Advertisement

ವಸತಿ ಫಲಾನುಭವಿಗಳಿಗೆ ಖೂಬಾ ದ್ರೋಹ: ಗೀತಾ

02:52 PM Aug 09, 2020 | Suhan S |

ಬೀದರ: ಜನರಿಂದ ಆಯ್ಕೆಯಾಗಿ ಜನರಿಗೆ ಅದರಲ್ಲೂ ಕಡು ಬಡವರಿಗೆ ದೊಡ್ಡ ದ್ರೋಹ ಮಾಡುತ್ತಿರುವ ಸಂಸದ ಭಗವಂತ ಖೂಬಾ ತೊಟ್ಟಿಲನ್ನು ತೂಗಿ ಮಗುವನ್ನು ಚಿವುಟುವ ಕಾರ್ಯವನ್ನೂ ಮಾಡುತ್ತಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಆರೋಪಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಖುದ್ದು ತಾವೇ ಭಾಲ್ಕಿ ವಸತಿ ಯೋಜನೆ ವಿರುದ್ಧ ಸುಳ್ಳು ಆರೋಪ ಮಾಡಿ, ಅರ್ಹ ಫಲಾನುಭವಿಗಳಿಗೆ ಹಣ ದೊರಕುವುದನ್ನು ವಿಳಂಬ ಮಾಡಿಸಿ, ಈಗ ಪಿಡಿಒಗಳ ಮೇಲೆ ಕ್ರಮದ ಬೆದರಿಕೆ ಹಾಕುತ್ತಿರುವುದು ಖಂಡನೀಯ. ಭಾಲ್ಕಿ ತಾಲೂಕಿನ ವಸತಿ ಯೋಜನೆ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ವಿಳಂಬವಾಗಲು, ಸ್ಥಗಿತವಾಗಲು ಸಂಸದ ಖೂಬಾ ಅವರೇ ಕಾರಣ ಎಂದು ಆಪಾದಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಈಶ್ವರ ಖಂಡ್ರೆ ಅವರು ಹಿಂದಿನ ಸರ್ಕಾರದಲ್ಲಿ ಬಡ ವಸತಿ ರಹಿತರಿಗಾಗಿ ಸಾವಿರಾರು ಮನೆ ಮಂಜೂರುಮಾಡಿಸಿದ್ದರು. ಗುಡಿಸಲು ಮುಕ್ತ ತಾಲೂಕು ಮಾಡುವ ಸಂಕಲ್ಪ ಹೊಂದಿದ್ದರು. ಇದು ಸಾಕಾರವಾದರೆ ಖಂಡ್ರೆ ಅವರಿಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಹೊಟ್ಟೆ ಕಿಚ್ಚಿನಿಂದ ಸಂಸದ ಖೂಬಾ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅನಗತ್ಯವಾಗಿ ಭಾಲ್ಕಿ ವಸತಿ ಯೋಜನೆಯಲ್ಲಿ ಸುಳ್ಳು ಆರೋಪ ಮಾಡಿ, ತಾವೇ ಸರ್ಕಾರದಿಂದ ತನಿಖೆಗೆ ಅರ್ಹರಲ್ಲದ ಅಧಿಕಾರಿಗಳನ್ನು ಕಳುಹಿಸಿ, ಅಕ್ರಮ ನಡೆದಿದೆ ಎಂದು ವದಂತಿ ಸೃಷ್ಟಿಸಿ ಅರ್ಹ ಬಡ ಫಲಾನುಭವಿಗಳಿಗೆ ಎರಡು ವರ್ಷದಿಂದಲೂ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ.

ಈಗ ಪಿಡಿಒಗಳಿಗೆ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡುತ್ತಿರುವ ಖೂಬಾ, ಅನಗತ್ಯವಾಗಿ ಬಡವರು, ಫಲಾನುಭವಿಗಳು ಮತ್ತು ಪಂಚಾಯತಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಈಗ ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದೆ. ದ್ವೇಷದ ರಾಜಕೀಯ ಮಾಡುತ್ತಿರುವ ಖೂಬಾ ದ್ವೇಷ ರಾಜಕಾರಣದ ಮಾತನಾಡುತ್ತಾರೆ. ಶಾಸಕ ಖಂಡ್ರೆ ಅವರ ಮೇಲೆ ಸುಳ್ಳು ಆರೋಪ ಮಾಡುವುದರಲ್ಲೇ ಕಾಲಹರಣ ಮಾಡುವುದನ್ನು ಬಿಟ್ಟು ಖೂಬಾ ಜನಸೇವೆ ಮಾಡಲಿ ಎಂದು ಸಲಹೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next