Advertisement

KSRTC ನಿಲ್ದಾಣ-ಲಾಲ್‌ಭಾಗ್‌ ರಸ್ತೆ ಫುಟ್‌ಪಾತ್‌ ಇಲ್ಲದೆ ಪಾದಚಾರಿಗಳ ಪರದಾಟ

05:25 PM Oct 24, 2024 | Team Udayavani |

ಲಾಲ್‌ಭಾಗ್‌: ವಾಹನ ದಟ್ಟಣೆ, ಜನ ಸಂಚಾರ ಹೆಚ್ಚಾಗಿರುವ ಬಿಜೈ ಕೆಎಸ್‌ಆರ್‌ಟಿಸಿ-ಲಾಲ್‌ಭಾಗ್‌ ರಸ್ತೆಯಲ್ಲಿ ಫ‌ುಟ್‌ಪಾತ್‌ ಇಲ್ಲದೆ ಪಾದಚಾರಿಗಳು ಪರದಾಡುವಂತಾಗಿದೆ.

Advertisement

ಸಾವಿರಾರು ಮಂದಿ ಪಾದಚಾರಿಗಳು ರಸ್ತೆಯಲ್ಲೇ ಅಪಾಯಕಾರಿಯಾಗಿ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇಲ್ಲಿದೆ. ಫ‌ುಟ್‌ಪಾತ್‌ಗಾಗಿ ಜಾಗವಿದ್ದರೂ ಅದು ಬೀದಿಬದಿ ವ್ಯಾಪಾರಸ್ಥರು, ವಾಹನಗಳ ಪಾಲಾಗಿದೆ. ಅಲ್ಲದೆ ಫ‌ುಟ್‌ಪಾತ್‌ನ ಅರ್ಧಭಾಗದಲ್ಲಿ ಕಾಮಗಾರಿಗಾಗಿ ಅಗೆದು ಹಾಕಿದ ಕಲ್ಲುಗಳ ರಾಶಿಯೂ ಇದೆ. ಇವೆಲ್ಲದರ ನಡುವೆ ಪಾದಚಾರಿಗಳು ನಡೆದಾಡಲು ಅಸಾಧ್ಯವಾಗುತ್ತಿದೆ.

ಪದೇ ಪದೇ ಟ್ರಾಫಿಕ್‌ ಜಾಮ್‌
ಕೆಎಸ್‌ಆರ್‌ಟಿಸಿ ಜಂಕ್ಷನ್‌ನಲ್ಲಿ ಪದೇ ಪದೇ ಉಂಟಾಗುತ್ತಿರುವ ಟ್ರಾಫಿಕ್‌ ಜಾಮ್‌ಗೆ ಇಲ್ಲಿನ ಫ‌ುಟ್‌ಪಾತ್‌ ಅವ್ಯವಸ್ಥೆ ಕೂಡ ಕಾರಣವಾಗುತ್ತಿದೆ. ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲೇ ನಡೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಆಟೋರಿಕ್ಷಾ, ಇತರ ಕೆಲವು ವಾಹನಗಳನ್ನು ರಸ್ತೆ ಬದಿ ನಿಲ್ಲಿಸಲಾಗುತ್ತಿದೆ. ಅತ್ತ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಪ್ರವೇಶಿಸುವ, ನಿಲ್ದಾಣದಿಂದ ನಿರ್ಗಮಿಸುವ ನೂರಾರು ಬಸ್‌ಗಳು ಇದೇ ಜಂಕ್ಷನ್‌ ಮುಖಾಂತರ ಸಂಚರಿಸುತ್ತವೆ. ಬಸ್‌ಗಳ ಸುಗಮ ಆಗಮನ, ನಿರ್ಗಮನಕ್ಕೆ ಇತರ ವಾಹನಗಳು, ಪಾದಚಾರಿಗಳ ಓಡಾಟದಿಂದ ಅಡ್ಡಿಯಾಗುತ್ತಿದೆ. ಈ ಸ್ಥಳದಲ್ಲಿ ಆಗಾಗ್ಗೆ ಅಪಘಾತಗಳು ಕೂಡ ಸಂಭವಿಸುತ್ತಿವೆ. ಪಾದಚಾರಿಗಳಿಗೂ ವಾಹನಗಳು ಢಿಕ್ಕಿಯಾದ ಘಟನೆಗಳು ನಡೆದಿವೆ. ಆದರೂ ಫ‌ುಟ್‌ಪಾತ್‌ನ ಅವ್ಯವಸ್ಥೆಗೆ ಮುಕ್ತಿ ಸಿಕ್ಕಿಲ್ಲ.

ಟ್ರಾಫಿಕ್‌ ಪೊಲೀಸರ ಅಸಹಾಯಕತೆ
ಫ‌ುಟ್‌ಪಾತ್‌ ಇಲ್ಲದಿರುವುದರಿಂದ ರಸ್ತೆಯನ್ನೇ ಬಳಸುವ ಪಾದಚಾರಿಗಳನ್ನು ತಡೆಯಲು ಪೊಲೀಸರಿಂದ ಆಗುತ್ತಿಲ್ಲ. ಫ‌ುಟ್‌ಪಾತ್‌ನಲ್ಲಿರುವ ವ್ಯಾಪಾರಸ್ಥರನ್ನು ತೆರವು ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಸಂಜೆಯಾಗುತ್ತಲೇ ಇದೇ ಸ್ಥಳದಲ್ಲಿ ಖಾಸಗಿ ಟೂರಿಸ್ಟ್‌ ಬಸ್‌ಗಳು ಬೇಕಾಬಿಟ್ಟಿಯಾಗಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ. ಇವೆಲ್ಲವುಗಳ ನಡುವೆ ಸಂಚಾರ ನಿರ್ವಹಿಸುವ ಸವಾಲು ಪೊಲೀಸರದ್ದು. ಕೆಲವೊಮ್ಮೆ ಪೊಲೀಸರೇ ಸಾರ್ವಜನಿಕರಲ್ಲಿ ಅಸಹಾಯಕತೆ ವ್ಯಕ್ತಪಡಿಸುವಂತಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಕಚೇರಿಯ ಮುಂಭಾಗದಲ್ಲೇ ಇಂತಹ ಅವ್ಯವಸ್ಥೆ ಇದೆ.

ಜಾಗವಿದ್ದರೂ ಫ‌ುಟ್‌ಪಾತ್‌ ನಿರ್ಮಿಸಿಲ್ಲ
ಫ‌ುಟ್‌ಪಾತ್‌ಗಾಗಿ ಮೀಸಲಿಟ್ಟ ಜಾಗವಿದ್ದರೂ ಅದನ್ನು ಬಳಕೆ ಮಾಡದಿರುವುದು ಪಾಲಿಕೆಯ ನಿರ್ಲಕ್ಷ್ಯತನಕ್ಕೆ ಸಾಕ್ಷಿ. ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಸಾವಿರಾರು ಪ್ರಯಾಣಿಕರು ಓಡಾಡುವ ಸ್ಥಳ ಇದು. ಲಗೇಜ್‌ಗಳನ್ನು ಹೊತ್ತುಕೊಂಡು ಸಾಗುವವರು ಕೂಡ ರಸ್ತೆಯಲ್ಲಿಯೇ ಹೋಗಬೇಕಾದ ಅನಿವಾರ್ಯತೆ ಇದೆ.

Advertisement

ಲಭ್ಯವಿರುವ ಜಾಗದಲ್ಲಿ ಫ‌ುಟ್‌ಪಾತ್‌ ನಿರ್ಮಿಸಿ ಇಲ್ಲಿನ ಫ‌ುಟ್‌ಪಾತ್‌ ವ್ಯಾಪಾರಿಗಳಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆ ಬಹಳಷ್ಟು ಮಟ್ಟಿಗೆ ಪರಿಹಾರವಾಗಬಹುದು ಎಂಬುದು ಪಾದಚಾರಿಗಳ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next