Advertisement

ಕೆಎಸ್‌ಆರ್‌ಟಿಸಿ ನಿಲ್ದಾಣ ಇನ್ನು ಹೈಟೆಕ್‌

12:46 PM Sep 18, 2017 | Team Udayavani |

ಮಹಾನಗರ: ಬಿಜೈ  ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವು ಶೀಘ್ರದಲ್ಲೇ ಹೈಟೆಕ್‌ ರೂಪ ಪಡೆದುಕೊಳ್ಳಲಿದೆ. ಈ ವಿಭಾಗೀಯ ನಿಲ್ದಾಣದಲ್ಲಿ ಇನ್ನು ಮುಂದೆ ಯಾವ ಬಸ್‌ ಎಷ್ಟು ಗಂಟೆಗೆ ಎಲ್ಲಿಗೆ ಹೊರಡುತ್ತದೆ? ಬೇರೆ ನಿಲ್ದಾಣಗಳಿಂದ ಹೊರಟ ಬಸ್‌ಗಳು ಎಲ್ಲಿಗೆ ತಲುಪಿವೆ; ಎಷ್ಟೊತ್ತಿಗೆ ಆ ಬಸ್‌ ನಿಲ್ದಾಣಕ್ಕೆ ಬಂದು ತಲುಪುತ್ತವೆ ಎಂಬಿತ್ಯಾದಿ ಮಾಹಿತಿಗಳು ಪ್ರಯಾಣಿಕರಿಗೆ ಲಭ್ಯವಾಗಲಿದೆ.

Advertisement

ಸುಗಮ ಸೇವೆ ಒದಗಿ ಸುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿಯು ಮಂಗಳೂರು ಬಸ್‌ ನಿಲ್ದಾಣವನ್ನು ಮತ್ತಷ್ಟು ಆಧುನೀಕರಣಗೊಳಿಸಲು ಮುಂದಾಗಿದ್ದು, ಆ ಮೂಲಕ ಪ್ರಯಾ ಣಿಕರಿಗೆ ಬಸ್‌ಗಳ ಸಂಚಾರದ ಕುರಿತಂತೆ ಅಗತ್ಯ ಮಾಹಿತಿಯನ್ನು ಬೆರಳ ತುದಿ ಯಲ್ಲಿ ಒದಗಿಸಲು ತೀರ್ಮಾನಿಸಿದೆ. ಕೆಲವೇ ದಿನಗಳಲ್ಲಿ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ “ವಿಟಿಎಂಎಸ್‌’ (ವೆಹಿಕಲ್‌ ಟ್ರ್ಯಾಕಿಂಗ್‌ ಆ್ಯಂಡ್‌ ಮಾನಿಟರಿಂಗ್‌ ಸಿಸ್ಟಮ್‌) ವ್ಯವಸ್ಥೆ ಅಳವಡಿಸುತ್ತಿದೆ. ಜತೆಗೆ ನಿಲ್ದಾಣದಿಂದ ಸಂಚರಿಸುವ ಬಹುತೇಕ ಬಸ್‌ಗಳಲ್ಲಿ ಜಿಪಿಎಸ್‌ ತಂತ್ರಜ್ಞಾನವನ್ನು ಕೂಡ ಅಳವಡಿಸುತ್ತಿದೆ.

ಏನಿದು ವಿಟಿಎಂಎಸ್‌?
ಮಂಗಳೂರಿಗೆ ಇದೊಂದು ಹೊಸ ವ್ಯವಸ್ಥೆ. ಬಸ್‌ಗಳಲ್ಲಿ ಜಿಪಿಎಸ್‌ ತಂತ್ರಜ್ಞಾನ ಅಳವಡಿಸಿಕೊಂಡು ಆಯಾ ಬಸ್‌ಗಳ ಚಲನ- ವಲನದ ಬಗ್ಗೆ ಕುಳಿತಲ್ಲಿಂದಲೇ ಮಾಹಿತಿ ಪಡೆದುಕೊಳ್ಳುವುದೇ ವಿಟಿ ಎಂಎಸ್‌ ವ್ಯವಸ್ಥೆ. ರಸ್ತೆಯಲ್ಲಿರುವ ಬಸ್‌ಗಳನ್ನು ಟ್ರ್ಯಾಕ್‌ ಮಾಡಿ ಆ ಕುರಿತ ನಿಖರ ಮಾಹಿತಿಯನ್ನು ನಿಗದಿತ ಬಸ್‌ಗಳ ಆಗಮನಕ್ಕಾಗಿ ನಿಲ್ದಾಣದಲ್ಲಿ ಕಾದು ಕುಳಿತಿರುವ ಪ್ರಯಾಣಿಕರಿಗೆ ಒದಗಿಸಲಾಗುತ್ತದೆ. ಅದಕ್ಕಾಗಿ ಬಸ್‌ ನಿಲ್ದಾಣಗಳಲ್ಲಿ ಎರಡು ದೊಡ್ಡ ಎಲ್‌ಇಡಿ ಪರದೆ ಹಾಕಲಾಗುತ್ತದೆ.

ಸದ್ಯ ಕೆಎಸ್‌ಆರ್‌ಟಿಸಿಯ ಮಂಗ ಳೂರು ವಿಭಾಗದಲ್ಲಿರುವ 570 ಬಸ್‌ಗಳಲ್ಲಿ 356ಕ್ಕೆ ಜಿಪಿಎಸ್‌ ತಂತ್ರಜ್ಞಾನ ಅಳವಡಿಸಲಾಗಿದೆ. ಬಸ್‌ ಎಷ್ಟು ವೇಗವಾಗಿ ಪ್ರಯಾಣಿಸುತ್ತಿದೆ ಎಂಬುದನ್ನು ಆಧರಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸುವ ವೇಳೆಯ ಮಾಹಿತಿ ನಿಯಂತ್ರಣಾ ಕೊಠಡಿಗೆ ಬರುತ್ತದೆ. ಬಸ್‌ ಚಾಲಕ ನಿಗದಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೂ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗುತ್ತದೆ. ಈ ವ್ಯವಸ್ಥೆಯ ಮೂಲಕ ಅಧಿಕಾರಿಗಳು ಕುಳಿತಲ್ಲೇ ಚಾಲಕನ ಬಗ್ಗೆ ನಿಗಾ ಇಡ ಬಹಹುದು. ಇನ್ನು ಮುಂದಿನ ದಿನಗಳಲ್ಲಿ ವಿಭಾಗದ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೂ ಜಿಪಿಎಸ್‌ ವ್ಯವಸ್ಥೆ ಅಳವಡಿಸುವ ಚಿಂತನೆಯಲ್ಲಿದೆ.

ಪ್ರಯಾಣಿಕರಿಗೇನು ಅನುಕೂಲ?
ಜಿಪಿಎಸ್‌ ತಂತ್ರಜ್ಞಾನದಿಂದ ಪ್ರಯಾಣಿಕರಿಗೆ ಹೆಚ್ಚು ಲಾಭ ಸಿಗಲಿದೆ. ಯಾವ ಬಸ್‌ ಎಷ್ಟು ಗಂಟೆಗೆ ನಿಲ್ದಾಣಕ್ಕೆ ಆಗಮಿಸಲಿದೆ, ನಿಲ್ದಾಣದಿಂದ ಬಸ್‌ ಎಷ್ಟು ಗಂಟೆಗೆ ಹೊರಡುತ್ತದೆ, ಮುಂದಿನ ನಿಲ್ದಾಣ ತಲುಪಲು ಎಷ್ಟು ಅವಧಿ ತೆಗೆದುಕೊಳ್ಳುತ್ತದೆ ಎಂಬ ಮಾಹಿತಿಯೂ ಇಲ್ಲಿ ಲಭ್ಯ. ಅಪಘಾತ ತಪ್ಪಿಸಲೂ ಈ ನೂತನ ವ್ಯವಸ್ಥೆ ಸಹಾಯವಾಗಲಿದೆ.

Advertisement

ಪ್ರಾಯೋಗಿಕ: ಜಿಪಿಎಸ್‌ ವ್ಯವಸ್ಥೆ 
ಮಂಗಳೂರು- ಕಾಸರಗೋಡು ನಡುವೆ ಸಂಚರಿಸುವ 10 ಬಸ್‌ಗಳಲ್ಲಿ  ಪ್ರಾಯೋಗಿಕವಾಗಿ ಜಿಪಿಎಸ್‌ ಅಳಡಿಸಲಾಗಿದೆ. ಇದರಿಂದ ನಿಲ್ದಾಣಗಳು ಸಮೀಪಿಸುತ್ತಿದ್ದಂತೆ, ಆಯಾ ನಿಲ್ದಾಣದ ಬಗ್ಗೆ ಧ್ವನಿ ಮಾಹಿತಿ ತಿಳಿಸುತ್ತದೆ. ಇಲ್ಲಿ ಕರ್ಕಶ ಶಬ್ದಕ್ಕೆ ಅವಕಾಶವಿಲ್ಲ. ಬಸ್‌ಗಳ ವೇಗಕ್ಕೆ ಅನುಗುಣವಾಗಿ ಶಬ್ದದಲ್ಲಿಯೂ ಏರುಪೇರಾಗುತ್ತದೆ.ಬರಲಿದೆ ಎರಡು ಟಿವಿ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡುವ ಉದ್ದೇಶದಿಂದ ನಗರ ಪ್ರದೇಶದಲ್ಲಿ ಓಡಾಡುವ ವೋಲ್ವೋ ಬಸ್‌ಗಳಲ್ಲಿ 2 ಟಿವಿ ಅಳವಡಿಸಲು ಕೆಎಸ್‌ಆರ್‌ಟಿಸಿ ಚಿಂತನೆ ನಡೆಸುತ್ತಿದೆ. ಇದಕ್ಕೆಂದು ಸೈನಿಲ್‌ ಆ್ಯಡೋಡೈಸಿಂಗ್‌ ಸಂಸ್ಥೆಯೊಡನೆ ಒಡಂಬಡಿಕೆ ಮಾಡಿಕೊಂಡಿದೆ.

ಸುರಕ್ಷತೆ ಬಗ್ಗೆ ಚಾಲಕರಿಗೆ ಪಾಠ 
ಪ್ರಯಾಣಿಕರ ಸುರಕ್ಷತೆಯೇ ನಮ್ಮ ಹೊಣೆ. ಇದಕ್ಕೆಂದು ನಿಗಮದ ವತಿಯಿಂದ ಚಾಲಕರಿಗೆ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ. ವರ್ಕ್‌ಶಾಪ್‌ ಕೂಡ ನಡೆಸಲಾಗುತ್ತದೆ.
ದೀಪಕ್‌ ಕುಮಾರ್‌, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಅಧಿಕಾರಿ

ಆ್ಯಪ್‌ ಬಗ್ಗೆ ಚಿಂತನೆ 
ಮಂಗಳೂರು ಸಾರಿಗೆ ವಿಭಾಗದ ವತಿಯಿಂದ ಹೊಸದೊಂದು ಆ್ಯಪ್‌ ರೂಪಿಸಲು ಚಿಂತನೆ ನಡೆಯುತ್ತಿದೆ. ಸದ್ಯ ಮೈಸೂರಿನಲ್ಲಿ “ಮಿತ್ರ’ ಎಂಬ ಆ್ಯಪ್‌ ಇದ್ದು, ಶೀಘ್ರದಲ್ಲೇ ಮಂಗಳೂರು ವಿಭಾಗದಲ್ಲೂ ಆ್ಯಪ್‌ ಬರಲಿದೆ. ಆ್ಯಪ್‌ ಬಳಕೆಗೆ ಬಂದರೆ ಪ್ರಯಾಣಿಕರಿಗೆ ತುಂಬ ಅನುಕೂಲವಾಗಲಿದೆ. ಮೊಬೈಲ್‌ನಿಂದಲೇ ಬಸ್‌ ಎಲ್ಲಿ ಬರುತ್ತಿದೆ ಎಂಬ ಮಾಹಿತಿಯನ್ನು ಪಡೆಯಬಹುದು. ಇದರ ಜೊತೆಗೆ ಅನೇಕ ವಿಧದ ಸೌಲಭ್ಯ ಪಡೆದುಕೊಳ್ಳಬಹುದು.

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next