Advertisement
ಸುಬ್ರಹ್ಮಣ್ಯ ಕಾಲೇಜಿನ ಅಂತಿಮ ಬಿ.ಎ. ವಿಭಾಗದ ವಿದ್ಯಾರ್ಥಿ ನವೀನ್ ಎಂಬಾತ ಮರ್ಧಾಳ ಕಡೆಯ ತನ್ನ ಮನೆಯಿಂದ ಸುಬ್ರಹ್ಮಣ್ಯ ಕಾಲೇಜಿಗೆಂದು ಬರುತ್ತಿದ್ದ ವೇಳೆ ಶುಕ್ರವಾರ ಬೆಳಗ್ಗೆ ಕೈಕಂಬದ ನರ್ಸರಿ ಬಳಿ ಅಪಘಾತಕ್ಕೆ ಒಳಗಾಗಿದ್ದ. ವಾಹವೊಂದರ ಹಿಂದಿಕ್ಕಿ ಮುಂದೆ ಸಾಗುವ ವೇಳೆ ಈ ಘಟನೆ ಸಂಭವಿಸಿತ್ತು. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಯನ್ನು ಸ್ಥಳಿಯರು ಖಾಸಗಿ ವಾಹನದಲ್ಲಿ ನಿಟ್ಟೆಯ ಸದಾನಂದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಿದ್ದರು. ಆಸ್ಪತ್ರೆಯ ವೈದ್ಯರು ಮತ್ತು ಅಲ್ಲಿಯ ನರ್ಸ್‌ಗಳು ತತ್‌ಕ್ಷಣಕ್ಕೆ ಗಾಯಾಳು ವಿದ್ಯಾರ್ಥಿಗೆ ಚಿಕಿತ್ಸೆ ನೀಡಲು ಮುಂದಾಗಿಲ್ಲ ಎಂದು ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಕಾಲೇಜಿನ ಎಬಿವಿಪಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ದಿಢೀರನೆ ಆಸ್ಪತ್ರೆ ಮುಂಭಾಗ ಕ್ರಮಕ್ಕೆ ಒತ್ತಾಯಿಸಿ ಮೌನ ಪ್ರತಿಭಟನೆ ನಡೆಸಿದರು.
ಈ ವೇಳೆ ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣೆಯ ಎಎಸ್‌ಐ ಚಂದಪ್ಪ ಹಾಗೂ ಸಿಬಂದಿ ಆಗಮಿಸಿ ವಿದ್ಯಾರ್ಥಿಗಳ ಹಾಗೂ ವೈದ್ಯರ ಜತೆ ಮಾತುಕತೆ ನಡೆಸಿದರು. ವಿದ್ಯಾರ್ಥಿಗಳು ಪಟ್ಟು ಬಿಡದೆ ಧರಣಿ ಮುಂದುವರೆಸಿದರು. ಆಗ ಪ್ರತಿಭಟನಕಾರರ ಬಳಿ ಬಂದ ವೈದ್ಯ ಬಿ.ಕೆ. ಭಟ್ ‘ಗಾಯಾಳು ವಿದ್ಯಾರ್ಥಿಯ ಚಿಕಿತ್ಸೆಗೆ ಸ್ಪಂದಿಸಿಲ್ಲ ಎಂಬ ಆರೋಪ ಸುಳ್ಳು. ತಾನು ಆಸ್ಪತ್ರೆ ಒಳಗೆ ಚಿಕಿತ್ಸಾ ಘಟಕದಲ್ಲಿ ರೋಗಿಯ ಆರೈಕೆಯಲ್ಲಿ ತೊಡಗಿದ್ದೆ. ತತ್ ಕ್ಷಣಕ್ಕೆ ಚಿಕಿತ್ಸೆ ಅರ್ಧಕ್ಕೆ ನಿಲ್ಲಿಸಿ ಬರಲು ಅಸಾಧ್ಯ. ನರ್ಸ್ ಗಳು ಅಷ್ಟರೊಳಗೆ ಗಾಯಾಳು ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆ ನೀಡಿ ಬ್ಯಾಂಡೇಜ್ ಹಚ್ಚಿದ್ದರು ಎಂದು ಹೇಳಿ ನಾವು ಎಲ್ಲಿಯೂ ನಿರ್ಲಕ್ಷ ಮಾಡಿಲ್ಲ ಎಂದರು.
Related Articles
ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ನಿಟ್ಟೆ ಆಡಳಿತ ಮಂಡಳಿ ಜತೆ ದೂರವಾಣಿ ಸಂಪರ್ಕ ಮೂಲಕ ಪೊಲೀಸರು ಮತ್ತು ವಿದ್ಯಾರ್ಥಿ ನಾಯಕರು ಮಾತನಾಡಿದರು. ನಿಟ್ಟೆ ಆಡಳಿತ ಮಂಡಳಿಯವರು ಸ್ಪಂದಿಸಿ ಈ ಕುರಿತು ಮಾಹಿತಿ ಪಡೆದು ಸಮಸ್ಯೆ ಇತ್ಯರ್ಥಕ್ಕೆ ಕ್ರಮಕೈಗೊಳ್ಳುತ್ತೇವೆ. ಅತೀ ಶೀಘ್ರದಲ್ಲೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಈ ಕುರಿತು ಚರ್ಚಿಸುವುದಾಗಿ ವಿದ್ಯಾರ್ಥಿ ನಾಯಕರಿಗೆ ಭರವಸೆ ನೀಡಿ ಪ್ರತಿಭಟನೆ ಹಿಂತೆಗೆಯುವಂತೆ ಮನವಿ ಮಾಡಿದರು. ಅದರಂತೆ ವಿದ್ಯಾರ್ಥಿಗಳು ಪ್ರತಿಭಟನೆ ಹಿಂದಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಕೆಎಸ್‌ಎಎಸ್ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಜಯ್, ಎಬಿವಿಪಿ ತಾ|ಸಂಚಾಲಕ ಸಂತೋಷ್ ಹಾಗೂ ಎಬಿವಿಪಿ ಸದಸ್ಯರು, ಕಾಲೇಜು
ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.
Advertisement