ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಅಳವಡಿಸಿಕೊಂಡಿರುವ ಪ್ರಯಾಣಿಕ ಸ್ನೇಹಿ ಉಪಕ್ರಮಗಳಿಗೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ನಗರ ಪ್ರದೇಶಗಳಲ್ಲಿ ನೀಡುತ್ತಿರುವ ಸಾರಿಗೆ ಸೇವೆಗಳನ್ನು ಗುರುತಿಸಿ ಹುಡ್ಕೊ, “ನಗರ ಸಾರಿಗೆ’ ವಿಭಾಗದಲ್ಲಿ ಕೆಎಸ್‌ಆರ್‌ಟಿಸಿಗೆ 2018-19ನೇ ಸಾಲಿನ “ಜೀವನಮಟ್ಟ ಸುಧಾರಿಸುವ ಉತ್ತಮ ಪರಿಕ್ರಮಗಳು’ ಪ್ರಶಸ್ತಿ ನೀಡಿದೆ.
ಪ್ರಶಸ್ತಿಯು ಒಂದು ಲಕ್ಷ ರೂ.ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ದೆಹಲಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರು ನಿಗಮದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಹುಡ್ಕೊ ಅಧ್ಯಕ್ಷ ಡಾ.ಎಂ.ರವಿಕಾಂತ್ ಪ್ರಶಸ್ತಿ ಪ್ರದಾನ ಮಾಡಿದರು.
ಅದೇ ರೀತಿ, ಭಾರತೀಯ ತೈಲ ನಿಗಮದ ಇಂಡಿಯನ್ ಆಯಿಲ್ ಟೈಮ್ಸ್ ನೌ ನೆಟ್‌ವರ್ಕ್ ವತಿಯಿಂದ ಅತ್ಯುತ್ತಮ ಪ್ರಯಾಣಿಕ ಸಾರಿಗೆ ಸಂಸ್ಥೆ (ಅಂತರ ನಗರ) ವಿಭಾಗದಲ್ಲಿ “ಐಒಎಲ್ ಟೈಮ್ಸ್ ನೌ ನೆಟ್‌ವರ್ಕ್ ಎಕ್ಸಲೆನ್ಸ್ ಪ್ರಶಸ್ತಿ’ ಲಭಿಸಿದೆ.
ದೆಹಲಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಮಿಹಿರ್ ಭಟ್, ಗುರಮಿತ್ ಸಿಂಗ್ ಅವರು, ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಮಹಿಳಾ ಸಾಧಕಿ ಪ್ರಶಸ್ತಿ: ಇದಲ್ಲದೆ, ಕೆಎಸ್‌ಆರ್‌ಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಟಿ.ಎಸ್.ಲತಾ ಅವರಿಗೆ ಇಂಡಿಯನ್ ಆಯಿಲ್ ಟೈಮ್ಸ್ ನೌ ನೆಟ್‌ವರ್ಕ್ ವತಿಯಿಂದ ರೋಡ್ ಲಾಜಿಸ್ಟಿಕ್ ಇಂಡಸ್ಟ್ರಿ ಇನ್ ಇಂಡಿಯಾ ವಿಭಾಗದಲ್ಲಿ “ಮಹಿಳಾ ಸಾಧಕಿ’ ಪ್ರಶಸ್ತಿ ಲಭಿಸಿದೆ.