Advertisement

Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!

03:15 PM Mar 27, 2024 | Team Udayavani |

ಹುಳಿಯಾರು: ಮಳೆ ಕೈ ಕೊಟ್ಟಾಗ ಮಳೆಗಾಗಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವುದು ಸಾಮಾನ್ಯ. ಆದರೆ, ಹುಳಿಯಾರು ಹೋಬಳಿ ಲಿಂಗಪ್ಪನಪಾಳ್ಯದಲ್ಲಿ ಸೋಮವಾರ ರಾತ್ರಿ ಮಕ್ಕಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಂದಹಾಗೆ ಹುಡುಗ-ಹುಡುಗಿ ಮದುವೆ ಮಾಡಲಿಲ್ಲ. ಹುಡುಗನಿಗೆ ಹುಡುಗಿ ವೇಷ ಹಾಕಿಸಿ ಅಣುಕು ಮದುವೆ ಮಾಡಿ ಸಂಭ್ರಮಿಸಿದರು.

Advertisement

ಮಕ್ಕಳ ಮದುವೆ ಮಾಡಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆಯಿಂದ ಅನೇಕ ವರ್ಷಗಳಿಂದ ಹಳ್ಳಿಗಳಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇದಕ್ಕಾಗಿ 9 ದಿನಗಳಿಂದ ನವಧಾನ್ಯಗಳನ್ನು ಮೊಳಕೆ ಬರಿಸಿ ಮದುವೆ ದಿನ ಅರಣೆ ಶಾಸ್ತ್ರ ಮಾಡಲಾಯಿತು. ಗ್ರಾಮದ ನಿರಂಜನ್‌ ಎಂಬ ಬಾಲಕನಿಗೆ ಕಚ್ಚೆ ಪಂಚೆ, ಪೇಟ, ಬಾಸಿಂಗ ಹಾಕಿ ಮಧು ಮಗನಾಗಿಯೂ, ದೀಕ್ಷಿತ್‌ ಎಂಬ ಬಾಲಕನಿಗೆ ಸೀರೆ ಕುಪ್ಪಸ, ಬಳೆ, ಒಡವೆ ತೊಡಿಸಿ ಶೃಂಗರಿಸಿ ಮಧು ಮಗಳಾಗಿಯೂ ಮಾಡಿ ವಿವಿಧ ವಿವಾಹ ಶಾಸ್ತ್ರ ನೆರವೇರಿಸಲಾಯಿತು. ನಂತರ ಬ್ಯಾಂಡ್‌ಸೆಟ್‌ನೊಂದಿಗೆ ಊರು ತುಂಬ ಮೆರವಣಿಗೆ ನಡೆಸಿದರು.

ಇಬ್ಬರೂ ಬಾಲಕರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಆರತಕ್ಷತೆ ಮಾಡಿದರು. ಗ್ರಾಮದ ಮಹಿಳೆಯರು ಆರತಿ ಎತ್ತಿ ಶುಭ ಹಾರೈಸಿದರು. ಕೆಲವರು ಹಣ ಮುಯ್ಯಿ ಮಾಡಿ ವರದಿಂದ ವಧುವಿನ ಹೆಸರು, ವಧುವಿನಿಂದ ವರನ ಹೆಸರು ಕೇಳಿ ಖುಷಿ ಪಟ್ಟರು. ಅಜ್ಜಿಯಂದಿರು ಸೋಬಾನೆ ಪದ ಹಾಡಿದರೆ, ಹುಡುಗಿ ಯರು ಡ್ಯಾನ್ಸ್‌ ಮಾಡಿ ಮದುವೆಯ ಕಳೆ ಹೆಚ್ಚಿಸಿದರು.

ರಾತ್ರಿ 8ಕ್ಕೆ ಆರಂಭವಾದ ಮದುವೆ ಶಾಸ್ತ್ರ ಮಧ್ಯರಾತ್ರಿವರೆಗೆ ನಡೆಯಿತು. ಮದುವೆಗೆ ಬಂದಿದ್ದ ಮುತ್ತೈದೆಯರಿಗೆ ಅರಿಶಿಣ, ಕುಂಕುಮ ಕೊಡುವ ಶಾಸ್ತ್ರ, ಪಾಲ್ಗೊಂಡ ಎಲ್ಲರಿಗೂ ಪಾಯಸದಡಿಗೆ ಊಟ ಬಡಿಸಲಾಯಿತು. ಕೊನೆಗೆ ಎಲ್ಲರೂ ನೃತ್ಯ ಮಾಡಿ “ಬಾರೋ ಮಳೆರಾಯ’ ಎಂದು ಕರೆದರು. ಊರಿನ ಜನರ ಈ ನಂಬಿಕೆ ಸುಳ್ಳಾಗದಿದ್ದರೆ ಬರದ ಛಾಯೆ ಮರೆಯಾಗಿ ವರ್ಷಧಾರೆಯ ಕೃಪೆಗೆ ಭೂರಮೆ ತಣ್ಣಗಾಗಲಿದೆ.

ಮಳೆ ಬಾರದಿದ್ದಾಗ ಮಕ್ಕಳ ಮದುವೆ ಮಾಡುವ ಸಂಪ್ರ ದಾಯ ಮೊದಲಿನಿಂದಲೂ ಇದ್ದು ನಾವು ಮುಂದುವರಿಸುತ್ತಿ ದ್ದೇವೆ. ಹೀಗೆಯೇ ಮಳೆಯಾಗ ‌ದಿದ್ದಾಗ ಕೆಲ ವರ್ಷಗಳ ಹಿಂದೆ ಬಾಲಕರ ಮದುವೆ ಮಾಡಿಸಿದ್ದೆವು. ನಂತರ ಮಳೆ ಯಾಗಿತ್ತು. ಈ ಬಾರಿಯೂ ಮಳೆ ನಿರೀಕ್ಷೆ ಇಟ್ಟುಕೊಂಡು ಆಚರಣೆ ಮಾಡಿದ್ದೇವೆ.-ದ್ರಾಕ್ಷಾಯಿಣಿ, ಗೃಹಿಣಿ, ಲಿಂಗಪ್ಪನಪಾಳ್ಯ

Advertisement

ಕಳೆದ ವರ್ಷ ಮಳೆಯಿಲ್ಲದೆ ಮುಂಗಾರು, ಹಿಂಗಾರು ಎರಡೂ ಕೈ ಕೊಟ್ಟಿತು. ಈ ವರ್ಷವೂ ಹವಾಮಾನ ಇಲಾಖೆ ಮಾ.20 ರಂದು ಮಳೆಯಾಗುತ್ತ ದೆಂದು ಹೇಳಿದ್ದರೂ ಇಲ್ಲಿಯ ವರೆಗೆ ಮಳೆ ಸುಳಿವಿಲ್ಲ. ಹೀಗಾಗಿ ಚಂದಮಾಮ ಮದುವೆ ಮಾಡಿದ್ದೇವೆ.-ಮೈಲಾರಪ್ಪ, ರೈತ, ಲಿಂಗಪ್ಪನಪಾಳ್ಯ  

-ಎಚ್‌.ಬಿ.ಕಿರಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next