Advertisement

ಧರ್ಮಸ್ಥಳ: ಭಕ್ತರಿಗೆ ಕಷ್ಟ ರಾಜ್ಯ ಸಾರಿಗೆ ಸಂಸ್ಥೆಗೆ ನಷ್ಟ

12:15 AM Dec 13, 2020 | mahesh |

ಬೆಳ್ತಂಗಡಿ: ಸಾರಿಗೆ ನೌಕರರ ಮುಷ್ಕರವು ಧರ್ಮಸ್ಥಳ ಲಕ್ಷದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಬರುವ ನಾಡಿನ ಎಲ್ಲೆಡೆಯ ಭಕ್ತರಿಗೆ ತ್ರಾಸ ತಂದಿದೆ. ಇದರಿಂದ ಕೆಎಸ್ಸಾರ್ಟಿಸಿ ಆದಾಯಕ್ಕೆ ಹೊಡೆತ ಬಿದ್ದಿದೆ.

Advertisement

ಧರ್ಮಸ್ಥಳ ಘಟಕದಿಂದ ಪ್ರತಿನಿತ್ಯ ರಾಜ್ಯದ ವಿವಿಧೆಡೆಗೆ 350ಕ್ಕೂ ಅಧಿಕ ಬಸ್‌ಗಳು ಟ್ರಿಪ್‌ ನಡೆಸು ತ್ತವೆ. ಲಕ್ಷದೀಪೋತ್ಸವ ಸಂದರ್ಭದಲ್ಲಿ ಒಂದು ವಾರ ಕಾಲ ಹೆಚ್ಚುವರಿ ಟ್ರಿಪ್‌ ಇರುತ್ತದೆ. ಮುಂಜಾನೆ 5.30 ರಿಂದ ಆರಂಭಿಸಿ ಪ್ರತೀ ಕಾಲು ತಾಸಿಗೊಂದರಂತೆ ಬೆಂಗಳೂರಿಗೆ ಮತ್ತು ಅರ್ಧ ತಾಸಿಗೆ ಒಂದರಂತೆ ಉಡುಪಿ, ಮಂಗಳೂರು; ಪ್ರತೀ ಹತ್ತು ನಿಮಿಷಗಳಿಗೆ ಒಂದರಂತೆ ಸುಬ್ರಹ್ಮಣ್ಯಕ್ಕೆ ಬಸ್‌ ಸಂಚರಿಸುತ್ತವೆ.

ಆದಾಯ ಕಡಿತ
ಲಕ್ಷ ದೀಪೋತ್ಸವ ಸಂದರ್ಭ ಧರ್ಮಸ್ಥಳ ಘಟಕವೊಂದರಲ್ಲೇ ಕನಿಷ್ಠ 50 ಹೆಚ್ಚುವರಿ ಬಸ್‌ ನಿಯೋಜಿಸಲಾಗುತ್ತಿತ್ತು. ಮಡಿಕೇರಿ, ಪುತ್ತೂರು, ಬಿ.ಸಿ. ರೋಡ್‌, ಸುಳ್ಯ ವ್ಯಾಪ್ತಿಗೆ ಪ್ರತೀ ನಿತ್ಯ 30 ಟ್ರಿಪ್‌ ಇರುತ್ತಿದ್ದವು. ಇದೂ ಸಾಧ್ಯವಾಗಿಲ್ಲ. ರಾಜಹಂಸ ಬಸ್‌ಗಳ 10 ಟ್ರಿಪ್‌ಗ್ಳನ್ನೂ ಕಡಿತ ಮಾಡಲಾಗಿದೆ. ಲಕ್ಷದೀಪೋತ್ಸವ ಸಂದರ್ಭ ಸರಾಸರಿ ಪ್ರತೀ ದಿನ 20ರಿಂದ 22 ಲಕ್ಷ ರೂ. ಆದಾಯ ಬರುತ್ತಿತ್ತು. ಪ್ರಸಕ್ತ ಆರಂಭದ ಎರಡು ದಿನ 10 ಲಕ್ಷ ರೂ. ದಾಟಿಲ್ಲ. ಮುಷ್ಕರದಿಂದಾಗಿ ಬೆರಳೆಣಿಕೆಯ ಬಸ್‌ಗಳು ಮಾತ್ರ ಓಡಾಟ ನಡೆಸಿವೆ. ಇದರಿಂದ ಲಕ್ಷಾಂರ ರೂ.ಆದಾಯ ಖೋತಾ ಆಗಿದೆ.

ಮುಷ್ಕರ ಬಿಸಿ, ಪ್ರಯಾಣಿಕರ ಪರದಾಟ
ಶುಕ್ರವಾರ ಮುಷ್ಕರ ಇತ್ತಾದರೂ ಕೆಲವು ಬಸ್‌ಗಳು ಸಂಚರಿಸಿದ್ದವು. ಆದರೆ ಶನಿವಾರ ಎಲ್ಲ ಸಿಬಂದಿಯೂ ಮುಷ್ಕರವನ್ನು ಬೆಂಬಲಿಸಿದ್ದರಿಂದ ಧರ್ಮಸ್ಥಳ ಘಟಕದಲ್ಲಿ 140 ಬಸ್‌ಗಳ ಪೈಕಿ 100 ನಿಲ್ದಾಣದಲ್ಲೇ ಉಳಿದಿದ್ದವು. ಪ್ರಯಾಣಿಕರ ಅನಿವಾರ್ಯತೆಯನ್ನು ಪ‌ರಿಗಣಿಸಿ ಧರ್ಮಸ್ಥಳ- ಮಂಗಳೂರು ನಡುವೆ 10 ಟ್ರಿಪ್‌ ನಡೆಸಿದ್ದು ಬಿಟ್ಟರೆ ಬೇರಾವುದೇ ಟ್ರಿಪ್‌ ಮಾಡಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ನಿಲ್ದಾಣದಲ್ಲೇ ಊಟ, ಉಪಾಹಾರ
ನೂರಾರು ಸಿಬಂದಿ ಮುಷ್ಕರ ಬೆಂಬಲಿಸಿ ಧರ್ಮಸ್ಥಳದಲ್ಲೇ ಉಳಿದಿದ್ದು, ಸ್ವತಃ ಬಾಣಸಿಗರಾಗಿ ಊಟ, ಉಪಾಹಾರ ವ್ಯವಸ್ಥೆ ಮಾಡಿಕೊಂಡರು. ಉಳಿದ ಪ್ರಯಾಣಿಕರಿಗೂ ಆಹಾರದ ವ್ಯವಸ್ಥೆ ಮಾಡಿದರು.

Advertisement

ಮುಷ್ಕರದಿಂದಾಗಿ ಬಸ್‌ಗಳು ಓಡಾಟ ನಡೆಸಿಲ್ಲ. ಕೊರೊನಾದಿಂದ ನಷ್ಟವಾಗಿತ್ತು. ಈಗ ಆದಾಯ ಮತ್ತಷ್ಟು ಕುಸಿದಿದೆ. ಲಕ್ಷ ದೀಪೋತ್ಸವಕ್ಕೆ ಹೆಚ್ಚುವರಿ ಬಸ್‌ ಹಾಕಬೇಕಿತ್ತಾದರೂ ಸಾಧ್ಯವಾಗಿಲ್ಲ.
-ಶಿವರಾಮ ನಾಯ್ಕ , ಘಟಕ ವ್ಯವಸ್ಥಾಪಕರು, ಧರ್ಮಸ್ಥಳ

ಮುಷ್ಕರದಿಂದ ಕಡಿತಗೊಂಡ ಸೇವೆ
100 ಟ್ರಿಪ್‌ ಧರ್ಮಸ್ಥಳ- ಮಂಗಳೂರು
196 ಟ್ರಿಪ್‌ಬೆಂಗಳೂರು, ಹುಬ್ಬಳ್ಳಿ, ಚಿಕ್ಕಮಗಳೂರು, ಇತರೆಡೆ
45 ಟ್ರಿಪ್‌ ಧರ್ಮಸ್ಥಳ-ಸುಬ್ರಹ್ಮಣ್ಯ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next