂದಹಾಸ ಬೀರುತ್ತಾ ನಿಂತಿದ್ದರು ಪ್ರಯಾಣಿಕರಾದ ಸುರತ್ಕಲ್‌ನ ರಾಮಮೂರ್ತಿ. 

ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಅವರಲ್ಲಿ ಮಾತಿಗೆ ತೊಡಗಿದೆವು. ಯಕ್ಷಗಾನ ಪ್ರಿಯರಾದ ಅವರು ತಾನೂ ಉದಯವಾಣಿ ಓದುಗ ಎನ್ನುತ್ತಾ, ಪತ್ರಿಕೆಯಲ್ಲಿ ಪ್ರಕಟಗೊಳ್ಳುವ‌ ಯಕ್ಷಗಾನ ಮೇಳಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ನಾವು ಮತ್ತೂಬ್ಬ ಪ್ರಯಾಣಿಕರಾದ ಮಾಲಿನಿ ಅವರಲ್ಲಿ ಈ ರೈಲಿನ ಅನುಕೂಲತೆ, ವೇಳಾ ಪಟ್ಟಿ ಹೊಂದಾಣಿಕೆ ಇತ್ಯಾದಿ ಸಂಗತಿ ಕುರಿತು ಕೇಳಿದೆವು. ಅಷ್ಟೊತ್ತಿಗೆ ಸಮಯ ಬೆಳಗ್ಗೆ 11.30. ರೈಲು ಸೈರನ್‌ ಮೊಳಗಿಸುತ್ತಾ ಹೊರಟಿತು. ನಾವು ಆರಾಮವಾಗಿ ಒಂದು ಸೀಟ್‌ನಲ್ಲಿ ಹೋಗಿ ಕುಳಿತೆವು. ನಮ್ಮ ಬೋಗಿಯ ಬಹುತೇಕ ಸೀಟುಗಳು ಖಾಲಿಯಾಗಿದ್ದವು. ರೈಲು ಇನ್ನೇನು ಬಜಾಲ್‌ ದಾಟುತ್ತಿದ್ದಂತೆ ಮುಂದಿನ ಕೋಚ್‌ಗಳತ್ತ ಹೆಜ್ಜೆ ಹಾಕಿದೆವು. ಪ್ರತಿ ಬೋಗಿಯಲ್ಲೂ ನಿರೀಕ್ಷಿಸಿದಷ್ಟು ಪ್ರಯಾಣಿಕರಲಿಲ್ಲ. ಒಂದು ಕೋಚ್‌ನಲ್ಲಿ ಮೂರು ಜನರಿದ್ದರೆ, ಮತ್ತೆರಡು ಕೋಚ್‌ ಪೂರ್ತಿ ಖಾಲಿ. ಒಟ್ಟಾರೆ ಈ ರೈಲಿನಲ್ಲಿ ಎಂಟು ಸಾಮಾನ್ಯ ದರ್ಜೆಯ ಕೋಚ್‌ಗಳಿದ್ದವು. ಉಳಿದಂತೆ ನಾಲ್ಕು ರಿಸರ್ವ್‌ಡ್‌ ಕೋಚ್‌ಗಳಿದ್ದು, ಅವುಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಿರಲಿಲ್ಲ. ಈ ರೈಲಿನಲ್ಲಿ ಯಾವುದೇ ಎಸಿ ಕೋಚ್‌ಗಳಿರಲಿಲ್ಲ. ಇನ್ನು ಲಗೇಜ್‌ಗಳಿಗಾಗಿ ಎರಡು ಎಸ್‌ಎಲ್‌ಆರ್‌ ಕೋಚ್‌ಗಳನ್ನು ಅಳವಡಿಸಲಾಗಿತ್ತು.

ಹೆಚ್ಚಿದ ವೇಗ
ರೈಲು ತನ್ನ ವೇಗವನ್ನು ಹೆಚ್ಚಿಸುತ್ತಾ ಸುಂದರ ಹೊಲ-ಗದ್ದೆಗಳ ಮಧ್ಯೆ ಹಾದುಹೋಗುವ ದೃಶ್ಯ ಮನೋಹರ. ಅತ್ತ ಕೆಲವು ಪ್ರಯಾಣಿಕರು  ಮೊಬೈಲ್‌ಗ‌ಳಲ್ಲಿ ಪ್ರಾಕೃತಿಕ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು. ಇತ್ತ ನಮ್ಮ ಛಾಯಾಗ್ರಾಹಕ ಸಹ ಕೆಮರಾಕ್ಕೆ ಕೆಲಸ ಕೊಟ್ಟರು. ಅಷ್ಟೊತ್ತಿಗೆ ರೈಲು ಹೊರಟು ಅರ್ಧ ತಾಸು ಕಳೆದದ್ದೇ ಗೊತ್ತಾಗಿಲ್ಲ. ಮಧ್ಯಾಹ್ನ 12.04 ಕ್ಕೆ ಬಂಟ್ವಾಳ ನಿಲ್ದಾಣ ಬಂದಿತು. ಅಲ್ಲಿಂದ ಬೆಂಗಳೂರಿಗೆ ಪ್ರಯಾಣಿಸಲು ರೈಲು ಹತ್ತಿದ ಮೋನಪ್ಪ ಮುಡಿಪು ಅವರನ್ನು ಮಾತನಾಡಿಸುತ್ತಾ ಚಾ ಹಾಗೂ ಮೆಣಸು ಬೋಂಡಾ ತಿಂದೆವು. ಅವರು ಬೆಂಗಳೂರಿಗೆ ಪ್ರವಾಸಕ್ಕೆಂದು ಹೊರಟಿದ್ದರು. ಪ್ರಯಾಣಿಕರಾದ ಚಂದ್ರಶೇಖರ್‌ ನಾಯ್ಕ, ಬಸವರಾಜ್‌ ಹಾಗೂ ತಿಂಡಿ ಮಾರಾಟಗಾರ ಹಾಸನದ ಯೋಗೇಶ್‌ ಅವರೂ ಮಾತಿಗೆ ಸಿಕ್ಕರು. 

ಸದ್ಯ ಕುಡ್ಲ ಎಕ್ಸ್‌ಪ್ರೆಸ್‌ ರೈಲು ನಂ. 16576 ಬೆಳಗ್ಗೆ 11.30ಕ್ಕೆ ಕಂಕನಾಡಿ ಜಂಕ್ಷನ್‌ನಿಂದ ಹೊರಡುತ್ತಿದ್ದು, ಯಶವಂತಪುರಕ್ಕೆ ರಾತ್ರಿ 8.30ಕ್ಕೆ ತಲುಪುತ್ತದೆ. ಆದರೆ, ಈ ಸಮಯ ಪ್ರಯಾಣಿಕರಿಗೆ ಅನುಕೂಲವಲ್ಲ. ಬದಲಿಗೆ ಬೆಳಗ್ಗೆ 8-9 ಅಥವಾ 10 ಗಂಟೆಗೆ ಹೊರಟರೆ ಬೆಂಗಳೂರಿಗೆ ಸ್ವಲ್ಪ ಬೇಗ ತಲುಪಬಹುದು. ಇದರಿಂದ ರೈಲು ಇಳಿದು ದೂರದ ಬಡಾವಣೆಗಳಿಗೆ ರಾತ್ರಿಯೊಳಗೆ ತಲುಪಬಹುದು. ಈ ರೈಲು ಮಂಗಳೂರಿನಿಂದ ತಡವಾಗಿ ಹೊರಟಷ್ಟು ಬೆಂಗಳೂರಿನಿಂದ ಬೇರೆಡೆಗೆ ತಲುಪಲು ಕಷ್ಟವಾಗುತ್ತದೆ ಎಂಬುದು ಅವರ ಅಭಿಪ್ರಾಯ.

Advertisement

ಜತೆಗೆ ಈ ರೈಲು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಿಂದ ಹೊರಟು ಬೆಂಗಳೂರಿನ ಮೆಜೆಸ್ಟಿಕ್‌ತನಕ ಸಂಚರಿಸಿದರೆ ಇನ್ನೂ ಉತ್ತಮವಾಗುತ್ತಿತ್ತು. ಏಕೆಂದರೆ, ಪ್ರಸ್ತುತ ಕುಡ್ಲ ಎಕ್ಸ್‌ಪ್ರೆಸ್‌ ಯಶವಂತಪುರದಲ್ಲಿ ನಿಲ್ಲುತ್ತಿದ್ದು, ಪ್ರಯಾಣಿಕರು ಅಲ್ಲಿಂದ ಮತ್ತೆ ಮೆಜೆಸ್ಟಿಕ್‌ನತ್ತ ಬಸ್‌ನಲ್ಲಿ ಸಾಗಬೇಕು. ಇದು ಎರಡೆರಡು ಕೆಲಸ ಮಾಡಿದಂತೆ. ಆದ್ದರಿಂದ, ಸೆಂಟ್ರಲ್‌ನಿಂದ ಸೆಂಟ್ರಲ್‌ಗೆ ಓಡಿಸಬೇಕು ಎಂಬುದು ಹಲವರ ಬೇಡಿಕೆ.

ಕುಡ್ಲ ಎಕ್ಸ್‌ಪ್ರೆಸ್‌ನಲ್ಲಿ ಯುವಜನತೆಗಿಂತ ಹೆಚ್ಚಾಗಿ ಮಧ್ಯವಯಸ್ಕರು ಕಂಡು ಬಂದರು. ಇವರೊಂದಿಗೆ ನೂತನ ಮದುಮಕ್ಕಳು, ತಾಯಿ-ಮಕ್ಕಳು, ಅಜ್ಜನಿಂದ ಹಿಡಿದು ಮೊಮ್ಮಕ್ಕಳವರೆಗೆ ಎಲ್ಲ ವಯೋಮಾನದವರಿದ್ದರು. ಕೆಲವರು ಬೆಂಗಳೂರು ತಿರುಗಾಡಿ ಬರಲು ಹೊರಟಿದ್ದರೆ, ಇನ್ನೂ ಕೆಲವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ತಮ್ಮ ಮಕ್ಕಳ ಯೋಗಕ್ಷೇಮ ವಿಚಾರಿಸಲು ಹೊರಟಿದ್ದರು. ಇನ್ನೂ ಕೆಲವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದರು. ಇವರನ್ನೆಲ್ಲ ಮಾತನಾಡಿಸುವಷ್ಟರಲ್ಲಿ ಪುತ್ತೂರಿನ ಕಬಕ ರೈಲು ನಿಲ್ದಾಣ ತಲುಪಿತು. ಅಷ್ಟೊತ್ತಿಗೆ ನಾವೂ ಕುಡ್ಲ ಎಕ್ಸ್‌ಪ್ರೆಸ್‌ನ ಮೊದಲ ಪ್ರಯಾಣದ ಅನುಭವ ಪಡೆದು ಕಬಕದಲ್ಲಿ ಇಳಿದು ಕಚೇರಿಗೆ ವಾಪಸಾದೆವು. 

ಕುಡ್ಲ ಎಕ್ಸ್‌ಪ್ರೆಸ್‌ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಾತ್ರ ಹೊರಡುವ ಬದಲು ರವಿವಾರವೂ ಬೆಂಗಳೂರಿಗೆ ಹೊರಡಬೇಕು. ಯುವಜನರು ತಮ್ಮ ಊರುಗಳಿಗೆ ಬಂದು ಬೆಂಗಳೂರಿಗೆ ಹೋಗುವುದು ರವಿವಾರವೇ. ಅವರಿಗೆ ಹೆಚಚು ಅನುಕೂಲವಾಗುತ್ತದೆ. ಶನಿವಾರ ಹಾಗೂ ರವಿವಾರ ಬಸ್‌ನವರು ಹೆಚ್ಚು ಚಾರ್ಜ್‌ ಮಾಡುತ್ತಾರೆ. ಅಲ್ಲದೇ, ರಾತ್ರಿ ವೇಳೆಯೂ ರೈಲು ಹೊರಡುವಂತಿದ್ದರೆ ಉತ್ತಮ.


– ಮಾಲಿನಿ, ಸುರತ್ಕಲ್‌, ಪ್ರಯಾಣಿಕರು

ಈ ರೈಲಿನ ಬಗ್ಗೆ ಜನರಿಗೆ ಇನ್ನೂ ಪರಿಚಯವಾಗಬೇಕಷ್ಟೇ. ರೈಲಿನ ಸಮಯವನ್ನು 8.30 ಅಥವಾ 10.30ಗೆ ಹೊರಡುವಂತಿದ್ದರೆ ಬೆಂಗಳೂರು ತಲುಪುವವರಿಗೆ ಸಹಾಯವಾಗುತ್ತದೆ. ರಾತ್ರಿ ವೇಳೆಯೂ ಈ ರೈಲು ಸೌಲಭ್ಯವಿರಬೇಕು. ರಾತ್ರಿ 9 ಗಂಟೆಗೆ ಲಭ್ಯವಿದ್ದರೆ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ ಬೆಂಗಳೂರಿಗೆ ಬೇಗ ತಲುಪಬಹುದು. ಆದರೆ, ರಾತ್ರಿ ಪ್ರಯಾಣಕ್ಕೆ ಜನರಲ್‌ ಕೋಚ್‌ನಲ್ಲಿ ಸೀಟುಗಳು ಆರಾಮದಾಯಕವಿಲ್ಲ.


– ಚಂದ್ರಶೇಖರ್‌ ನಾಯ್ಕ, ಬೆಂಗಳೂರು ಪ್ರಯಾಣಿಕ

ಬೆಳಗ್ಗೆ 8 ಗಂಟೆಗೆ ಹೊರಡಲಿ
ಈ ರೈಲು ಜನರಿಗೆ ಅಗತ್ಯವಿತ್ತು. ಹಾಸನ- ಕುಣಿಗಲ್‌ ಮಾರ್ಗವಾಗಿ ಹೋಗುತ್ತಿರುವುದೂ ಉತ್ತಮ ನಿರ್ಧಾರ. ಆದರೆ, ಪ್ರಸ್ತುತ ಬೆಳಗ್ಗೆ 11.30ಕ್ಕೆ ಹೊರಟು ರಾತ್ರಿ 8.30ಕ್ಕೆ ಬೆಂಗಳೂರಿಗೆ ತಲುಪುತ್ತದೆ. ಈ ಸಮಯ ಬದಲಿಸಿ ಬೆಳಗ್ಗೆ 8 ಅಥವಾ 9 ಗಂಟೆಗೆ ರೈಲು ಹೊರಡುವಂತಿದ್ದರೆ ಹೆಚ್ಚು ಅನುಕೂಲ. ಇದನ್ನು ಸೆಂಟ್ರಲ್‌ ನಿಲ್ದಾಣದವರೆಗೆ ವಿಸ್ತರಿಸಬೇಕು. ಕಂಕನಾಡಿಯವರೆಗೆ ರಿಕ್ಷಾದಲ್ಲಿ 130 ರೂ. ಕೇಳುತ್ತಾರೆ. ಈ ರೈಲು ಕುಂದಾಪುರದವರೆಗೆ ವಿಸ್ತರಿಸಿದರೆ ಕೊಲ್ಲೂರಿಗೆ ಹೋಗುವವರಿಗೂ ಅನುಕೂಲ.  


– ರಾಮಮೂರ್ತಿ, ಸುರತ್ಕಲ್‌, ಪ್ರಯಾಣಿಕರು 

ಸೆಂಟ್ರಲ್‌ ನಿಲ್ದಾಣಕ್ಕೆ ಬರಲಿ
ಕುಡ್ಲ ಎಕ್ಸ್‌ಪ್ರೆಸ್‌ ರೈಲು ಆದದ್ದು ಒಳ್ಳೆಯದು. ಆದರೆ, ಈ ರೈಲು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಹೋಗುತ್ತದೆ. ಆದರೆ, ಇದು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಬೆಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ಹೋದರೆ ಅನುಕೂಲ. ಪ್ರಯಾಣಿಕರು ಯಶವಂತಪುರದಲ್ಲಿ ಇಳಿದು ಪುನಃ ತಮ್ಮ ಬಸ್‌ಗಳಿಗಾಗಿ ಮೆಜೆಸ್ಟಿಕ್‌ನತ್ತ ಸಾಗಬೇಕು. ಒಂದು ವೇಳೆ ಮೆಜೆಸ್ಟಿಕ್‌ನಲ್ಲೇ ನಿಲ್ಲುತ್ತಿದ್ದರೆ ಅಲ್ಲಿಂದಲೇ ಬಸ್‌ ಹಿಡಿದು ತಮಗೆ ಬೇಕಾದ ಸ್ಥಳಕ್ಕೆ ಪ್ರಯಾಣ ಬೆಳೆಸಬಹುದು.


– ಮೋನಪ್ಪ ಮುಡಿಪು, ಬಿಎಸ್‌ಎನ್‌ಎಲ್‌ ನಿವೃತ್ತ ಸಿಬಂದಿ,  

 
ಚೆನ್ನೈವರೆಗೆ ವಿಸ್ತರಿಸಲಿ
ಹೊಸದಾಗಿ ಪ್ರಾರಂಭವಾಗಿರುವ ಈ ರೈಲು ನಷ್ಟದಲ್ಲಿ ಸಾಗದಂತೆ ಇದನ್ನು ಬೆಂಗಳೂರಿನಿಂದ ಚೆನ್ನೈವರೆಗೆ ವಿಸ್ತರಿಸಬೇಕು. ಆಗ, ನಷ್ಟ ಹಿಡಿತಕ್ಕೆ ಬರುತ್ತದೆ. ಸಂಜೆ ಪುನಃ 6,8 ಅಥವಾ 10 ಗಂಟೆಗೆ ಬೆಂಗಳೂರಿಗೆ ಹೊರಡುವಂತಿರಬೇಕು ಹಾಗೂ ಬೆಳಗ್ಗೆ 6 ಗಂಟೆಗೆ ತಲುಪುವಂತಿರಬೇಕು. ಜನರು ಕಂಫರ್ಟ್‌ ಕೇಳುವುದರಿಂದ ಸೆಂಟ್ರಲ್‌ನಿಂದ ಹೊರಡುವಂತಿದ್ದರೆ ಉತ್ತಮವಾಗಿತ್ತು. ಪ್ರಸ್ತುತ ರೈಲು ಹಾಸನ ಕುಣಿಗಲ್‌ ರಸ್ತೆಯಲ್ಲಿ ದಾರಿಯಾಗಿ ಹೋಗುತ್ತಿರುವುದು ಉತ್ತಮ ವಿಚಾರ. ಇದು ಟಿ.ಎ.ಪೈ ಅವರು ಇದ್ದಾಗಲೇ ಆಗಬೇಕಿತ್ತು. ಕುಡ್ಲ ಎಕ್ಸ್‌ಪ್ರೆಸ್‌ ರೈಲನ್ನು ಪ್ರವಾಸೋದ್ಯಮಕ್ಕೂ ಬಳಸಬಹುದು. ಕೇರಳ ಹಾಗೂ ಮಧ್ಯಪ್ರದೇಶದಲ್ಲಿ ಉತ್ತಮವಾಗಿ ಬಳಸುತ್ತಿದ್ದಾರೆ. ಆದರೆ, ನಮ್ಮಲ್ಲಿ ಆಗುತ್ತಿಲ್ಲ.


– ಬಸವರಾಜ್‌, ಮೈಸೂರು ಪ್ರಯಾಣಿಕ   

ಬೆಳಗ್ಗೆ ಬೇಗ ಹೊರಡಲಿ
ರೈಲು ಬೇಗ ಹೊರಡುವಂತಿದ್ದರೆ ಪುತ್ತೂರು ಕಡೆಗೆ ಕೆಲಸಕ್ಕೆ ಬರುವವರು ಹೆಚ್ಚಾಗುತ್ತಾರೆ. ಇಲ್ಲವಾದರೆ ಬಸ್‌ಗಳನ್ನೇ ಅವಲಂಬಿಸುತ್ತಾರೆ. ಬೆಳಗ್ಗೆ ಬೇಗ ಹೊರಟಲ್ಲಿ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ನಮಗೂ ಸಹಾಯಕವಾಗುತ್ತಿತ್ತು.


– ದೇವಪ್ಪ, ಪುತ್ತೂರು, ರೈಲು ನಿಲ್ದಾಣದ ಬಳಿಯ ರಿಕ್ಷಾ ಚಾಲಕ.

– ಭರತ್‌ರಾಜ್‌ ಕಲ್ಲಡ್ಕ/ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next