ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರು ಹಿಜಾಬ್ ಧರಿಸಿರುವ ಮುಸ್ಲಿಂ ಹುಡುಗಿಯರಿಗೆ ಪ್ರವೇಶ ನಿರಾಕರಿಸಿದ್ದಕ್ಕಾಗಿ ಕರ್ನಾಟಕದ ಕಾಲೇಜು ಆಡಳಿತದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಮ್ ಹುಡುಗಿಯರು ಹಿಜಾಬ್ ಧರಿಸಿದ್ದಕ್ಕಾಗಿ ಶಿಕ್ಷಣವನ್ನು ನಿರಾಕರಿಸಿದ್ದರಿಂದ ಹೆಣ್ಣು ಮಗುವಿಗೆ ಶಿಕ್ಷಣ ನೀಡಬೇಕೆಂಬ ತನ್ನ ಘೋಷಣೆಯು “ಟೊಳ್ಳು” ಎಂದು ಮೆಹಬೂಬಾ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
”ಬೇಟಿ ಬಚಾವೋ ಬೇಟಿ ಪಡಾವೋ ಎಂಬುದು ಮತ್ತೊಂದು ಪೊಳ್ಳು ಘೋಷಣೆಯಾಗಿದೆ. ಮುಸ್ಲಿಮ್ ಹೆಣ್ಣುಮಕ್ಕಳು ತಮ್ಮ ಉಡುಗೆ ತೊಡುಗೆಗಳಿಂದಾಗಿ ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತಿದ್ದಾರೆ. ಮುಸ್ಲಿಮರನ್ನು ಕಡೆಗಣಿಸುವುದನ್ನು ಕಾನೂನು ಬದ್ಧಗೊಳಿಸುವುದು ಗಾಂಧಿಯವರ ಭಾರತವನ್ನು, ಗೋಡ್ಸೆಯ ಭಾರತವನ್ನಾಗಿ ಪರಿವರ್ತಿಸುವ ಇನ್ನೊಂದು ಹೆಜ್ಜೆಯಾಗಿದೆ, ”ಎಂದು ಅವರು ಟ್ವೀಟ್ ಮಾಡಿದ್ದಾರೆ.
ಒಮರ್ ಅಬ್ದುಲ್ಲಾ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ ಮತ್ತು ಭೋಪಾಲ್ ಲೋಕಸಭಾ ಸದಸ್ಯೆ ಪ್ರಜ್ಞಾ ಠಾಕೂರ್ ಅವರು ಕೇಸರಿ ನಿಲುವಂಗಿಯನ್ನು ಧರಿಸಿರುವ ಮತ್ತು ಮುಸ್ಲಿಂ ವಿದ್ಯಾರ್ಥಿನಿಯರ ಚಿತ್ರಗಳನ್ನು ಪೋಸ್ಟ್ ಮಾಡಿ, ವ್ಯಕ್ತಿಗಳು ಏನು ಧರಿಸಬೇಕೆಂದು ಆಯ್ಕೆ ಮಾಡಲು ಸ್ವತಂತ್ರರು. ಅವರ ಆಯ್ಕೆಯನ್ನು ನೀವು ಇಷ್ಟಪಡಬಹುದು ಅಥವಾ ಇಷ್ಟಪಡದಿರಬಹುದು ಆದರೆ ಅದು ನಮಗೆಲ್ಲರಿಗೂ ಇರುವ ಹಕ್ಕು. ಈ ಸಾರ್ವಜನಿಕ ಪ್ರತಿನಿಧಿಗಳು ಕೇಸರಿ ವಸ್ತ್ರವನ್ನು ಧರಿಸಬಹುದಾದರೆ, ಈ ಹುಡುಗಿಯರು ಹಿಜಾಬ್ ಬಳಸಬಹುದು. ಮುಸ್ಲಿಮರು ಎರಡನೇ ದರ್ಜೆಯ ನಾಗರಿಕರಲ್ಲ.ಎಂದು ಟ್ವೀಟ್ ಮಾಡಿದ್ದಾರೆ.