Advertisement

ಡಿಕೆಶಿ ವಿರುದ್ಧದ ಸಿಬಿಐ ವಿಚಾರಣೆಗೆ ಎಪ್ರಿಲ್ 6ರವರೆಗೆ ತಡೆ ನೀಡಿ ಹೈಕೋರ್ಟ್ ಆದೇಶ

03:44 PM Apr 01, 2023 | Team Udayavani |

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನಡೆಸುತ್ತಿರುವ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಏಪ್ರಿಲ್ 6 ರವರೆಗೆ ತಡೆಯಾಜ್ಞೆ ನೀಡಿದೆ.

Advertisement

ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿದೆ.

ಶಿವಕುಮಾರ್ ಅವರು ತಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲು ನೀಡಿರುವ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಇನ್ನೊಂದು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರಕಾರಕ್ಕೆ ಎಪ್ರಿಲ್ 6ರವರೆಗೆ ಕಾಲಾವಕಾಶ ನೀಡಿ, ವಿಚಾರಣೆಯನ್ನು ಮುಂದೂಡಿದೆ. ರಾಜ್ಯ ಸರಕಾರವು ತನಿಖೆಗೆ ಒಪ್ಪಿಗೆ ನೀಡಿದ ನಂತರ ಸಿಬಿಐ 2020 ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು.

ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ, ಸಿಬಿಐ ವಕೀಲರು ಶಿವಕುಮಾರ್ ವಿರುದ್ಧದ ವಿಚಾರಣೆಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಮತ್ತು ಪರಿಗಣಿಸಬೇಕಾದ ತಡೆಯಾಜ್ಞೆಯ ತೆರವು ಕೋರಿ ಕೇಂದ್ರ ಸಂಸ್ಥೆ ಅರ್ಜಿ ಸಲ್ಲಿಸಿದೆ ಎಂದು ಪ್ರಸ್ತಾಪಿಸಿದರು.

ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಿರುವುದರಿಂದ ಶಿವಕುಮಾರ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐಗೆ ಸರಕಾರ ಅನುಮತಿ ನೀಡಿದ್ದರ ವಿರುದ್ಧ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ಸರಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಸರ್ಕಾರಿ ವಕೀಲರು ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದರು. ಆದಾಗ್ಯೂ, ಸಿಬಿಐ ಆರಂಭಿಕ ವಿಚಾರಣೆಯನ್ನು ಕೋರುತ್ತಿದ್ದರೆ, ಸರಕಾರವು ಹೆಚ್ಚಿನ ಸಮಯವನ್ನು ಕೋರುತ್ತಿದೆ ಎಂದು ನ್ಯಾಯಾಲಯ ಗಮನಸೆಳೆದಿದೆ. ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಲಾಗಿದ್ದು, ಅಷ್ಟರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next