Advertisement

ಕೆಎಸ್‌ಆರ್‌ಟಿಸಿ ಸಿಬಂದಿ-ನೌಕರ ಒಕ್ಕೂಟ

11:26 AM Jan 29, 2018 | |

ಮಹಾನಗರ: ರಾಜ್ಯ ರಸ್ತೆ ಸಾರಿಗೆ ನಿಗಮದ ಆಡಳಿತ ವರ್ಗ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಕೆಎಸ್‌ಆರ್‌ಟಿಸಿ ಸಿಬಂದಿ ಮತ್ತು ನೌಕರರ ಒಕ್ಕೂಟವು ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿತು.

Advertisement

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಮಾತನಾಡಿ, ನಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಕಳೆದ ವರ್ಷ ಮನವಿ ಸಲ್ಲಿಸಲಾಗಿದ್ದರೂ ಬೇಡಿಕೆ ಈಡೇರಿಲ್ಲ. ಹೀಗಾಗಿ ಜ. 30ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಿವಿಧ ಬೇಡಿಕೆ
ಸಂಘದ ಕಾರ್ಯಕರ್ತರ ಅಕ್ರಮ ವರ್ಗಾವಣೆಗಳು ರದ್ದಾಗಬೇಕು. ಅದೇ ರೀತಿ ವಜಾಗೊಂಡಿರುವ ಕಾರ್ಯಕರ್ತರನ್ನು ಮರಳಿ ಸೇವೆಗೆ ಸೇರ್ಪಡೆಗೊಳಿಸ ಬೇಕು. ಬಿಎಂಟಿಸಿ ಮತ್ತು ವಾಯವ್ಯ ನಿಗಮಗಳ ಆಡಳಿತ ವರ್ಗವು ನೌಕರರಿಗೆ ಕೊಡಬೇಕಾದ ಗ್ರಾಚ್ಯುಯಿಟಿ ಹಣ, ಕಾರ್ಮಿಕರ ವೇತನದಿಂದ ಮುರಿದು ಕೊಳ್ಳಲಾಗಿರುವ ಜೀವವಿಮಾ ಸಂಸ್ಥೆಗಳ ಪ್ರೀಮಿಯಂ, ಸಾರಿಗೆ ನೌಕರರ ಸಹಕಾರಿ ಸಂಘಗಳ ಸಾಲ ಮರುಪಾವತಿ ಮತ್ತು ಡಿಆರ್‌ ಬಿಎಫ್‌, ರಜಾ ವೇತನ ಪಾವತಿ, ವೇತನ ಬಾಕಿ, ಮೆಡಿಕಲ್‌ ಬಿಲ್ಲುಗಳ ಬಾಕಿ, ಭವಿಷ್ಯ ನಿಧಿ ಬಾಕಿ ನೀಡಬೇಕು ಎಂದು ಆಗ್ರಹಿಸಿದರು.

ಕೈಗಾರಿಕಾ ಒಪ್ಪಂದ ಮತ್ತು ನ್ಯಾಯಾಧೀಕರಣದ ತೀರ್ಪನ್ನು ರದ್ದುಗೊಳಿಸಬೇಕು. ಕೈಗಾರಿಕಾ ಒಪ್ಪಂದದಂತೆ ಮಾನ್ಯತೆ ಪಡೆದಿರುವ ವಿಭಾಗೀಯ ಸಂಘಟನೆಗಳಿಗೆ ಪಾಸುಗಳನ್ನು ನೀಡಬೇಕು. ಎನ್‌ಐಎನ್‌ಸಿ ಪ್ರಕರಣಗಳಲ್ಲಿ ನಿರ್ವಾಹಕರಿಗೆ ಶಿಕ್ಷೆ ವಿಧಿಸ ಕೂಡದು ಸಹಿತ ಒಕ್ಕೂಟದ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಅವರು ಹೇಳಿದರು.

ಮನವಿ ಸಲ್ಲಿಕೆ
ಪ್ರತಿಭಟನೆಯ ಬಳಿಕ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಒಕ್ಕೂಟದ ಸಂಘಟನ ಕಾರ್ಯದರ್ಶಿ ಮುರಳಿ ಕುಮಾರ್‌, ಅಧ್ಯಕ್ಷ ಬಿ.ಕೆ. ಕೃಷ್ಣಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next