Advertisement

ಚೈನ್ನೈ ಬಳಿ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಭಸ್ಮ

11:21 AM Aug 13, 2017 | |

ಬೆಂಗಳೂರು: ಎಂಜಿನ್‌ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಸುಟ್ಟು ಕರಕಲಾದ ಘಟನೆ ಶನಿವಾರ ಬೆಳಗ್ಗೆ ಚೆನ್ನೈ ಸಮೀಪದ ಪೂಣಮಲೈ ಬೈಪಾಸ್‌ ಬಳಿ ನಡೆದಿದೆ. ಅದೃಷ್ಟವಶಾತ್‌ ಪ್ರಯಾಣಿಕರು ಅನಾಹುತದಿಂದ ಪಾರಾಗಿದ್ದಾರೆ. 

Advertisement

ಬೆಂಗಳೂರಿನಿಂದ ಚೆನ್ನೈ ಕಡೆಗೆ ಹೊರಟಿದ್ದ ವೋಲ್ವೋ ಬಸ್‌ನಲ್ಲಿ ಪೂಣಮಲೈ ಬೈಪಾಸ್‌ ಬಳಿ ಬೆಳಗ್ಗೆ 8.15ರ ಸುಮಾರಿಗೆ ಎಂಜಿನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಬಸ್‌ನ ಆಸನಗಳು ಮತ್ತು ಮೇಲ್ಭಾಗಕ್ಕೆ ವ್ಯಾಪಿಸಿದೆ. ಆದರೆ, ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಸುರಕ್ಷಿತವಾಗಿ ಪಾರಾದರು. 44 ಆಸನಗಳ ಸಾಮರ್ಥ್ಯ ಇರುವ ಈ ವೋಲ್ವೋ ಬಸ್‌, ಸಾಲು-ಸಾಲು ರಜೆ ಹಿನ್ನೆಲೆಯಲ್ಲಿ 43 ಪ್ರಯಾಣಿಕರಿಂದ ಭರ್ತಿಯಾಗಿತ್ತು. 

ಬೈಪಾಸ್‌ನಲ್ಲಿ ಹೊರಟಿದ್ದ ಬಸ್‌ನ ಎಂಜಿನ್‌ನಲ್ಲಿ ಹೊತ್ತಿಕೊಂಡಿದ್ದ ಬೆಂಕಿ, ಬಸ್‌ ಹಿಂದೆ ಬರುತ್ತಿದ್ದ ಮತ್ತೂಂದು ವಾಹನದಲ್ಲಿದ್ದವರಿಗೆ ಕಂಡಿದೆ. ತಕ್ಷಣ ಆ ವಾಹನದ ಚಾಲಕ, ಕೆಎಸ್‌ಆರ್‌ಟಿಸಿ ವೋಲ್ವೋ ಚಾಲಕನಿಗೆ ಮಾಹಿತಿ ನೀಡಿದ್ದಾರೆ. ಬಸ್‌ ನಿಲ್ಲಿಸಿದ ಚಾಲಕ, ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಿ, ಲಗೇಜುಗಳನ್ನು ತೆರವುಗೊಳಿಸಿದ್ದಾರೆ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೆಂಕಿಗೆ ಎಲೆಕ್ಟ್ರಿಕಲ್‌ ವೈರ್‌ ಕಾರಣ?
ಬೆಂಕಿಗೆ ನಿಖರ ಕಾರಣಗಳು ಗೊತ್ತಾಗಿಲ್ಲ. ಪ್ರಾಥಮಿಕ ತನಿಖೆ ಪ್ರಕಾರ ಎಲೆಕ್ಟ್ರಿಕಲ್‌ ವೈರ್‌ನಲ್ಲಿ ಕಾಣಿಸಿಕೊಂಡ ಕಿಡಿಯಿಂದ ಇಡೀ ಬಸ್‌ಗೆ ಬೆಂಕಿ ಆವರಿಸಿರುವ ಸಾಧ್ಯತೆ ಇದೆ. ವೋಲ್ವೋ ಬಸ್‌ಗಳಲ್ಲಿ ಸಾಮಾನ್ಯವಾಗಿ ಎಂಜಿನ್‌ನ ಪಕ್ಕದಲ್ಲೇ ವೈರ್‌ಗಳು ಹಾದುಹೋಗಿರುತ್ತವೆ. ಆ ವೈರ್‌ ಮೆಟಲ್‌ ಭಾಗಕ್ಕೆ ಉಜ್ಜಿಕೊಂಡು ಕಿಡಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ ಎಂದು ಕೆಎಸ್‌ಆರ್‌ಟಿಸಿ ತಾಂತ್ರಿಕ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಹಿಂದಿನ ಘಟನೆಗಳು
ಈ ಹಿಂದೆ 2010ರಲ್ಲಿ ವೆಲ್ಲೂರು ಸಮೀಪ ವೋಲ್ವೋ ಬಸ್‌ನ ಚಕ್ರಗಳು ಜಾಮ್‌ ಆಗಿ, ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಆದರೆ, 2013ರಲ್ಲಿ ಮೆಹಬೂಬ್‌ನಗರ ಮತ್ತು ಹಾವೇರಿ ಬಳಿ ಈ ಹಿಂದೆ ಖಾಸಗಿ ವೋಲ್ವೋ ಬಸ್‌ಗಳಲ್ಲಿ ಬೆಂಕಿಹೊತ್ತಿಕೊಂಡು ಕ್ರಮವಾಗಿ 44 ಮತ್ತು ಏಳು ಜನ ಪ್ರಯಾಣಿಕರು ಬಲಿಯಾಗಿದ್ದರು. ಅತಿ ವೇಗವಾಗಿ ಚಾಲನೆ ಮಾಡಿದ್ದರಿಂದ ಬಸ್‌ ಚಾಲಕನ ನಿಯಂತ್ರಣ ತಪ್ಪಿ, ಈ ಅನಾಹುತಗಳು ಸಂಭವಿಸಿದ್ದವು. 

Advertisement
Advertisement

Udayavani is now on Telegram. Click here to join our channel and stay updated with the latest news.

Next